ನ್ಯಾಯಾಧೀಶರ ಹತ್ಯೆ ಪ್ರಕರಣ: ಜಾರ್ಖಂಡ್ ಹೈಕೋರ್ಟ್ ನಿಂದ ತನಿಖೆಯ ಮೇಲ್ವಿಚಾರಣೆ; ಸುಪ್ರೀಂ
Update: 2021-08-09 22:39 IST
ಹೊಸದಿಲ್ಲಿ, ಆ. 9: ಧನ್ಬಾದ್ ನಲ್ಲಿ ನಡೆದ ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆ ಜಾರ್ಖಂಡ್ ಉಚ್ಚ ನ್ಯಾಯಾಲಯ ಮೇಲ್ವಿಚಾರಣೆಯಲ್ಲಿ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ. ಪ್ರಕರಣದ ಸ್ಥಿತಿಗತಿ ವರದಿಯನ್ನು ಸಿಬಿಐ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಿಬಿಐ ಸಲ್ಲಿಸಿದ ಮೊಹರು ಮಾಡಲಾದ ಕವರಿನಲ್ಲಿರುವ ವರದಿ ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ, ಮೊಹರು ಮಾಡಲಾದ ಕವರಿನಲ್ಲಿ ಏನೂ ಇಲ್ಲ. ನಾವು ಬಂಧನ ಹಾಗೂ ವಶಪಡಿಸಿಕೊಳ್ಳಲಾದ ವಾಹನಗಳು ಮೊದಲಾದ ಸದೃಢ ಆಧಾರವನ್ನು ಬಯಸುತ್ತೇವೆ. ವಾಹನ ಡಿಕ್ಕಿ ಮಾಡಿದ ಉದ್ದೇಶದ ಬಗ್ಗೆ ನೀವು (ನೀವು) ಏನನ್ನೂ ಸೂಚಿಸಿಲ್ಲ ಎಂದಿತು. ಸಿಬಿಐ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತನಿಖೆ ಮುಂದುವರಿದಿದೆ. ಕೆಲವರನ್ನು ಬಂಧಿಸಲಾಗಿದೆ. ಆದರೆ, ಈ ಸಂದರ್ಭ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.