ಕೊರೋನ ಪರೀಕ್ಷೆಯಲ್ಲಿ ಇನ್ನೂ ಉತ್ತೀರ್ಣವಾಗದ ಸರಕಾರ!

Update: 2021-08-11 16:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನವನ್ನು ಎದುರಿಸಲು ನಮ್ಮ ಸರಕಾರ ವೈದ್ಯರನ್ನು ನಂಬಿದ್ದಕ್ಕಿಂತ ಪೊಲೀಸರನ್ನು ನಂಬಿದ್ದೇ ಹೆಚ್ಚು. ಒಬ್ಬನಲ್ಲಿ ಕೊರೋನ ಪಾಸಿಟಿವ್ ಇದೆಯೋ, ಇಲ್ಲವೋ ಎನ್ನುವುದನ್ನು ಪರೀಕ್ಷಿಸುವ ಹೊಣೆಗಾರಿಕೆಯೊಂದು ಬಿಟ್ಟರೆ, ಉಳಿದಂತೆ ಭಾರತದಲ್ಲಿ ಕೊರೋನವನ್ನು ಇಂದಿಗೂ ನಿಯಂತ್ರಿಸುತ್ತಿರುವುದು ಪೊಲೀಸರು. ಜನತಾ ಕರ್ಫ್ಯೂ, ಲಾಕ್‌ಡೌನ್ ಮೊದಲಾದ ಹೆಸರಲ್ಲಿ ಕೊರೋನವನ್ನು ನಾವು ಕಳೆದ ಎರಡು ವರ್ಷಗಳಿಂದ ಲಾಠಿಗಳ ಮೂಲಕವೇ ಎದುರಿಸುತ್ತಿದ್ದೇವೆ. ಆದರೆ ಕೊರೋನಕ್ಕೆ ಬೀಳುವ ಪೆಟ್ಟುಗಳೆಲ್ಲ ಜನಸಾಮಾನ್ಯರ ತಲೆಮೇಲೆ ಬೀಳುತ್ತಿವೆ. ಇಂದಿಗೂ ಆಕ್ಸಿಜನ್, ಪ್ರಯೋಗಾಲಯ, ವೆಂಟಿಲೇಟರ್, ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದರಲ್ಲಿ ಇರುವ ನಂಬಿಕೆಗಿಂತ ಸರಕಾರಕ್ಕೆ ಲಾಕ್‌ಡೌನ್ ಮೇಲೆ ಹೆಚ್ಚು ನಂಬಿಕೆಯಿದೆ. ಆದುದರಿಂದಲೇ, ಕೊರೋನ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದ ಹಾಗೆಯೇ ಸರಕಾರ ‘ಲಾಕ್‌ಡೌನ್’ ಬೆದರಿಕೆಯನ್ನು ಒಡ್ಡುತ್ತದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಕೊರೋನ ಹೆಚ್ಚುವುದಕ್ಕೆ ನಿಜವಾದ ಕಾರಣಗಳೇನು, ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳಿಗೆ ತಾನು ನೀಡಿದ ಕೊಡುಗೆಗಳೇನು, ಎರಡನೆ ಅಲೆಯ ಹೊತ್ತಿನಲ್ಲಾದರೂ ಅಗತ್ಯಕ್ಕೆ ತಕ್ಕಂತೆ ವೆಂಟಿಲೇಟರ್, ಆಕ್ಸಿಜನ್‌ಗಳ ಪೂರೈಕೆದೆಯೇ ಎಂಬೆಲ್ಲ ಪ್ರಶ್ನೆಗಳಿಗೆ ಸರಕಾರದ ಬಳಿ ಉತ್ತರವಿಲ್ಲ.

ಎರಡನೇ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಆಕ್ಸಿಜನ್ ಕೊರತೆಯಿಂದ ಪ್ರಾಣ ಬಿಟ್ಟವರ ಅಂಕಿ-ಅಂಶಗಳ ಬಗ್ಗೆಯೇ ಕೇಂದ್ರ ಸರಕಾರದ ಬಳಿ ಮಾಹಿತಿಗಳಿಲ್ಲ. ಅಂದರೆ ನಮ್ಮ ಸರಕಾರ ಮೂರನೇ ಅಲೆಯನ್ನು ಕೂಡ ಲಾಕ್‌ಡೌನ್ ಮತ್ತು ಪೊಲೀಸ್ ಇಲಾಖೆಯ ಮೂಲಕವೇ ಎದುರಿಸಲು ಮುಂದಾಗಿದೆಯೆನ್ನುವುದನ್ನು ಇದು ಹೇಳುತ್ತಿದೆ. ಭಾರತದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿಯು ಆರಂಭಗೊಂಡ ಒಂದೂವರೆ ವರ್ಷದ ಬಳಿಕವೂ ಪ್ರತಿ ಐದು ಜಿಲ್ಲೆಗಳ ಪೈಕಿ ಎರಡರಲ್ಲಿ ಕೋವಿಡ್-19 ಸೋಂಕನ್ನು ಪತ್ತೆಹಚ್ಚುವ ಪ್ರಮಾಣಿತ ವಿಧಾನವಾದ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸುವ ಸೌಲಭ್ಯಗಳಿಲ್ಲವೆಂಬ ಆಘಾತಕಾರಿ ವಿಷಯವನ್ನು ಭಾರತೀಯ ವೈದ್ಯಕೀಯ ಮಂಡಳಿಯ ದತ್ತಾಂಶಗಳು ಬಹಿರಂಗಪಡಿಸಿವೆ. ಅಷ್ಟು ಮಾತ್ರವಲ್ಲ ಭಾರತದ 742 ಜಿಲ್ಲೆಗಳ ಪೈಕಿ 342 ಜಿಲ್ಲೆಗಳಲ್ಲಿ ಯಾವುದೇ ಆರ್‌ಟಿಪಿಸಿಆರ್ ಸರಕಾರಿ ಪ್ರಯೋಗಾಲಯಗಳಿಲ್ಲ. 306 ಜಿಲ್ಲೆಗಳಲ್ಲಿ ಸರಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳೆರಡೂ ಇಲ್ಲ. ಈ ದೇಶದಲ್ಲಿ ಕೊರೋನವನ್ನು ಎದುರಿಸುವಲ್ಲಿ ಎದುರಾಗುವ ಅತಿ ದೊಡ್ಡ ಸಮಸ್ಯೆಯೇ ಕೊರೋನ ಪರೀಕ್ಷೆ.

ಇಂದಿಗೂ ಕೊರೋನ ಪರೀಕ್ಷೆಗಳ ವರದಿಗಳು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ತಕ್ಷಣ ವರದಿಗಳು ಸಿಗುವುದಿಲ್ಲ, ಕೆಲವೊಮ್ಮೆ ಪಾಸಿಟಿವ್ ಇದ್ದವರಿಗೆ ನೆಗೆಟಿವ್, ನೆಗೆಟಿವ್ ಇದ್ದವರಿಗೆ ಪಾಸಿಟಿವ್ ವರದಿಗಳು ಸಿಕ್ಕು ಗೊಂದಲ ಸೃಷ್ಟಿಯಾಗುತ್ತದೆೆ. ಇವೆಲ್ಲದರ ಹಿಂದಿರುವುದು, ಈ ದೇಶದಲ್ಲಿ ವ್ಯವಸ್ಥಿತ ಪ್ರಯೋಗಾಲಯಗಳ ಕೊರತೆ. ಜಿಲ್ಲಾ ಕೇಂದ್ರಗಳನ್ನು ಹೊರತು ಪಡಿಸಿದರೆ, ಇನ್ನಿತರ ಪ್ರದೇಶಗಳಲ್ಲಿ ಕೊರೋನ ಪರೀಕ್ಷೆಯ ಗೊಂದಲಗಳೇ ಕೊರೋನ ಹರಡುವುದಕ್ಕೆ ಕಾರಣವಾಗುತ್ತಿದೆ. 2020ರ ಮಾರ್ಚ್ ವೇಳೆಗೆ ದೇಶದಲ್ಲಿ ಕೊರೋನ ಸೋಂಕಿನ ಪರೀಕ್ಷೆಗೆ ಕೇವಲ 65 ಸರಕಾರಿ ಪ್ರಯೋಗಾಲಯಗಳಿದ್ದವು. ಅವು ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕೇವಲ ಐದು ಪರೀಕ್ಷೆಗಳನ್ನು ಮಾತ್ರವೇ ನಡೆಸಲು ಯಶಸ್ವಿಯಾಗಿದ್ದವು. ತದನಂತರ ಕ್ರಮೇಣ ಪರಿಸ್ಥಿತಿಯಲ್ಲಿ ಸುಧಾರಣೆಯಾಗತೊಡಗಿತು. ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ 3.5 ಲಕ್ಷ ಮಂದಿಗೆ ಪರೀಕ್ಷೆಯನ್ನು ನಡೆಸಲು ಸಾಧ್ಯವಾಯಿತು. ಆಗಸ್ಟ್ 9ರವರೆಗೆ 48.17 ಕೋಟಿ ಪರೀಕ್ಷೆಗಳನ್ನು ನಡೆಸಲಾಯಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ಐಸಿಎಂಆರ್) ಅನುಮೋದನೆ ಪಡೆದ ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು ಜುಲೈ 31ರ ವೇಳೆಗೆ 2,808ಕ್ಕೆ ವಿಸ್ತರಿಸಲಾಯಿತು. ಆದರೆ ಕೇವಲ 1,717 ಪ್ರಯೋಗಾಲಯಗಳ ಪೈಕಿ ಸರಕಾರದ 625 ಹಾಗೂ ಖಾಸಗಿ ವಲಯದ 1,092 ಪ್ರಯೋಗಾಲಯಗಳು ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಸುಸಜ್ಜಿತವಾಗಿವೆ. ಉಳಿದ 1,091 ಪ್ರಯೋಗಾಲಯಗಳು ದುಬಾರಿಯಾದ ಸಿಬಿಎನ್‌ಎಎಟಿ, ಟ್ರೂಎನ್‌ಎಟಿ ಅಥವಾ ಮಾಲೆಕ್ಯೂಲರ್ ನ್ಯೂಕ್ಲಿಕ್ ಆ್ಯಸಿಡ್ ಪರೀಕ್ಷೆಗಳನ್ನು ಮಾತ್ರವೇ ನಡೆಸುತ್ತವೆ.

ಭಾರತದಲ್ಲಿ ಬಹುತೇಕ ಆರ್‌ಟಿಪಿಸಿಆರ್ ಪ್ರಯೋಗಾಲಯಗಳು ನಗರಪ್ರದೇಶಗಳಲ್ಲಿವೆ. ಆದರೂ ಈ ವರ್ಷದ ಬೇಸಿಗೆಯಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆ ಆರಂಭವಾದಾಗ ಆರ್‌ಟಿಪಿಸಿಆರ್ ಪ್ರಯೋಗಾಲಯಗಳ ಕೊರತೆಯ ಬಿಸಿ ನಗರಪ್ರದೇಶಗಳಿಗೂ ತಟ್ಟಿತು. ಇನ್ನು ಗ್ರಾಮಾಂತರ ಪ್ರದೇಶಗಳ ಪರಿಸ್ಥಿತಿಯಂತೂ ಅತ್ಯಂತ ಶೋಚನೀಯವಾಗಿದೆ. ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಕರ್ನಾಟಕ, ಗೋವಾ, ಗುಜರಾತ್ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಹಾಗೂ ಲಡಾಖ್‌ಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 1 ಆರ್‌ಟಿಪಿಸಿಆರ್ ಸೌಲಭ್ಯಗಳಿವೆ.ಇದಕ್ಕೆ ವ್ಯತಿರಿಕ್ತವಾಗಿ ಅಸ್ಸಾಮಿನ 33 ಜಿಲ್ಲೆಗಳ ಪೈಕಿ 8 ಮಾತ್ರ ಆರ್‌ಟಿಪಿಸಿಆರ್ ಸೌಲಭ್ಯಗಳನ್ನು ಹೊಂದಿವೆ. ಅರುಣಾಚಲ ಪ್ರದೇಶದ 25 ಜಿಲ್ಲೆಗಳ ಪೈಕಿ ಎರಡು ಜಿಲ್ಲೆಗಳು, ಮೇಘಾಲಯದ 9 ಜಿಲ್ಲೆಗಳ ಪೈಕಿ 2, ಮಣಿಪುರದ 16 ಜಿಲ್ಲೆಗಳ ಪೈಕಿ 2 ಹಾಗೂ ಮಿಜೋರಾಮಿನ 11 ಜಿಲ್ಲೆಗಳ ಪೈಕಿ ಒಂದು ಮಾತ್ರ ಆರ್‌ಟಿಪಿಸಿಆರ್ ಪ್ರಯೋಗಾಲಯದ ಭಾಗ್ಯವನ್ನು ಹೊಂದಿವೆ. ಇದು ಈಶಾನ್ಯಭಾರತದ ರಾಜ್ಯಗಳ ಕತೆಯಾದರೆ, ಉತ್ತರ ಭಾರತದ ರಾಜ್ಯಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮಧ್ಯಪ್ರದೇಶದ 52 ಜಿಲ್ಲೆಗಳ ಪೈಕಿ 35,ಬಿಹಾರದ 38 ಜಿಲ್ಲೆಗಳಲ್ಲಿ 25, ಛತ್ತೀಸ್‌ಗಡದ 28 ಜಿಲ್ಲೆಗಳ ಪೈಕಿ 18, ಜಾರ್ಖಂಡ್‌ನ 16 ಜಿಲ್ಲೆಗಳ ಪೈಕಿ 24, ಒಡಿಶಾದ 30 ಜಿಲ್ಲೆಗಳ ಪೈಕಿ 1, ಜಮ್ಮು-ಕಾಶ್ಮೀರದ 20 ಜಿಲ್ಲೆಗಳ ಪೈಕಿ 12 ಆರ್‌ಟಿಪಿಸಿಆರ್ ಪ್ರಯೋಗಾಲಯದ ಸೌಲಭ್ಯವನ್ನು ಹೊಂದಿರುವುದಿಲ್ಲ. ಭಾರತದ ಅತ್ಯಧಿಕ ಜನಸಂಖ್ಯೆಯಿರುವ ರಾಜ್ಯವಾದ ಉತ್ತರಪ್ರದೇಶದಲ್ಲಿ 75 ಜಿಲ್ಲೆಗಳ ಪೈಕಿ 27ರಲ್ಲಿ ಆರ್‌ಟಿಪಿಸಿಆರ್ ಪ್ರಯೋಗಾಲಯಗಳಿಲ್ಲ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫೆಬ್ರವರಿ ತಿಂಗಳಲ್ಲಿ ಬಜೆಟ್ ಭಾಷಣದಲ್ಲಿ ಕೇಂದ್ರ ಸರಕಾರವು ಎಲ್ಲಾ ಜಿಲ್ಲೆಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಹಾಗೂ 11 ರಾಜ್ಯಗಳಲ್ಲಿ 3,382 ಬ್ಲಾಕ್ ಮಟ್ಟದ ಸಾರ್ವಜನಿಕ ಆರೋಗ್ಯ ಘಟಕಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ ಕೊರೋನ ಮೂರನೇ ಅಲೆಯ ಭೀತಿಯನ್ನು ಭಾರತ ಎದುರಿಸುತ್ತಿರುವ ಹೊರತಾಗಿಯೂ ದೇಶದಲ್ಲಿ ಆರ್‌ಟಿಪಿಸಿಆರ್ ಪ್ರಯೋಗಾಲಯಗಳ ಸ್ಥಾಪನೆ ಹೆಚ್ಚಿನ ವೇಗವನ್ನು ಪಡೆದುಕೊಂಡಿಲ್ಲ. ಸರಕಾರ ತನ್ನ ಬಜೆಟ್ ಆಶ್ವಾಸನೆಯನ್ನು ಈಡೇರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪೊಲೀಸರನ್ನು ಬಳಸಿಕೊಂಡು ಸರಕಾರಕ್ಕೆ ಜನಸಾಮಾನ್ಯರನ್ನು ಬೆದರಿಸಲು ಸಾಧ್ಯವೇ ಹೊರತು, ಕೊರೋನ ವೈರಸ್‌ನ್ನು ಬೆದರಿಸಲು ಸಾಧ್ಯವಿಲ್ಲ. ಕೊರೋನವನ್ನು ಎದುರಿಸುವ ಪ್ರಾಥಮಿಕ ಅಗತ್ಯಗಳ ಕಡೆಗೆ ಗಮನ ಹರಿಸದೆ, ಲಾಕ್‌ಡೌನ್ ಮೂಲಕ ಕೊರೋನವನ್ನು ಗೆಲ್ಲಲು ಹೊರಡುವುದರಿಂದ ಸಮಸ್ಯೆ ಬಗೆಹರಿಯದು. ಬದಲಿಗೆ ಲಾಕ್‌ಡೌನ್‌ನಿಂದ ಬಡತನ, ಹಸಿವು ಇನ್ನಷ್ಟು ಹೆಚ್ಚಳಗೊಂಡು ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು. ಮೂರನೇ ಅಲೆ ದೇಶವನ್ನು ಇನ್ನಷ್ಟು ದಯನೀಯ ಸ್ಥಿತಿಗೆ ತಳ್ಳುವ ಮೊದಲೇ ಸರಕಾರ ಎಚ್ಚೆತ್ತುಕೊಳ್ಳಬೇಕು. ಕೊರೋನ ಪರೀಕ್ಷೆಯಲ್ಲಿ ಎರಡು ಬಾರಿ ಡುಮ್ಕಿ ಹೊಡೆದಿರುವ ಸರಕಾರ, ಮೂರನೇ ಪ್ರಯತ್ನದಲ್ಲಾದರೂ ಯಶಸ್ವಿಯಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News