ಖಾದ್ಯ ತೈಲ ಬೆಲೆಯೇರಿಕೆ: ದುಬಾರಿಯಾದ ‘ಪಕೋಡಾ’

Update: 2021-08-16 05:09 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಉದ್ಯೋಗ ಕೊಡಿ’ ಎಂದು ಕೇಳಿದ ತರುಣರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಪಕೋಡಾ ಮಾರಿ’ ಎಂಬ ಸಲಹೆಯನ್ನು ನೀಡಿದ್ದರು. ಈ ಸಲಹೆಗೆ ವ್ಯಾಪಕ ಟೀಕೆಗಳೂ ಬಂದಿದ್ದವು. ಹಾಗೆಂದು ಪಕೋಡಾ ಮಾರುವ ಉದ್ಯೋಗ ನಿಕೃಷ್ಟವಾದುದೇನೂ ಅಲ್ಲ. ಬರೇ ಸರಕಾರಿ ಉದ್ಯೋಗಗಳಿಗೆ ಕಾಯದೆ, ಯಾವುದೇ ಉದ್ಯೋಗವನ್ನಾಗಲಿ ಗೌರವದಿಂದ ಸ್ವೀಕರಿಸಿ ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ ಪ್ರಧಾನಿ ಆ ಹೇಳಿಕೆಯನ್ನು ನೀಡಿರಬಹುದು. ಕೆಲವೊಮ್ಮೆ ಸರಕಾರಿ ಉದ್ಯೋಗಿಯ ವೇತನಕ್ಕಿಂತ, ಪಕೋಡಾ ಮಾರುವವನ ಆದಾಯ ಹೆಚ್ಚಿರುವ ಸಾಧ್ಯತೆಗಳಿವೆ. ಸ್ನಾತಕೋತ್ತರ ಪದವಿ ಮಾಡಿದವನು ಕೃಷಿ, ಕೈಗಾರಿಕೆಗಳನ್ನು ನಡೆಸಬಹುದಾದರೆ ಪಕೋಡಾವನ್ನೂ ಮಾರಬಹುದು. ಕಳೆದೆರಡು ವರ್ಷಗಳಿಂದ ಲಾಕ್‌ಡೌನ್ ಕಾರಣದಿಂದ ಬೃಹತ್ ಉದ್ದಿಮೆಗಳನ್ನು, ಹೊಟೇಲ್‌ಗಳನ್ನು ಮುಚ್ಚಿ ಬೀದಿಗೆ ಬಿದ್ದು ಪಕೋಡಾವನ್ನೇ ಮಾರುವ ಅನಿವಾರ್ಯ ಸ್ಥಿತಿಗೆ ಬಂದವರ ಸಂಖ್ಯೆ ದೊಡ್ಡದಿದೆ. ವಿಪರ್ಯಾಸವೆಂದರೆ, ಸದ್ಯಕ್ಕೆ ಪಕೋಡಾ ಮಾರಿ ಬದುಕುವುದು ಕೂಡ ದುಸ್ತರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ದಿನದಿಂದ ದಿನಕ್ಕೆ ಏರುತ್ತಿರುವ ಖಾದ್ಯ ತೈಲ ಬೆಲೆಯನ್ನು ಗಮನಿಸಿದರೆ, ಬೀದಿ ಬದಿಯಲ್ಲಿ ಪಕೋಡಾ ಮಾರಿ ಬದುಕುವುದು ಸುಲಭವಿಲ್ಲ. ಖಾದ್ಯ ತೈಲ ಬೆಲೆಯಿಂದಾಗಿ ಪಕೋಡಾದ ಬೆಲೆಯೂ ದುಬಾರಿಯಾಗುತ್ತಿದೆ. ಜನಸಾಮಾನ್ಯರ ಪಾಲಿಗೆ ಪಕೋಡಾ ಹಿಂದಿನಂತೆ ಸಣ್ಣ ಬೆಲೆಗೆ ಎಟಕುವ ತಿಂಡಿಯಾಗಿ ಉಳಿದಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಚರ್ಚೆಯಾದಂತೆ, ಖಾದ್ಯ ತೈಲ ಬೆಲೆಯೇರಿಕೆ ಸಾರ್ವಜನಿಕ ಚರ್ಚೆಯಾಗುವುದಿಲ್ಲ. ಬಹುಶಃ ‘ಅಡುಗೆ ಮನೆ’ಯ ವಿಷಯ ಎನ್ನುವ ತಾತ್ಸಾರ ಇದಕ್ಕೆ ಕಾರಣವಾಗಿರಬಹುದೇನೋ. ಆದರೆ ಖಾದ್ಯ ತೈಲ ಬೆಲೆ, ನಾವು ತಿನ್ನುವ ಆಹಾರದ ಮೇಲೆ ಭಾರೀ ದುಷ್ಪರಿಣಾಮಗಳನ್ನು ಬೀರುತ್ತದೆ ಎನ್ನುವ ಅಂಶವನ್ನು ನಾವು ಮರೆಯುತ್ತೇವೆ. ಖಾದ್ಯ ತೈಲ ಬೆಲೆಯೇರಿಕೆ ಕಾವಿಗೆ ಅಡುಗೆ ಮನೆಯಷ್ಟೇ ಬಲಿಯಾಗುವುದಿಲ್ಲ. ನಿಧಾನಕ್ಕೆ ಎಲ್ಲ ಬಗೆಯ ಆಹಾರ ಪದಾರ್ಥಗಳ ಬೆಲೆಯೂ ಇದರ ಜೊತೆ ಜೊತೆಗೇ ಏರುತ್ತಾ ಹೋಗುತ್ತದೆ. ಹೊಟೇಲ್‌ಗಳ ಬಿಲ್‌ನಿಂದ ನಾವು ಕೈ ಸುಟ್ಟುಕೊಳ್ಳಬೇಕಾಗುತ್ತದೆ. ಈಗಾಗಲೇ ಕೈಸುಟ್ಟುಕೊಳ್ಳುತ್ತಿದ್ದೇವೆ ಕೂಡ. ಇದೇ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಅಕ್ರಮ ಕಳಪೆ ಖಾದ್ಯ ತೈಲ ದಂಧೆ ವ್ಯಾಪಕವಾಗತೊಡಗಿವೆ. ಈಗಾಗಲೇ ಪ್ರಸಿದ್ಧ ಕಂಪೆನಿಗಳ ಖಾದ್ಯ ತೈಲದ ಹೆಸರಿನಲ್ಲಿ ನಕಲಿ ಖಾದ್ಯ ತೈಲಗಳು ಮಾರುಕಟ್ಟೆಗಳಿಗೆ ಪ್ರವೇಶಿಸಿರುವುದು ಬೆಳಕಿಗೆ ಬಂದಿವೆ. ಅಷ್ಟೇ ಅಲ್ಲ, ಖಾದ್ಯ ತೈಲದಲ್ಲಿ ವ್ಯಾಪಕ ಕಲಬೆರಕೆಗಳು ನಡೆಯುತ್ತಿದ್ದು, ಇದು ಜನಸಾಮಾನ್ಯರ ಆರೋಗ್ಯದ ಮೇಲೆ ಭಾರೀ ಪರಿಣಾಮಗಳನ್ನು ಬೀರುತ್ತಿದೆೆ. ಹಲವು ಮಾರಕ ರೋಗಗಳಿಗೆ ಜನರು ಈಡಾಗುತ್ತಿದ್ದಾರೆ. ಆದುದರಿಂದಲೇ ಖಾದ್ಯ ತೈಲ ಬೆಲೆಯೇರಿಕೆಯ ವಿರುದ್ಧ ಜನರು ಮಾತನಾಡಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

2016ರಿಂದೀಚೆಗೆ ವಾರ್ಷಿಕ ಆಧಾರದಲ್ಲಿ ದಾಖಲಾದ ಖಾದ್ಯ ತೈಲ ದರವು 2021ರಲ್ಲಿ ತೀವ್ರವಾದ ಏರಿಕೆಯನ್ನು ಕಂಡಿದೆ ಎಂದು ಕೇಂದ್ರ ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯವು ಆಗಸ್ಟ್ ತಿಂಗಳ ಮೊದಲ ವಾರ ರಾಜ್ಯಸಭೆಗೆ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಸನ್‌ಫ್ಲವರ್ ಖಾದ್ಯ ತೈಲ ದರದ ಬೆಲೆ ಈ ವರ್ಷ ಶೇ.41ರಷ್ಟು ಹೆಚ್ಚಾಗಿದೆ. ಹಾಗೆಯೇ ಸೋಯಾಬೀನ್ ಎಣ್ಣೆ ಶೇ.37, ಪಾಮೊಲಿನ್ ಶೇ.35, ಎಳ್ಳೆಣ್ಣೆ ಶೇ.29, ನೆಲಗಡಲೆ ಎಣ್ಣೆ ಶೇ.17 ಹಾಗೂ ತಥಾಕಥಿತ ವನಸ್ಪತಿ ದರ ಶೇ.30ರಷ್ಟು ಏರಿಕೆಯಾಗಿದೆ. ಆಮದು ಮಾಡಿಕೊಳ್ಳಲಾಗುವ ಖಾದ್ಯ ತೈಲಗಳು ಬೆಲೆ ಏರಿಕೆಯಲ್ಲಿ ಸಿಂಹಪಾಲನ್ನು ಪಡೆದಿವೆ. ಹೀಗಾಗಿ ಅಧಿಕ ದರದ ಲಾಭಾಂಶದ ಹೆಚ್ಚಿನ ಪಾಲು ಆಮದು ವ್ಯಾಪಾರಿಗಳಿಗೆ ಅಥವಾ ಇತರ ರಾಷ್ಟ್ರಗಳಿಗೆ ಹೋಗುತ್ತಿದೆಯೇ ಹೊರತು ನಮ್ಮ ರೈತರಿಗಲ್ಲ. ಈ ವರ್ಷದ ಕೊನೆಯಲ್ಲಿ ಭಾರತದ ಒಟ್ಟು ಖಾದ್ಯ ತೈಲ ಆಮದು ದರ ಹಾಗೂ ಶುಲ್ಕದಲ್ಲಿ ಅತ್ಯಧಿಕ ಹೆಚ್ಚಳವಾಗಲಿದೆಯೆಂದು ಈಗಾಗಲೇ ಕೈಗಾರಿಕಾ ಹಾಗೂ ಉದ್ಯಮ ಮೂಲಗಳು ಭವಿಷ್ಯ ನುಡಿದಿವೆ.

ಕೃಷಿಯನ್ನೇ ಜೀವನೋಪಾಯವಾಗಿ ನಂಬಿರುವ ಭಾರತವು ಹಲವಾರು ಸ್ವದೇಶಿ ಎಣ್ಣೆ ಬೀಜಗಳ ಸಾಗುವಳಿ ಹಾಗೂ ಸಂಸ್ಕರಣೆಯ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಆದರೂ ಭಾರತವು ತನ್ನ ಖಾದ್ಯ ತೈಲದ ಆಮದು ಅವಶ್ಯಕತೆಗಳ ಶೇ.60ರಷ್ಟನ್ನು ಆಮದು ಮಾಡಿಕೊಳ್ಳಬೇಕಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.ಸಾಂಪ್ರದಾಯಿಕವಾಗಿ ಭಾರತಾದ್ಯಂತ ರೈತರು ನೆಲಗಡಲೆ, ಸಾಸಿವೆ, ತೆಂಗು ಸೇರಿದಂತೆ ಹಲವಾರು ತೈಲಬೀಜಗಳ ಕೃಷಿಯಲ್ಲಿ ಸಮೃದ್ಧ ಅನುಭವವನ್ನು ಹೊಂದಿದ್ದಾರೆ. ಹತ್ತಿ ಬೀಜ ಹಾಗೂ ಸಣ್ಣ ಪ್ರಮಾಣದಲ್ಲಿ ಪೌಷ್ಟಿಕಾಂಶಭರಿತ ತೈಲ ಬೀಜಗಳನ್ನು ಕೂಡಾ ಬೆಳೆಯುತ್ತಿದ್ದಾರೆ. ಇಷ್ಟೆಲ್ಲಾ ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತವು ಆರೋಗ್ಯಕರ ಖಾದ್ಯ ತೈಲ ಉದ್ಯಮ ರಂಗದಲ್ಲಿ ಜಾಗತಿಕ ನಾಯಕನಾಗಿ ಸುಲಭವಾಗಿ ಹೊರಹೊಮ್ಮಬಹುದಾಗಿತ್ತು. ಆ ಮೂಲಕ ಅತಿ ದೊಡ್ಡ ಸಂಖ್ಯೆಯ ರೈತರಿಗೆ ಹಾಗೂ ಸಣ್ಣ ಮಟ್ಟದ ಸಂಸ್ಕರಣಾ ಉದ್ಯಮಿಗಳಿಗೆ ಸುಸ್ಥಿರವಾದ ಜೀವನೋಪಾಯಕ್ಕೆ ಆಧಾರವಾಗಬಹುದಿತ್ತು. ಅದರ ಬದಲು ಅದು ಜಗತ್ತಿನ ಅತಿ ದೊಡ್ಡ ಖಾದ್ಯ ತೈಲ ಆಮದುದಾರನಾಗಿ ಬಿಟ್ಟಿದೆ. ಈ ಪ್ರಮಾದಕ್ಕೆ ಕಾರಣವೇನು ಎನ್ನುವುದನ್ನು ಹುಡುಕುವ ಅಗತ್ಯವಿದೆ.

ಪಾಮ್ ಎಣ್ಣೆಯಂತಹ ಅಗ್ಗದ ಹಾಗೂ ಕಡಿಮೆ ಆರೋಗ್ಯಕರವಾದ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವುದರಿಂದ ಉದ್ಯಮಿಗಳು ಭಾರೀ ಲಾಭವನ್ನು ಕಾಣಲಾರಂಭಿಸಿದ ಬಳಿಕ, ಸ್ವದೇಶಿರೈತರು ತಮ್ಮ ಬೆಳೆಗಳಿಗೆ ನ್ಯಾಯ ಬೆಲೆಯನ್ನು ಪಡೆಯುವುದರಿಂದ ವಂಚಿತರಾಗತೊಡಗಿದರು. ಅಗ್ಗದ ದರದ ಖಾದ್ಯ ತೈಲಗಳನ್ನು ಆಮದುಮಾಡಿಕೊಳ್ಳುವ ಮೂಲಕ ಸ್ವದೇಶಿ ಖಾದ್ಯ ತೈಲ ಉತ್ಪಾದನೆಯನ್ನು ನಿರುತ್ತೇಜಿಸಲಾಯಿತು. ಇದಕ್ಕೆ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲುಟಿಒ) ಕೂಡಾ ಕುಮ್ಮಕ್ಕು ನೀಡಿತು. ಇದರ ಪರಿಣಾಮವಾಗಿ ಸ್ವದೇಶಿ ತೈಲ ಉತ್ಪಾದನೆಗೆ ಬೇಡಿಕೆ ಕುಸಿಯತೊಡಗಿತು. ಇದೇ ಅವಧಿಯಲ್ಲಿ ಆಮದಿತ ಖಾದ್ಯ ತೈಲಗಳು ಆರೋಗ್ಯ ದೃಷ್ಟಿಯಿಂದಲೂ ಕಳಪೆಯಾಗತೊಡಗಿದವು. ಕುಲಾಂತರಿ (ಜಿಎಂ) ಹತ್ತಿ ಬೀಜ ಬಿಟಿ ಕಾಟನ್‌ನ ಉಪ ಉತ್ಪನ್ನವಾದ ಹತ್ತಿ ಬೀಜದ ಎಣ್ಣೆಯನ್ನು ಖಾದ್ಯ ತೈಲಗಳಿಗೆ ಮಿಶ್ರಣಗೊಳಿಸತೊಡಗಿದ್ದರಿಂದ ಜನಸಾಮಾನ್ಯರ ಆರೋಗ್ಯದ ಮೇಲಿನ ಹಾನಿಯು ಇನ್ನಷ್ಟು ಹೆಚ್ಚಿತು. ಇದೇ ವೇಳೆ ಜಿಎಂ ಲಾಬಿಯು ಸಾಸಿವೆ ಬೆಳೆಯನ್ನು ಬೆಳೆಯಲು ಕೂಡಾ ಬಲವಾದ ಪ್ರಯತ್ನಗಳನ್ನು ಮಾಡ ತೊಡಗಿದವು. ಜಿಎಂ ಸಾಸಿವೆ ಬೆಳೆಗಳನ್ನು ಪರಿಚಯಿಸಲು ಜಿಎಂ ಲಾಬಿಯು ಅತ್ಯಂತ ಬಲವಾದ ಪ್ರಯತ್ನಗಳನ್ನು ಮಾಡತೊಡಗಿತು. ಒಂದು ವೇಳೆ ಅದು ಈ ನಿಟ್ಟಿನಲ್ಲಿ ಇನ್ನಷ್ಟು ಯಶಸ್ವಿಯಾದಲ್ಲಿ ದೇಶದ ಜನತೆಯ ಆರೋಗ್ಯ ಮತ್ತು ಪೌಷ್ಟಿಕತೆಯ ಮೇಲೆ ಅತ್ಯಂತ ವಿನಾಶಕಾರಿ ಪರಿಣಾಮವುಂಟಾಗಲಿದೆ.

ಒಮ್ಮೆ ಎಣ್ಣೆ ಬೀಜ ವಲಯದ ಮೇಲೆ ಆಮದು ಉತ್ಪನ್ನಗಳು ಪ್ರಾಬಲ್ಯವನ್ನು ಹೊಂದಿದಲ್ಲಿ ಆಮದಿತ ಖಾದ್ಯತೈಲ ದರದಲ್ಲಿ ಯಾವುದೇ ರೀತಿಯ ಏರಿಕೆಯು ಭಾರತದ ಒಟ್ಟಾರೆ ಖಾದ್ಯ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಗಲಿದೆ. ಇಂತಹ ಸನ್ನಿವೇಶದಲ್ಲಿ ಆಮದು ಖಾದ್ಯ ತೈಲಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿಮೆಗೊಳಿಸುವ ಮೂಲಕ ಖಾದ್ಯ ತೈಲ ದರವನ್ನು ಕಡಿಮೆಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕೆಂಬ ಹೊಸ ಬೇಡಿಕೆಗಳು ಕೇಳಿ ಬರತೊಡಗಿವೆ. ಆದಾಗ್ಯೂ ಖಾದ್ಯ ತೈಲಗಳ ಆಮದಿಗೆ ಅನುಕೂಲ ಮಾಡಿಕೊಡದೆ ಇರುವುದಕ್ಕಾಗಿ ಸರಕಾರ ದೃಢ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಮತ್ತು ಸ್ವದೇಶಿ ರೈತರಿಗೆ ಸಾವಯವ ಎಣ್ಣೆ ಬೀಜಗಳ ಉತ್ಪಾದನೆಯನ್ನು ಹೆಚ್ಚಿಸಲು ಹಲವು ರೀತಿಯ ಉತ್ತೇಜನ ಹಾಗೂ ನೆರವುಗಳನ್ನು ನೀಡಬೇಕಾಗಿದೆ. ಇದನ್ನು ಸಾಕಾರಗೊಳಿಸಲು ಖಾದ್ಯ ತೈಲ ಕ್ಷೇತ್ರದಲ್ಲಿ ಬೃಹತ್ ಉದ್ಯಮ ಸಂಸ್ಥೆಗಳ ಹಾಗೂ ಆಮದುದಾರರ ಲಾಬಿಗಳ ಹಿಡಿತವನ್ನು ಕಡಿಮೆಗೊಳಿಸಿದಲ್ಲಿ ಹಾಗೂ ಕುಲಾಂತರಿ (ಜಿಎಂ)ಬೀಜ ಮಾರಾಟ ಸಂಸ್ಥೆ ದೂರವಿರಿಸಿದಲ್ಲಿ ಮಾತ್ರವೇ ಇದು ಸಾಧ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News