ಪೋಕ್ಸೊ: ವಯೋಮಿತಿ ಇಳಿಕೆಗೆ ಒತ್ತಡ ಹೇರದಿರಲು ಸಂಸದೀಯ ಸಮಿತಿ ನಿರ್ಧಾರ

Update: 2021-08-11 19:25 GMT

ಹೊಸದಿಲ್ಲಿ: ಪೋಕ್ಸೊ ಕಾಯ್ದೆ ಅಡಿಯ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಯೋಮಿತಿಯನ್ನು 18 ವರ್ಷದಿಂದ 16 ವರ್ಷಕ್ಕೆ ಇಳಿಸಲು ಒತ್ತಡ ಹೇರದಿರಲು ಸಂಸದೀಯ ಸಮಿತಿ ನಿರ್ಧರಿಸಿದೆ.

18 ವರ್ಷದ ಒಳಗಿನ ವಯೋಮಾನದವರು ಮಾಡುವ ಹೀನಾಯ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಈಗಿರುವ ಕಾನೂನುಗಳೇ ಸಾಕು ಎಂದು ಸರಕಾರ ಪ್ರತಿಪಾದಿಸಿದ ನಂತರ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ, ಪೋಕ್ಸೊ ಕಾಯ್ದೆಯಡಿ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾದರೂ ಕಾಯ್ದೆಯನ್ನು ಅನ್ವಯಿಸಲು ಸಾಧ್ಯವಾಗದ ವಯಸ್ಸಿನ ಆರೋಪಿಗಳು ಹಲವು ಪ್ರಕರಣಗಳಲ್ಲಿ ಇದ್ದಾರೆ ಎಂದು ಹೇಳಿತ್ತು. ಅಪ್ರಾಪ್ತ ವಯಸ್ಸಿನ ಮಕ್ಕಳು ಮಾಡುವ ಅಪರಾಧಗಳನ್ನು ಈ ಹಂತದಲ್ಲಿ ನಿಯಂತ್ರಿಸದೇ ಇದ್ದರೆ, ಅವರು ಇನ್ನಷ್ಟು ಗಂಭೀರ ಹಾಗೂ ಹೀನಾಯ ಅಪರಾಧ ಎಸಗುವ ಸಾಧ್ಯತೆ ಇದೆ. ಆದುದರಿಂದ ಈ ನಿಯಮವನ್ನು ಮರು ಪರಿಶೀಲಿಸುವ ಅಗತ್ಯತೆ ಇದೆ ಎಂದು ಸಮಿತಿ ಹೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಪೋಕ್ಸೊ ಅಡಿಯ ಅಪರಾಧದ ಆರೋಪಿ ಮಕ್ಕಳಿಗೆ ಪುನಶ್ಚೇತನ ನ್ಯಾಯದ ತತ್ವ ಆಧಾರವಾಗಿರುವ ಜೆಜೆ ಕಾಯ್ದೆ-2015ರ ನಿಯಮದ ಅಡಿಯಲ್ಲಿ ರಕ್ಷಣೆಯಿದೆ. ಜೆಜೆ ಕಾಯ್ದೆ-2015 ಕಾನೂನಿನೊಂದಿಗೆ ಮಕ್ಕಳ ಘರ್ಷಣೆಯ ಕುರಿತು ನಿರ್ಧರಿಸಲು ಬಾಲ ನ್ಯಾಯ ಮಂಡಳಿಗೆ ಅವಕಾಶ ನೀಡುತ್ತದೆ. ಅದು ಮಕ್ಕಳು ಮಾಡುವ ಅಪರಾಧವನ್ನು ಸಣ್ಣ, ಗಂಭೀರ, ಹೀನಾಯ ಅಪರಾಧ ಎಂದು ವಿಂಗಡಿಸುತ್ತದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News