ಲೆಬನಾನ್: ಪರಾಕಾಷ್ಠೆಗೆ ತಲುಪಿದ ಇಂಧನ ಕೊರತೆ; ಸರಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಗೆ ತೊಡಕು

Update: 2021-08-14 17:10 GMT

 ಬೆರೂತ್, ಆ.14: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಪದೇ ಪದೇ ವಿದ್ಯುತ್ ಸ್ಥಗಿತದ ಸಮಸ್ಯೆ ಎದುರಿಸುತ್ತಿರುವ ಲೆಬನಾನ್ನಲ್ಲಿ ಡೀಸೆಲ್ ಕೊರತೆ ಪರಾಕಾಷ್ಟೆ ಸ್ಥಿತಿ ತಲುಪಿರುವುದರಿಂದ ಹಲವು ಸರಕಾರಿ ಸಂಸ್ಥೆಗಳು ಕಾರ್ಯಾಚರಣೆ ಸ್ಥಗಿತಗೊಳಿಸುವ ಅಪಾಯದಲ್ಲಿವೆ ಎಂದು ವರದಿಯಾಗಿದೆ.

 ಗ್ಯಾಸ್ ಸ್ಟೇಷನ್, ಬೇಕರಿ, ಮೆಡಿಕಲ್ ಶಾಪ್ ಗಳಲ್ಲಿ ಮಾರುದ್ದದ ಸರತಿ ಸಾಲು ಮಾಮೂಲು ದೃಶ್ಯವಾಗಿದೆ. ವಿದ್ಯುತ್ ಸ್ಥಗಿತವಾದಾಗ, ಜನರೇಟರ್ ಆನ್ ಮಾಡಲಾಗದೆ ಹಲವರು ಮನೆಯ ಟೆರೇಸ್ ಮೇಲೆ ಮಲಗುವ ಅನಿವಾರ್ಯತೆಯಿದೆ. ಶುಕ್ರವಾರ ವಿದ್ಯುತ್ ಸ್ಥಗಿತವಾಗಿ ಜನರೇಟರ್ ಬಳಕೆಗೆ ಡೀಸೆಲ್ ಅಲಭ್ಯವಾದ ಕಾರಣ ಬೆರೂತ್ನ ರಫೀಕ್ ಹರೀರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಲೈಟ್ ಆಫ್ ಆಗುವ ಹಂತದಲ್ಲಿ, ಕಡೆ ನಿಮಿಷದಲ್ಲಿ ಡೀಸೆಲ್ ಲಭಿಸಿದ ಕಾರಣ ವಿಮಾನ ನಿಲ್ದಾಣಕ್ಕೆ ಮರುಜೀವ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್ ಸ್ಥಗಿತವಾದಾಗ ಖಾಸಗಿ ಜನರೇಟರ್ ಬಳಸಿ ಪರ್ಯಾಯ ವಿದ್ಯುತ್ ಬಳಸಲಾಗುತ್ತದೆ. ಆದರೆ ಜನರೇಟರ್ ಆನ್ ಮಾಡಲು ಡೀಸೆಲ್ ಕೊರತೆಯಿದೆ. ಡೀಸೆಲ್ನ ದರ ನಿರ್ಧಾರದ ವಿಷಯದಲ್ಲಿ ಆಡಳಿತದಲ್ಲಿರುವ ಸರಕಾರ ಹಾಗೂ ಲೆಬನಾನ್ನ ಸೆಂಟ್ರಲ್ ಬ್ಯಾಂಕ್ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿರುವುದರಿಂದ ತೈಲೋತ್ಪನ್ನ ಮಾರಾಟ ಸಂಸ್ಥೆ ಡೀಸೆಲ್ ಪೂರೈಸುವುದನ್ನು ನಿಲ್ಲಿಸಿದೆ. ಇಂಧನದ ಕೊರತೆಯಿಂದ ಉತ್ತರ ಲೆಬನಾನ್ನ ಅಕ್ಕರ್ ವಲಯದಲ್ಲಿ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಸರಕಾರಿ ಸ್ವಾಮ್ಯದ ಸಂಪರ್ಕ ಇಲಾಖೆ ಘೋಷಿಸಿದೆ.

ಹಲವೆಡೆ ಡೀಸೆಲ್ ಸಾಗಾಟದ ಟ್ಯಾಂಕರ್ಗಳನ್ನು ಅಡ್ಡಗಟ್ಟಿ ಡೀಸೆಲ್ ದೋಚುವ ಪ್ರಯತ್ನ ನಡೆದಿದೆ. ದಮೋರ್ನಲ್ಲಿನ ಗ್ಯಾಸ್ ಸ್ಟೇಷನ್ನಲ್ಲಿ ಇಂಧನದ ವಿಷಯಕ್ಕೆ ಸಂಬಂಧಿಸಿದ ವಾಗ್ಯುದ್ದ ಗುಂಡು ಹಾರಾಟದವರೆಗೆ ಮುಂದುವರಿದಿದೆ. ಇಂಧನದ ಕೊರತೆಯಿಂದ ಹಲವು ಬೇಕರಿಗಳು ಮುಚ್ಚಲ್ಪಟ್ಟಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲೆಬನಾನ್ನ ಅಧಿಕೃತ ಕರೆನ್ಸಿ ಪೌಂಡ್ ಇತ್ತೀಚಿನ ದಿನಗಳಲ್ಲಿ ತೀವ್ರ ಅಪವೌಲ್ಯವಾಗಿದ್ದು 90%ದಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ದರದ ಪ್ರಕಾರ ಒಂದು ಡಾಲರ್ಗೆ 20,000 ಲೆಬನಾನ್ ಪೌಂಡ್ ಮೌಲ್ಯದಂತೆ ತೈಲೋತ್ಪನ್ನಗಳಿಗೆ ಬೆಲೆ ನಿಗದಿಗೊಳಿಸಲಾಗುವುದು ಎಂದು ಲೆಬನಾನ್ನ ಸೆಂಟ್ರಲ್ ಬ್ಯಾಂಕ್ ಹೇಳಿದರೆ, ಇಂಧನ ಸಚಿವಾಲಯ ಡಾಲರ್ ಗೆ 3,900 ಲೆಬನಾನ್ ಪೌಂಡ್ ಮೌಲ್ಯದಂತೆ ತೈಲೋತ್ಪನ್ನ ಬೆಲೆ ನಿಗದಿಗೊಳಿಸುವುದಾಗಿ ಹೇಳುತ್ತಿದೆ.

ಯಾವ ರೀತಿ ಬೆಲೆ ನಿಗದಿಗೊಳಿಸುವುದು ಎಂಬ ಸ್ಪಷ್ಟತೆಯಿಲ್ಲದ ಕಾರಣ ಪೆಟ್ರೋಲಿಯಂ ಆಮದು ಸಂಸ್ಥೆಗಳು ಡೀಸೆಲ್ ಸ್ಟೇಷನ್ಗಳಿಗೆ ಗ್ಯಾಸೊಲಿನ್ ಮತ್ತು ಡೀಸೆಲ್ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಲೆಬನಾನ್ನ ಪೆಟ್ರೋಲಿಯಂ ಆಮದು ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥ ಜಾರ್ಜ್ಸ್ ಫಯಾದ್ ಹೇಳಿದ್ದಾರೆ. ಈ ಮಧ್ಯೆ, ಮುಂದಿನ ತಿಂಗಳಿಂದ ದೇಶದಾದ್ಯಂತ ರಾತ್ರಿ 12 ಗಂಟೆಯಿಂದ ಮರುದಿನ ಬೆಳಿಗ್ಗೆ 7ರವರೆಗೆ ಇಂಟರ್ನೆಟ್ ಸೇವೆ ಸ್ಥಗಿತಕ್ಕೆ ಸರಕಾರ ನಿರ್ಧರಿಸಿದೆ ಎಂಬ ವರದಿಯನ್ನು ಸಂಪರ್ಕ ಇಲಾಖೆಯ ಸಚಿವ ತಲಾಲ್ ಹವಾತ್ ನಿರಾಕರಿಸಿದ್ದಾರೆ. ಇಂಧನ ಬಿಕ್ಕಟ್ಟಿನಿಂದ ರೋಸಿ ಹೋಗಿರುವ ಜನರು ಲೆಬನಾನ್ನಿಂದ ವಲಸೆ ಹೋಗಲು ಮುಂದಾಗಿದ್ದು ಪಾಸ್ಪೋರ್ಟ್ ಕೋರಿ ದಿನಾ ಸುಮಾರು 5,000 ಅರ್ಜಿ ಸಲ್ಲಿಕೆಯಾಗುತ್ತಿದೆ ಎಂದು ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News