ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಮಿಶ್ರ ಲಸಿಕೆ ಕೋವಿಡ್ ಪ್ರಭೇದಗಳ ವಿರುದ್ಧ ಹೆಚ್ಚಿನ ರಕ್ಷಣೆ ನೀಡುತ್ತದೆ: ಐಸಿಎಂಆರ್

Update: 2021-08-08 15:53 GMT

ಹೊಸದಿಲ್ಲಿ, ಆ.8: ಭಾರತದಲ್ಲಿ ಲಭ್ಯವಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಸಂಯೋಜನೆಯು ಕೊರೋನವೈರಸ್ ವಿರುದ್ಧ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವಲ್ಲಿ ಉತ್ತಮ ಫಲಿತಾಂಶವನ್ನು ನೀಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ನಡೆಸಿದ ಅಧ್ಯಯನವು ತೋರಿಸಿದೆ.

‌ಈ ವರ್ಷದ ಮೇ ಮತ್ತು ಜೂನ್ ನಡುವೆ ಉತ್ತರ ಪ್ರದೇಶದಲ್ಲಿ ಈ ಅಧ್ಯಯನವನ್ನು ನಡೆಸಲಾಗಿತ್ತು. ಅಡೆನೊವೈರಸ್ ವೆಕ್ಟರ್ ಆಧಾರಿತ ಲಸಿಕೆಯ ಬಳಿಕ ನಿಷ್ಕ್ರಿಯಗೊಳಿಸಲಾದ ಸಂಪೂರ್ಣ ವೈರಸ್ ಲಸಿಕೆಯ ಸಂಯೋಜನೆಯು ಸುರಕ್ಷಿತ ಮಾತ್ರವಲ್ಲ,ಕೋವಿಡ್ನ ವಿವಿಧ ಪ್ರಭೇದಗಳ ವಿರುದ್ಧ ಉತ್ತಮ ನಿರೋಧಕತೆಯನ್ನೂ ಸೃಷ್ಟಿಸಿದೆ ಎಂದು ಅಧ್ಯಯನ ವರದಿಯು ತಿಳಿಸಿದೆ.
ಇಂತಹ ಮಿಶ್ರ ಲಸಿಕೆಗಳ ನೀಡಿಕೆಯು ನಿರ್ದಿಷ್ಟ ಲಸಿಕೆಯ ಕೊರತೆಯ ಸವಾಲನ್ನು ಎದುರಿಸಲು ನೆರವಾಗುವ ಜೊತೆಗೆ,ವಿವಿಧ ಲಸಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಜನರಲ್ಲಿ ಮನೆಮಾಡಿರುವ ಅಳುಕನ್ನೂ ನಿವಾರಿಸುತ್ತದೆ ಎಂದು ವರದಿಯು ಹೇಳಿದೆ.


ಐಸಿಎಂಆರ್ ಅಧ್ಯಯನದ ಬಗ್ಗೆ ಇನ್ನಷ್ಟೇ ತಜ್ಞರು ಪುನರ್ ಪರಿಶೀಲನೆ ನಡೆಸಬೇಕಿದೆ.


ಜು.30ರಂದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (ಸಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ)ಯ ವಿಷಯ ತಜ್ಞರ ಸಮಿತಿಯು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಡೋಸ್ಗಳನ್ನು ಮಿಶ್ರಗೊಳಿಸಿ ಬಳಸುವ ಬಗ್ಗೆ ಅಧ್ಯಯನಕ್ಕೆ ಶಿಫಾರಸು ಮಾಡಿತ್ತು. ಈ ಬಗ್ಗೆ ಸಿಎಂಸಿ ಕ್ಲಿನಿಕಲ್ ಟ್ರಯಲ್ ನಡೆಸಬೇಕು ಎಂದೂ ಅದು ಶಿಫಾರಸು ಮಾಡಿತ್ತು.


ಡಬ್ಲುಎಚ್ಒ ಏನು ಹೇಳುತ್ತದೆ?

ಈ ವರ್ಷದ ಜುಲೈನಲ್ಲಿ ವಿಭಿನ್ನ ತಯಾರಕರಿಂದ ಕೋವಿಡ್ ಲಸಿಕೆಗಳ ಸಂಯೋಜನೆಯ ವಿರುದ್ಧ ಎಚ್ಚರಿಕೆ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು,ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಮತ್ತು ಪುರಾವೆಗಳು ಲಭ್ಯವಿಲ್ಲದ್ದರಿಂದ ಇದೊಂದು ‘ಅಪಾಯಕಾರಿ ಪ್ರವೃತ್ತಿ ’ಯಾಗಿದೆ ಎಂದು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News