ಮುಂದಿನ ವರ್ಷದ ಜು.1ರಿಂದ ಕಪ್, ಪ್ಲೇಟ್ ಇತ್ಯಾದಿ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಯೇ ಬಂದ್

Update: 2021-08-13 17:52 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ ,ಆ.13: ಕಪ್ ಗಳು,ಪ್ಲೇಟ್ ಗಳು ಹಾಗೂ ಚಮಚ, ಮುಳ್ಳು ಚಮಚ, ಸ್ಟ್ರಾನಂತಹ ಕಟ್ಲರಿ ಇತ್ಯಾದಿಗಳು ಸೇರಿದಂತೆ ಪಾಲಿಸ್ಟಿರೀನ್ ಮತ್ತು ಹಿಗ್ಗಿಸಿದ ಪಾಲಿಸ್ಟಿರೀನ್ ಅನ್ನು ಒಳಗೊಂಡ ಏಕಬಳಕೆ ಅಂದರೆ ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ಮಾರಾಟ ಮತ್ತು ಬಳಕೆಯನ್ನು 2022, ಜು.1ರಿಂದ ನಿಷೇಧಿಸಲಾಗುವುದು ಎಂದು ಸರಕಾರವು ಘೋಷಿಸಿದೆ. ಈ ಕುರಿತು ತಿದ್ದುಪಡಿಗೊಂಡ ನಿಯಮಗಳ ಅಧಿಸೂಚನೆಯನ್ನು ಗುರುವಾರ ಹೊರಡಿಸಲಾಗಿದೆ.

ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳ ಹಾವಳಿಯನ್ನೂ ನಿಯಂತ್ರಿಸಲು ಮುಂದಾಗಿರುವ ಸರಕಾರವು, ಇಂತಹ ಕ್ಯಾರಿ ಬ್ಯಾಗ್ ಗಳ ದಪ್ಪವನ್ನು 2021,ಸೆ.30ರಿಂದ 50 ಮೈಕ್ರೋನ್ ಗಳಿಂದ 70 ಮೈಕ್ರೋನ್ ಗಳಿಗೆ ಮತ್ತು 2022 ಡಿ.31ರಿಂದ 120 ಮೈಕ್ರೋನ್ ಗಳಿಗೆ ಹೆಚ್ಚಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಪ್ಲಾಸ್ಟಿಕ್ ಕಡ್ಡಿಗಳನ್ನು ಹೊಂದಿರುವ ಇಯರ್ ಬಡ್ ಗಳು,ಬಲೂನುಗಳಿಗೆ ಬಳಸುವ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಮತ್ತು ಐಸ್ಕ್ರೀಂ ಕಡ್ಡಿಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟಿರೀನ್(ಥರ್ಮೋಕಾಲ್), ಸ್ವೀಟ್ ಬಾಕ್ಸ್ ಗಳು, ಸಿಗರೇಟ್ ಪ್ಯಾಕ್ ಗಳು ಮತ್ತು ಆಹ್ವಾನ ಪತ್ರಿಕೆಗಳಿಗೆ ಸುತ್ತಲು ಅಥವಾ ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಫಿಲ್ಮ್ ಗಳು, 100 ಮೈಕ್ರೋನ್ ಗಳಿಗಿಂತ ಕಡಿಮೆ ದಪ್ಪವನ್ನು ಹೊಂದಿರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ ಗಳು ಇತ್ಯಾದಿಗಳು ನಿಷೇಧಿಸಲಾಗುವ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳಲ್ಲಿ ಸೇರಿವೆ.

ಈ ಪಟ್ಟಿಯಲ್ಲಿ ಸೇರಿರದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳಂತೆ ಉತ್ಪಾದಕ,ಆಮದುದಾರ ಮತ್ತು ಬ್ರಾಂಡ್ ಮಾಲಕರೇ ಸಂಗ್ರಹಿಸಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅವುಗಳನ್ನು ವಿಲೇವಾರಿ ಮಾಡಬೇಕು ಎಂದು ಪರಿಸರ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News