ಟೋಕಿಯೊ ರೈಲಿನಲ್ಲಿ ಇರಿತ : 9 ಮಂದಿಗೆ ಗಾಯ

Update: 2021-08-07 03:41 GMT

ಟೋಕಿಯೊ: ಅಪರಾಧ ಕೃತ್ಯಗಳು ವಿರಳವಾಗಿರುವ ಟೋಕಿಯೊದಲ್ಲಿ ಶುಕ್ರವಾರ ಸಂಜೆ ಪ್ರಯಾಣಿಕ ರೈಲಿನಲ್ಲಿ ನಡೆದ ಇರಿತದ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 20ರ ಯುವತಿಯ ಸ್ಥಿತಿ ಗಂಭೀರವಾಗಿದೆ.

ಒಲಿಂಪಿಕ್ಸ್ ಆತಿಥ್ಯ ವಹಿಸಿರುವ ನಗರದಲ್ಲಿ ನಡೆದ ಈ ಘಟನೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆಯಲ್ಲಿ ಗಾಯಗೊಂಡ 20 ವರ್ಷ ಆಸುಪಾಸಿನ ಯುವತಿಗೆ ಗಂಭೀರ ಗಾಯಗಳಾಗಿವೆ ಎಂದು ಸಾರ್ವನಿಕ ಪ್ರಸಾರ ಸಂಸ್ಥೆಯಾದ ಎನ್‌ಎಚ್‌ಕೆ ವರದಿ ಮಾಡಿದೆ. ಒಲಿಂಪಿಕ್ ಈಕ್ವೇಸ್ಟ್ರಿಯನ್ ಸ್ಪರ್ಧೆಗಳು ನಡೆಯುತ್ತಿದ್ದ ತಾಣದಿಂದ ಹಲವು ಕಿಲೋಮೀಟರ್‌ಗಳ ದೂರದಲ್ಲಿ ಈ ಘಟನೆ ನಡೆದಿದೆ.

ಘಟನೆ ಬಗ್ಗೆ ಆಪರೇಟರ್‌ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಕ್ಷಣವೇ ರೈಲಿಗೆ ತುರ್ತು ನಿಲುಗಡೆ ನೀಡಲಾಯಿತು. ರೈಲಿನಲ್ಲಿ ಆರೋಪಿಗೆ ಸೇರಿದ್ದು ಎನ್ನಲಾದ ಒಂದು ಚಾಕು ಮತ್ತು ಮೊಬೈಲ್ ಪತ್ತೆಯಾಗಿದೆ.

20ರ ಆಸುಪಾಸಿನ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಮಳಿಗೆಯೊಂದಕ್ಕೆ ತೆರಳಿ ಅಲ್ಲಿನ ವ್ಯವಸ್ಥಾಪಕರಿಗೆ ತಾನು ದಾಳಿ ನಡೆಸಿದ್ದಾಗಿ ಯುವಕ ಹೇಳಿದ್ದಾನೆ. ಜಪಾನ್‌ ನಲ್ಲಿ ಬಂದೂಕು ಕಾನೂನುಗಳು ಕಟ್ಟುನಿಟ್ಟಾಗಿದ್ದು, ಅಪರಾಧಗಳು ವಿರಳ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News