ಸ್ವಾತಂತ್ರ್ಯದ ಅ-ಮೃತ ಮಹೋತ್ಸವ!

Update: 2021-08-14 04:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

2022ರ ಆಗಸ್ಟ್ 15ರಂದು ಈ ದೇಶಕ್ಕೆ ಸ್ವಾತಂತ್ರ ದೊರಕಿ 75 ವರ್ಷ ಪೂರ್ತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ‘ಸ್ವಾತಂತ್ರ ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ. ವಿಪರ್ಯಾಸವೆಂದರೆ, ಸ್ವಾತಂತ್ರ ದಿನಾಚರಣೆಯನ್ನು ಈ ದೇಶ ಅಘೋಷಿತ ಕರ್ಫ್ಯೂ ಅಥವಾ ಲಾಕ್‌ಡೌನ್ ಜೊತೆಗೆ ಆಚರಿಸುತ್ತಿದೆ. ಕಳೆದೆರಡು ವರ್ಷಗಳಿಂದ ಸರಕಾರ ಸ್ವಾತಂತ್ರೋತ್ಸವವನ್ನು ಕರ್ಫ್ಯೂ ಜೊತೆ ಜೊತೆಗೇ ‘ಅಣಕ’ದ ರೂಪದಲ್ಲಿ ಆಚರಿಸುತ್ತಿದೆ. ನಾವು ಗಳಿಸಿದ ಸ್ವಾತಂತ್ರದ ವ್ಯಾಖ್ಯಾನಗಳು ವಿರೂಪಗೊಳ್ಳುತ್ತಿರುವ ಈ ದಿನಗಳಲ್ಲಿ ಸ್ವಾತಂತ್ರ ದಿನದಂದು ಕೊರೋನ ಹೆಸರಲ್ಲಿ ಸರಕಾರವೇ ಕರ್ಫ್ಯೂ ವಿಧಿಸುತ್ತಿರುವುದು ರೂಪಕದಂತಿದೆ. ಜನರು ಹೆಚ್ಚು ಸ್ವಾತಂತ್ರವನ್ನು ಅನುಭವಿಸುತ್ತಿದ್ದಾರೆ ಎನ್ನುವುದೇ ದೇಶದ ಸಮಸ್ಯೆಗೆ ಮುಖ್ಯ ಕಾರಣ ಎಂದು ನಂಬಿರುವ ಸರಕಾರ, ಆಗಸ್ಟ್ 15ರಂದು ಲಾಕ್‌ಡೌನ್ ಹೇರುವುದು, ಜನರು ಬೀದಿಗಿಳಿಯದಂತೆ ಕರ್ಫ್ಯೂ ಜಾರಿಗೊಳಿಸುವುದು ಜನರಿಗೆ ಬೇರೆಯೇ ಸಂದೇಶವೊಂದನ್ನು ನೀಡುತ್ತಿದೆ. ಸ್ವಾತಂತ್ರದ ಅಮೃತ ಮಹೋತ್ಸವ ನಿಧಾನಕ್ಕೆ ಮೃತ ಉತ್ಸವವಾಗಿ ಬದಲಾಗುತ್ತಿದೆಯೇ? ಎಂದು ಜನರು ಅನುಮಾನ ಪಡುವಂತಾಗಿದೆ.

ಒಂದು ಕಾಲವಿತ್ತು. ಯಾವುದೇ ಕಾರ್ಮಿಕ ಸಂಘಟನೆಗಳು ಒಂದು ದಿನದ ‘ಭಾರತ ಬಂದ್’ಗೆ ಕರೆ ಕೊಟ್ಟರೆ, ಸರಕಾರ ಗಾಬರಿ ಬೀಳುತ್ತಿತ್ತು. ಮರುದಿನ ಮಾಧ್ಯಮಗಳು ಒಂದು ದಿನದ ಭಾರತ ಬಂದ್‌ನಿಂದ ದೇಶಕ್ಕಾದ ನಷ್ಟವೆಷ್ಟು ಎನ್ನುವುದನ್ನು ಅಂಕಿ-ಅಂಶಗಳ ಸಹಿತ ಜನರ ಮುಂದಿಡುತ್ತಿದ್ದವು. ಪದೇ ಪದೇ ಬಂದ್, ಹರತಾಳಗಳಿಗೆ ಕರೆ ಕೊಡುತ್ತಿದ್ದ ಕಾರಣಕ್ಕಾಗಿಯೇ ಕೇರಳವನ್ನು, ಇತರ ರಾಜ್ಯಗಳು ವ್ಯಂಗ್ಯ ಮಾಡುತ್ತಿದ್ದವು ಮತ್ತು ಈ ಬಂದ್‌ಗಳು ಕೇರಳದ ಅಭಿವೃದ್ಧಿಗೆ ತಡೆಯಾಗಿವೆ ಎಂದು ವ್ಯಾಖ್ಯಾನಿಸುತ್ತಿದ್ದವು. ಯಾವುದೇ ಕೋಮುಗಲಭೆ ನಡೆದು, ಎರಡು ದಿನ ಕರ್ಫ್ಯೂ ವಿಧಿಸಿದರೆ ಜನರಿಗೆ ಉಸಿರುಗಟ್ಟಿದಂತಾಗುತ್ತಿತ್ತು. ಆರ್ಥಿಕ ವ್ಯವಹಾರಗಳು ಕುಸಿದು, ವ್ಯಾಪಾರಿಗಳು ಹಿಡಿಶಾಪ ಹಾಕುತ್ತಿದ್ದರು. ವಿಪರ್ಯಾಸವೆಂದರೆ, ಇಂದು ಸರಕಾರದ ನೇತೃತ್ವದಲ್ಲಿ ಯದ್ವಾತದ್ವಾ ಬಂದ್‌ಗಳು ಘೋಷಣೆಯಾಗುತ್ತಿವೆ. ದೇಶವನ್ನು ಬಂದ್ ಮಾಡುವುದನ್ನೇ ತನ್ನ ಸಾಧನೆ ಎಂದು ಸರಕಾರ ಭಾವಿಸಿದೆ. ಜನರ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸರಕಾರಕ್ಕೆ ಯಾವ ಪಾಪಪ್ರಜ್ಞೆಯೂ ಇದ್ದಂತೆ ಕಾಣುತ್ತಿಲ್ಲ. ಜನರ ಭಾವನೆ, ಆಕ್ರೋಶಗಳನ್ನು ಸರಕಾರ ಕಾಲ ಕಸವಾಗಿ ಭಾವಿಸಿದೆ. ಈ ಹಿಂದಿನ ಸರಕಾರ ಏನಿಲ್ಲವೆಂದರೂ, ಜನರಿಗೆ ಹೆದರುತ್ತಿತ್ತು. ಪೆಟ್ರೋಲ್ ಬೆಲೆಯೇರಿಸುವಾಗ, ಆರ್ಥಿಕ ವ್ಯವಹಾರಗಳಿಗೆ ಧಕ್ಕೆಯಾದಾಗ ಜನರ ಸಿಟ್ಟು ತನ್ನ ಸರಕಾರವನ್ನೇ ಉರುಳಿಸಬಹುದು ಎಂಬ ಭಯವೊಂದು ಕಾಡುತ್ತಿತ್ತು. ಆದರೆ ಇಂದಿನ ಸರಕಾರದೊಳಗಿರುವ ನಾಯಕರು ಜನರಿಂದ ಸರಕಾರ ಎನ್ನುವುದನ್ನು ಸಂಪೂರ್ಣ ಮರೆತಿದ್ದಾರೆ.

ಜನರ ಹಸಿವು, ಆರೋಗ್ಯ, ಶಿಕ್ಷಣ ಇವೆಲ್ಲವೂ ಚುನಾವಣೆಯ ಸಂದರ್ಭದಲ್ಲಿ ಬಳಕೆಗೆ ಬರುವುದಿಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಸುಲಭದಲ್ಲಿ ಚುನಾವಣೆ ಗೆಲ್ಲಬಹುದಾದರೆ, ಜನರ ಮೂಲಭೂತ ಅಗತ್ಯಗಳಿಗಾಗಿ ಯಾಕೆ ತಲೆಕೆಡಿಸಿಕೊಳ್ಳಬೇಕು? ಹೀಗಿರುವಾಗ ಜನರಿಗೆ ಹೆದರುವ ಅಗತ್ಯವೂ ಸರಕಾರಕ್ಕೆ ಕಾಣುತ್ತಿಲ್ಲ. ಇತ್ತ ಈ ದೇಶದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೊಳಗಾಗಿದ್ದರೂ, ಮಾಧ್ಯಮಗಳು, ಕಾರ್ಯಕರ್ತರ ವೇಷದಲ್ಲಿರುವ ಗೂಂಡಾಗಳು, ವಾಟ್ಸ್‌ಆ್ಯಪ್‌ನ ಸುಳ್ಳು ವೈಭವೀಕರಣದ ನಡುವೆ ಗೊಂದಲಕ್ಕೆ ಸಿಲುಕಿ ಸರಕಾರದ ವಿರುದ್ಧ ಮಾತನಾಡದಂತಹ ಸ್ಥಿತಿಯಲ್ಲಿದ್ದಾರೆ. ಈ ಹಿಂದೆಲ್ಲ ಸರಕಾರವನ್ನು ಟೀಕಿಸುವುದನ್ನು ಜನಸಾಮಾನ್ಯರು ತಮ್ಮ ಕರ್ತವ್ಯವೆಂದು ಭಾವಿಸುತ್ತಿದ್ದರೆ, ಇಂದು ಸರಕಾರವನ್ನು ಟೀಕಿಸಿದರೆ ಎಲ್ಲಿ ದೇಶದ್ರೋಹಿ ಎಂದು ಗುರುತಿಸಲ್ಪಡಬೇಕಾದೀತೋ ಎಂಬ ಭಯದಲ್ಲಿ ಬಾಯಿ ಮುಚ್ಚಿ ಕೂತಿದ್ದಾರೆ. ‘ಭಾರತಕ್ಕೆ ಒಳ್ಳೆಯದಾಗುತ್ತಿರುವುದರಿಂದ ಕಷ್ಟ ಅನುಭವಿಸಿದರೂ ಚಿಂತಿಲ್ಲ. ದೇಶಕ್ಕಾಗಿ ತಾನೆ’ ಎಂದು ತಮ್ಮನ್ನೇ ತಾವು ಸಮಾಧಾನಿಸುತ್ತಾ, ತಾವು ನಾಶವಾಗಿ, ದೇಶವನ್ನೂ ನಾಶ ಮಾಡುತ್ತಿದ್ದಾರೆ. ತಾನೇ ದೇಶ ಎನ್ನುವುದನ್ನು ಮರೆತಿರುವ ಶ್ರೀಸಾಮಾನ್ಯ, ತಾನು ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎನ್ನುವ ಅರಿವೇ ಇಲ್ಲದೆ ತನ್ನ ಸಂಕಟಗಳನ್ನು ಸಹಿಸಿಕೊಳ್ಳುತ್ತಿದ್ದಾನೆ.

‘ಕೊರೋನ ಎದುರಿಸಲು ಲಾಕ್‌ಡೌನ್ ಅನಿವಾರ್ಯ’ ಎಂದು ಸರಕಾರ ಈಗಾಲೇ ಮಾಧ್ಯಮಗಳ ಮೂಲಕ ಜನರನ್ನು ನಂಬಿಸಿದೆ. ಈ ಮೂಲಕ, ತನ್ನೆಲ್ಲ ವೈಫಲ್ಯಗಳನ್ನು ಲಾಕ್‌ಡೌನ್‌ನೊಳಗೆ ಮುಚ್ಚಿ ಹಾಕುತ್ತಿದೆ. ಈಗಾಗಲೇ ಸರಕಾರದ ತಪ್ಪು ನೀತಿಗಳಿಂದ ಚಿಂದಿಯಾಗಿರುವ ಆರ್ಥಿಕತೆಯ ಬಗ್ಗೆ ಜನರು ಮಾತನಾಡಲೇ ಬಾರದು ಎನ್ನುವುದಕ್ಕಾಗಿ ಲಾಕ್‌ಡೌನ್‌ನ್ನು ದುರ್ಬಳಕೆ ಮಾಡುತ್ತಿದೆ. ಭಾರತಕ್ಕೆ ಕೊರೋನ ಕಾಲಿಟ್ಟ ವರ್ಷ ಲಾಕ್‌ಡೌನ್ ಅನಿವಾರ್ಯವಾಗಿತ್ತು ಎಂದು ಭಾವಿಸೋಣ. ಜನರೂ ಅದಕ್ಕೆ ತಮ್ಮ ಪೂರ್ಣ ಸಹಕಾರವನ್ನು ನೀಡಿದ್ದಾರೆ. ಲಾಕ್‌ಡೌನ್ ಮೂಲಕ ಕೊರೋನ ಸಂಪೂರ್ಣ ಇಲ್ಲವಾಗುತ್ತದೆ ಎಂದು ಸರಕಾರ ಜನರನ್ನು ನಂಬಿಸಿತ್ತು. ಕೊನೆಗೂ ಲಾಕ್‌ಡೌನ್‌ನಿಂದ ಜನರ ಬದುಕು ನಾಶವಾಯಿತೇ ಹೊರತು, ಕೊರೋನ ನಾಶವಾಗಲಿಲ್ಲ. ವಿಪರ್ಯಾಸವೆಂದರೆ, ಇದೀಗ ಕೊರೋನ ಪಾಸಿಟಿವ್ ಸಂಖ್ಯೆ ಹೆಚ್ಚಾಗುವುದು ‘ಲಾಕ್‌ಡೌನ್ ಹೇರುವುದಕ್ಕೆ ತನಗಿರುವ ಪರವಾನಿಗೆ’ ಎಂದು ಸರಕಾರ ಭಾವಿಸಿದೆ. ಕೊರೋನವನ್ನು ಆಸ್ಪತ್ರೆಗಳ ಮೂಲಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಎದುರಿಸಬೇಕೇ ಹೊರತು, ಲಾಕ್‌ಡೌನ್ ಮೂಲಕವಲ್ಲ. ಮೊದಲ ಒಂದು ವರ್ಷವನ್ನು ಜನರು ಸರಕಾರಕ್ಕೆ ಭಿಕ್ಷೆಯಾಗಿ ನೀಡಿದ್ದಾರೆ ಎನ್ನುವ ಋಣಭಾರ ಸರಕಾರಕ್ಕೆ ಇರಬೇಕಾಗಿದೆ.

ಒಂದು ವರ್ಷ ಸಹಿಸಿದರು ಎನ್ನುವ ಕಾರಣಕ್ಕಾಗಿ, ಕೊರೋನ ಹೆಚ್ಚಾದಾಗಲೆಲ್ಲ ಲಾಕ್‌ಡೌನ್ ಹೇರುವುದು ಸರ್ವಾಧಿಕಾರವಾಗಿದೆ. ಈ ಮೂಲಕ ಸರಕಾರದ ತಪ್ಪುಗಳಿಗೆ, ವೈಫಲ್ಯಕ್ಕೆ ಜನರು ದಂಡ ತೆರುವಂತಾಗಿದೆ. ಇತರ ದೇಶಗಳು ಲಾಕ್‌ಡೌನ್ ಹೇರುತ್ತಿವೆ ಎನುವುದನ್ನು ಮುಂದಿಟ್ಟು ನಮ್ಮ ಸರಕಾರ ಲಾಕ್‌ಡೌನ್ ಹೇರುವುದಾದರೆ, ಇತರ ದೇಶಗಳು ತನ್ನ ಜನಗಳಿಗೆ ನೀಡುವ ಸೌಲಭ್ಯಗಳನ್ನೂ ಇಲ್ಲಿನ ಜನಗಳಿಗೆ ನೀಡಬೇಕಾಗುತ್ತದೆ. ಕೊರೋನಾ ನಿರ್ವಹಣೆಗೆ ಸಂಬಂಧಿಸಿ ಶ್ರೀಮಂತ ದೇಶಗಳನ್ನು ಪೂರ್ಣ ರೀತಿಯಲ್ಲಿ ಬಡದೇಶಗಳು ಮಾದರಿಯಾಗಿ ಸ್ವೀಕರಿಸುವಂತಿಲ್ಲ. ಯಾಕೆಂದರೆ, ಭಾರತದಲ್ಲಿ ಇಂದಿಗೂ ಬಡವರು, ಮಧ್ಯಮವರ್ಗ ಕೊರೋನಕ್ಕೆ ಭಯ ಪಡುತ್ತಿಲ್ಲ, ಬದಲಿಗೆ ಹಸಿವಿಗೆ ಹೆದರುತ್ತಿವೆ. ಈ ದೇಶದಲ್ಲಿ ಲಸಿಕೆಗಳಿಗಾಗಿ ಯಾವುದೇ ಹಾಹಾಕಾರವಿಲ್ಲ, ಆದರೆ ಆಹಾರಕ್ಕಾಗಿ ಹಾಹಾಕಾರವಿದೆ. ಇಷ್ಟಕ್ಕೂ ವಿದೇಶದಲ್ಲಿ ಲಾಕ್‌ಡೌನ್ ವಿರುದ್ಧ ದೊಡ್ಡ ಚಳವಳಿಯೇ ಆರಂಭವಾಗಿದೆ. ಜನರು ಅಲ್ಲಿ ಬೀದಿಗಿಳಿದಿದ್ದಾರೆ. ಭಾರತದಲ್ಲೂ ಬೀದಿಗಿಳಿಯುವ ದಿನ ದೂರವಿಲ್ಲ. ಕಳೆದೆರಡು ವರ್ಷಗಳಿಂದ ಸರಕಾರ ಲಾಕ್‌ಡೌನ್‌ನ್ನು ಬಳಸುತ್ತಿರುವುದು ಕೊರೋನವನ್ನು ಎದುರಿಸುವುದಕ್ಕಾಗಿಯಲ್ಲ, ಬದಲಿಗೆ ಜನರನ್ನು ಹದ್ದುಬಸ್ತಿನಲ್ಲಿಡುವುದಕ್ಕೆ.

ಒಂದೆಡೆ ರೈತರು ಬೀದಿಯಲ್ಲಿದ್ದು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಕೊರೋನಕ್ಕೆ ಹೆದರಿ ಮನೆಯಲ್ಲಿ ಬಚ್ಚಿಟ್ಟುಕೊಂಡಿಲ್ಲ. ತಪ್ಪು ಕೃಷಿ ನೀತಿಯಿಂದ ಎದುರಾಗುವ ಆತಂಕಗಳ ಮುಂದೆ ಅವರಿಗೆ ಕೊರೋನ ಏನೇನೂ ಅಲ್ಲ. ಸುಮಾರು 300 ದಿನಗಳಿಂದ ಬೀದಿಯಲ್ಲಿದ್ದರೂ ಅವರ ತಂಟೆಗೆ ಕೊರೋನ ಹೋಗಿಲ್ಲ. ಇದೀಗ ಸ್ವಾತಂತ್ರ ದಿನವನ್ನು ಆಝಾದಿ ಸಂಗ್ರಾಮ ದಿವಸವಾಗಿ ಆಚರಿಸಲು ಮುಂದಾಗಿದ್ದಾರೆ. ಇಡೀ ದೇಶವನ್ನು ಖಾಸಗಿಯವರಿಗೆ ಮಾರಲು ಹೊರಟಿರುವ ಸರಕಾರ, ಜನರ ಗಮನವನ್ನು ಬೇರೆಡೆಗೆ ಹರಿಸುವುದಕ್ಕಾಗಿ ಕೊರೋನವನ್ನು ಜೀವಂತ ಉಳಿಸುವುದಕ್ಕೆ ಯತ್ನಿಸುತ್ತಿದೆ. ಹಾಗೆಯೇ ಲಾಕ್‌ಡೌನ್ ಕೊರೋನ ಎದುರಿಸಲು ಅನಿವಾರ್ಯ ಎನ್ನುವುದನ್ನು ನಂಬಿಸಿ, ದೇಶದ ಸ್ವಾತಂತ್ರದ ಕತ್ತು ಹಿಸುಕುತ್ತಿದೆ. ಸ್ವಾತಂತ್ರದ ಅಮೃತಕ್ಕೆ ಲಾಕ್‌ಡೌನ್, ಕರ್ಫ್ಯೂ ವಿಷ ಬೆರೆಸಿ ‘ಕುಡಿಯಿರಿ’ ಎಂದರೆ ಜನರು ಕುಡಿಯುವುದಾದರೂ ಹೇಗೆ? ಈಗಾಗಲೇ ಸರಕಾರ ಜಾರಿಗೆ ತರುತ್ತಿರುವ ವಿವಿಧ ನೀತಿಗಳು ಜನರ ಬದುಕುವ ಹಕ್ಕುಗಳನ್ನು ಹಂತಹಂತವಾಗಿ ಕಸಿಯುತ್ತಿವೆ. ಆದರೆ ಲಾಕ್‌ಡೌನ್ ಜನರ ಸ್ವಾತಂತ್ರವನ್ನು ನೇರವಾಗಿ, ಬಹಿರಂಗವಾಗಿಯೇ ಹತ್ತಿಕ್ಕುತ್ತಿದೆ. ಜನಸಾಮಾನ್ಯರು ಸಾರ್ವಜನಿಕವಾಗಿ ಓಡಾಡುವ, ವ್ಯವಹರಿಸುವ ಹಕ್ಕನ್ನೇ ಕಸಿಯುತ್ತಿರುವ ಲಾಕ್‌ಡೌನ್‌ಗಳ ವಿರುದ್ಧ ದೇಶ ಧ್ವನಿಯೆತ್ತುವುದಕ್ಕೆ ಇನ್ನೂ ಹಿಂದು ಮುಂದು ನೋಡಿದರೆ ಸ್ವಾತಂತ್ರೋತ್ಸವದ ಅಮೃತ ದಿನಗಳಿಗೆ ಅರ್ಥವೇ ಉಳಿಯುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News