ನಟ ಪ್ರಕಾಶ್ ರೈಗೆ ಗಾಯ, ಹೈದರಾಬಾದ್ ನಲ್ಲಿ ಶಸ್ತ್ರಚಿಕಿತ್ಸೆ
ಹೈದರಾಬಾದ್:ಬಹುಭಾಷಾ ನಟ ಪ್ರಕಾಶ್ ರೈ ಅವರು ಚಿತ್ರೀಕರಣದ ವೇಳೆ ಬಿದ್ದು ಗಾಯವಾಗಿದೆ. ಮಂಗಳವಾರ ಟ್ವಿಟರ್ ನಲ್ಲಿ ಸ್ವತಃ ರೈ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಪಾಯದಿಂದ ಪಾರಾಗಿರುವ ಪ್ರಕಾಶ್ ಅವರು ಸದ್ಯ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ.
ಮೂಲಗಳ ಪ್ರಕಾರ ಧನುಷ್ ನಟನೆಯ ಹೊಸ ಸಿನಿಮಾದಲ್ಲಿ ರೈ ನಟಿಸುತ್ತಿದ್ದರು. ಚೆನ್ನೈನಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಆಯ ತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಕೂಡಲೆ ಚೆನ್ನೈನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದ ನಂತರ ಪ್ರಕಾಶ್ ರೈ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್ ವಿಮಾನ ಏರಿದ್ದಾರೆ.
ಚಿಂತೆ ಮಾಡಲು ಏನೂ ಇಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ ರೈ, ತನಗಾಗಿ ಪ್ರಾರ್ಥನೆ ಮಾಡುವಂತೆ ಕೇಳಿಕೊಂಡರು. ಪ್ರಕಾಶ್ ರೈ ಕೊನೆಯ ಬಾರಿಗೆ ಎಧಿರಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
"ಬಿದ್ದ ಪರಿಣಾಮ ಒಂದು ಸಣ್ಣ ಪೆಟ್ಟಾಗಿದೆ. ಶಸ್ತ್ರಚಿಕಿತ್ಸೆಗಾಗಿ ನನ್ನ ಸ್ನೇಹಿತ ಡಾ. ಗುರುವರೆಡ್ಡಿ ಅವರ ಬಳಿ ಹೈದರಾಬಾದ್ ಗೆ ಹೋಗುತ್ತಿರುವೆ. ನಾನು ಚೆನ್ನಾಗಿದ್ದೇನೆ . ಚಿಂತೆ ಮಾಡಬೇಡಿ. ನನಗಾಗಿ ಪ್ರಾರ್ಥಿಸಿ’’ ಎಂದು ಪ್ರಕಾಶ್ ಟ್ವೀಟಿಸಿದ್ದಾರೆ.
ಗಾಯಗೊಂಡಿರುವ ಪ್ರಕಾಶ್ ರೈ ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ಚಿತ್ರರಂಗದ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಹಾರೈಸುತ್ತಿದ್ದಾರೆ.