ಐವರಿ ಕೋಸ್ಟ್ ನಲ್ಲಿ 25 ವರ್ಷದ ಬಳಿಕ ಎಬೋಲಾದ ಪ್ರಥಮ ಪ್ರಕರಣ ಪತ್ತೆ
ಯಮೌಸ್ಕ್ರೊ, ಆ.15: ಐವರಿಕೋಸ್ಟ್ ನಲ್ಲಿ 25 ವರ್ಷದ ಬಳಿಕ ಎಬೋಲಾ ವೈರಾಣುವಿನ ಪ್ರಥಮ ಪ್ರಕರಣ ಪತ್ತೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.
ಪಕ್ಕದ ಗಿನಿಯಾ ದೇಶದಿಂದ ಆಗಮಿಸಿದ 18 ವರ್ಷದ ಮಹಿಳೆಯ ರಕ್ತದ ಸ್ಯಾಂಪಲ್ ಪರೀಕ್ಷೆಯ ಸಂದರ್ಭ ಎಬೋಲಾ ವೈರಸ್ ಪತ್ತೆಯಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ . ರೋಗಿಯನ್ನು ಈಗ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಐವರಿಕೋಸ್ಟ್ ನ ಆರೋಗ್ಯ ಸಚಿವ ಪಿಯರೆ ಎನ್ಗೌಡಿಂಬಾ ರಾಷ್ಟ್ರೀಯ ಟಿವಿವಾಹಿನಿಯಲ್ಲಿ ಹೇಳಿದ್ದಾರೆ.
1994ರ ಬಳಿಕ ಐವರಿಕೋಸ್ಟ್ನಲ್ಲಿ ದಾಖಲಾದ ಪ್ರಥಮ ಎಬೋಲಾ ವೈರಸ್ ಪ್ರಕರಣ ಇದು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರತ್ಯೇಕ ಹೇಳಿಕೆಯಲ್ಲಿ ದೃಢಪಡಿಸಿದೆ. ಗಿನಿಯಾದಿಂದ ಬಂದ ಮಹಿಳೆಯಲ್ಲಿ ಈ ವೈರಾಣು ಪತ್ತೆಯಾಗಿದೆ. ಆಕೆ ರಸ್ತೆ ಮೂಲಕ ಸಂಚರಿಸಿರುವ ಮಾಹಿತಿಯಿದ್ದು , ತೀವ್ರ ಜ್ವರದ ಲಕ್ಷಣವಿರುವ ರೋಗಿಯನ್ನು ಆಗಸ್ಟ್ 12ರಂದು ಅಬಿಡ್ಜಾನ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
2014ರಿಂದ 2016ರವರೆಗೆ ಎಬೋಲಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದ ಗಿನಿಯಾದಲ್ಲಿ ಈ ವರ್ಷಾರಂಭ ಮತ್ತೆ ಈ ಮಾರಣಾಂತಿಕ ಸಾಂಕ್ರಾಮಿಕ ಕಾಣಿಸಿಕೊಂಡಿತ್ತು. 4 ತಿಂಗಳು ಜನರನ್ನು ಕಂಗೆಡಿಸಿದ್ದ ಸಾಂಕ್ರಾಮಿಕ ರೋಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಜೂನ್ 19ರಂದು ಗಿನಿಯಾ ಘೋಷಿಸಿತ್ತು. ಈ ವಾರದ ಆರಂಭದಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾ ಸಾಂಕ್ರಾಮಿಕದ ರೀತಿಯ ಮಾರ್ಬರ್ಗ್ ವೈರಾಣು ಪತ್ತೆಯಾಗಿತ್ತು.
ಗಿನಿಯಾದಲ್ಲಿ ಉಲ್ಬಣಗೊಂಡಿದ್ದ ಎಬೋಲಾ ಪ್ರಕರಣಕ್ಕೂ, ಈಗ ಐವರಿಕೋಸ್ಟ್ನಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೂ ಸಂಬಂಧವಿರುವ ಬಗ್ಗೆ ಯಾವುದೇ ಮಾಹಿತಿ ಅಥವಾ ಪುರಾವೆ ಲಭಿಸಿಲ್ಲ. ಆದರೆ ಇನ್ನಷ್ಟು ಕೂಲಂಕಷ ಅಧ್ಯಯನದಿಂದ ಹೆಚ್ಚಿನ ಮಾಹಿತಿ ಲಭಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ತಿಳಿಸಿದೆ.