ಒಲಿಂಪಿಕ್ ಪದಕ ವಿಜೇತರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದ ವಿಮಾನ ಯಾನ ಸಂಸ್ಥೆಗಳು

Update: 2021-08-08 16:32 GMT

ಹೊಸದಿಲ್ಲಿ, ಆ. 8: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಎಲ್ಲಾ 6 ಭಾರತೀಯ ಅಥ್ಲೀಟ್‌ ಗಳಿಗೆ ಹಾಗೂ ಪುರುಷರ ಹಾಕಿ ತಂಡಕ್ಕೆ ‘ಗೋ ಫಸ್ಟ್‌ʼ ಹಾಗೂ ‘ಸ್ಟಾರ್ ಏರ್‘ರವಿವಾರ ಉಚಿತ ಪ್ರಯಾಣದ ಕೊಡುಗೆಯನ್ನು ಘೋಷಿಸಿದೆ.

ಈ ಹಿಂದೆ ‘ಗೋ ಎಯರ್’ ಎಂದು ಕರೆಯಲಾಗುತ್ತಿದ್ದ ‘ಗೋ ಫಸ್ಟ್’ ಅಥ್ಲೀಟ್‌ ಗಳಿಗೆ ಮುಂದಿನ ಐದು ವರ್ಷಗಳ ಕಾಲ ಉಚಿತ ವಿಮಾನ ಪ್ರಯಾಣದ ಕೊಡುಗೆ ನೀಡಲಿದೆ. ‘‘ಪದಕ ವಿಜೇತರಿಗೆ ಜೀವತಾವಧಿ ವಿಮಾನ ಪ್ರಯಾಣದ ಕೊಡುಗೆ ನೀಡಲಾಗುವುದು’’ ಎಂದು ಭಾರತದ 13 ನಗರಗಳನ್ನು ಸಂಪರ್ಕಿಸುವ ಪ್ರಾದೇಶಿಕ ವಿಮಾನ ಯಾನ ಸಂಸ್ಥೆ ‘ಸ್ಟಾರ್ ಏರ್’ ಹೇಳಿದೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಶನಿವಾರ ಬಂಗಾರದ ಪದಕ ಗೆದ್ದ ಬಳಿಕ ನೀರಜ್ ಚೋಪ್ರಾ ಅವರಿಗೆ ಒಂದು ವರ್ಷಗಳ ಕಾಲ ಅನಿಯಮಿತ ಪ್ರಯಾಣದ ಕೊಡುಗೆಯನ್ನು ಇಂಡಿಗೋ ವಾಯು ಯಾನ ಸಂಸ್ಥೆ ಘೋಷಿಸಿತ್ತು. ರವಿವಾರ ನೀಡಿದ ಹೇಳಿಕೆಯಲ್ಲಿ ‘ಗೋ ಫಸ್ಟ್’, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ 7 ಪದಕಗಳನ್ನು ಪಡೆದಿರುವುದನ್ನು ಸಂಭ್ರಮಿಸಲು ಎಲ್ಲಾ ಪದಕ ವಿಜೇತರಿಗೆ 2025ರ ವರೆಗೆ 5 ವರ್ಷಗಳ ಕಾಲ ಉಚಿತ ವಿಮಾನ ಪ್ರಯಾಣದ ಕೊಡುಗೆ ನೀಡಲಾಗುವುದು ಎಂದಿದೆ.

‘‘7 ಮಂದಿ ಒಲಿಂಪಿಕ್ ಪದಕ ವಿಜೇತರಾದ ಮೀರಾಬಾಯಿ ಚಾನು (ವೈಟ್ ಲಿಫ್ಟಿಂಗ್), ಪಿ.ವಿ. ಸಿಂಧು (ಬ್ಯಾಡ್ಮಿಂಟನ್), ಲೋವ್ಲಿನಾ ಬೊರ್ಗೋಹೈನ್ (ಬಾಕ್ಸಿಂಗ್), ಪುರುಷರ ಹಾಕಿ ತಂಡ, ರವಿ ಕುಮಾರ್ ದಹಿಯಾ (ಕುಸ್ತಿ), ಬಜರಂಗ್ ಪುನಿಯಾ (ಕುಸ್ತಿ), ಬಂಗಾರದ ಪದಕ ವಿಜೇತ ನೀರಜ್ ಚೋಪ್ರಾ (ಜಾವ್ಲಿನ್ ಥ್ರೋ) ಮೊದಲಾದವರಿಗೆ ಮುಂದಿನ 5 ವರ್ಷಗಳ ಕಾಲ ಗೋ ಫಸ್ಟ್ ನ ಯಾವುದೇ ವಿಮಾನದಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುವುದು’’ ಎಂದು ‘ಗೋ ಫಸ್ಟ್’ ಹೇಳಿದೆ. ರವಿವಾರ ಹೇಳಿಕೆ ನೀಡಿದ ‘ಸ್ಟಾರ್ ಏರ್’, ಟೋಕಿಯೊ ಒಲಿಂಪಿಕ್ ಚಾಂಪಿಯನ್ ಗಳಿಗೆ ಜೀವಿತಾವಧಿ ಉಚಿತ ವಿಮಾನ ಪ್ರಯಾಣ ಸೌಲಭ್ಯ ನೀಡುವುದು ನಮ್ಮ ಹಕ್ಕು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News