ಪಾಕಿಸ್ತಾನ: ಟ್ರಕ್ ಮೇಲೆ ಗ್ರೆನೇಡ್ ದಾಳಿ ಪ್ರಕರಣ; ಮೃತರ ಸಂಖ್ಯೆ 12ಕ್ಕೆ ಏರಿಕೆ

Update: 2021-08-15 17:21 GMT

ಇಸ್ಲಮಾಬಾದ್, ಆ.15: ಕರಾಚಿಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಪ್ರಯಾಣಿಸುತ್ತಿದ್ದ ಟ್ರಕ್ ಮೇಲೆ ಶನಿವಾರ ತಡರಾತ್ರಿ ನಡೆದ ಗ್ರೆನೇಡ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. 6 ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ‌

ಪಶ್ಚಿಮ ಕರಾಚಿಯ ಗ್ರಾಮವೊಂದರಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದವರು ಪ್ರಯಾಣಿಸುತ್ತಿದ್ದ ಟ್ರಕ್ ಮೇಲೆ ಮವಾಚ್ ಗೋತ್ ಎಂಬಲ್ಲಿ ಗ್ರೆನೇಡ್ ಎಸೆಯಲಾಗಿದೆ. ಗ್ರೆನೇಡ್ ಸ್ಫೋಟದಿಂದ ಟ್ರಕ್ನಲ್ಲಿದ್ದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಇತರ 9 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ರವಿವಾರ ಮೂವರು ಮೃತಪಟ್ಟಿದ್ದಾರೆ. ಮೃತರಲ್ಲಿ 7 ಮಹಿಳೆಯರು ಹಾಗೂ 5 ಮಂದಿ ಮಕ್ಕಳು. ಉಳಿದ ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ರಶ್ಯಾ ನಿರ್ಮಿತ ಗ್ರೆನೇಡ್ ಚೂರುಗಳು ಸ್ಥಳದಲ್ಲಿ ಪತ್ತೆಯಾಗಿವೆ. ದುಷ್ಕರ್ಮಿಗಳು ಟ್ರಕ್ ಅನ್ನು ಬೆನ್ನಟ್ಟಿಕೊಂಡು ಬಂದಿದ್ದರು. ಟ್ರಕ್ನಲ್ಲಿ 20ಕ್ಕೂ ಹೆಚ್ಚು ಜನರಿದ್ದರು. ದಾಳಿಗೆ ಹೊಣೆಯನ್ನು ಯಾರೊಬ್ಬರೂ ವಹಿಸಿಲ್ಲ. ಇದು ಕೋಮು ಹಿಂಸಾಚಾರದ ಘಟನೆಯಲ್ಲ, ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ನಡೆದ ಭಯೋತ್ಪಾದಕ ಕೃತ್ಯವಾಗಿದೆ ಎಂದು ಕರಾಚಿ ಪೊಲೀಸ್ ವಿಭಾಗದ ಮುಖ್ಯಸ್ಥ ಇಮ್ರಾನ್ ಯಾಕೂಬ್ ಮಿನ್ಹಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News