ಲೆಬನಾನ್: ತೈಲ ಟ್ಯಾಂಕರ್ ಸ್ಫೋಟ; ಕನಿಷ್ಟ 20 ಮೃತ್ಯು, 80 ಮಂದಿಗೆ ಗಾಯ

Update: 2021-08-15 17:24 GMT

ಬೆರೂತ್, ಆ.15: ಲೆಬನಾನ್ ಉತ್ತರವಲಯದ ಅಕ್ಕಾರ್ ಎಂಬಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡ ದುರಂತದಲ್ಲಿ ಕನಿಷ್ಟ 20 ಮಂದಿ ಮೃತಪಟ್ಟಿದ್ದು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ರೆಡ್ ಕ್ರಾಸ್ ಮತ್ತು ಸರಕಾರಿ ಮಾಧ್ಯಮಗಳು ರವಿವಾರ ವರದಿ ಮಾಡಿದೆ. ಸೇನಾಪಡೆ ಜಫ್ತಿ ಮಾಡಿದ್ದ ತೈಲ ಟ್ಯಾಂಕರ್ ನಿಂದ ಗ್ಯಾಸೊಲಿನ್ ಸಂಗ್ರಹಿಸಲು ಗುಂಪುಗೂಡಿದ್ದ ಸ್ಥಳೀಯರ ನಡುವಿನ ಪೈಪೋಟಿಯ ಸಂದರ್ಭ ಟ್ಯಾಂಕರ್ ಸ್ಫೋಟಗೊಂಡಿದೆ. ಈ ಸಂದರ್ಭ ಸೇನಾಪಡೆ ಆ ಸ್ಥಳದಲ್ಲಿರಲಿಲ್ಲ ಎಂದು ರಾಷ್ಟ್ರೀಯ ಸುದ್ಧಿವಾಹಿನಿಯ ಅಧಿಕಾರಿಗಳು ಹೇಳಿದ್ದಾರೆ. 

ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಲೆಬನಾನ್ ನಲ್ಲಿ ವಿದ್ಯುತ್ ಸ್ಥಗಿತದ ಜೊತೆಗೆ ತೈಲದ ಕೊರತೆಯೂ ಉಲ್ಬಣಿಸಿದೆ. ಅಕ್ಕಾರ್ ಆಸ್ಪತ್ರೆಗೆ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ರವಾನಿಸಲಾಗಿದೆ. ಆದರೆ ಹೆಚ್ಚಿನ ಮೃತದೇಹಗಳು ಬೆಂಕಿಯಿಂದ ಸುಟ್ಟು ಕರಟಿಹೋಗಿದ್ದು ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆಯ ಸಿಬಂದಿಗಳು ಹೇಳಿದ್ದಾರೆ. ತೀವ್ರ ಸುಟ್ಟಗಾಯಕ್ಕೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಆಸ್ಪತ್ರೆಯಲ್ಲಿಲ್ಲದ ಕಾರಣ ಹಲವು ಗಾಯಾಳುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News