ಪೊಲೀಸರ ವಿಚಾರಣೆ ಮಕ್ಕಳ ಹಕ್ಕನ್ನು ಉಲ್ಲಂಘಿಸಿದೆ ಎಂದ ಹೈಕೋರ್ಟ್

Update: 2021-08-16 15:41 GMT
photo: livelaw.in

ಬೆಂಗಳೂರು,ಆ.16: ಕಳೆದ ವರ್ಷ ಬೀದರ್ n ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನದ ಕುರಿತು ದಾಖಲಾದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸಮವಸ್ತ್ರಧಾರಿ ಮತ್ತು ಶಸ್ತ್ರಸಜ್ಜಿತ ಪೊಲೀಸರು ಉಪಸ್ಥಿತರಿದ್ದುದು ಬಾಲನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ,2015ರ ಗಂಭೀರ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಸೋಮವಾರ ಮೇಲ್ನೋಟದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
 
ಡಿವೈಎಸ್ಪಿ ಬಸವೇಶ್ವರ ಮಾ.16ರಂದು ಸಲ್ಲಿಸಿರುವ ಅಫಿಡವಿಟ್ ಅನ್ನು ನಾವು ಪರಿಶೀಲಿಸಿದ್ದೇವೆ. ತನ್ನ ಉತ್ತರದಲ್ಲಿ ಅವರು ಲಗತ್ತಿಸಿರುವ ಚಿತ್ರದಲ್ಲಿ ಐವರು ಪೊಲೀಸ್ ಅಧಿಕಾರಿಗಳು ಮೂವರು ಶಾಲಾಮಕ್ಕಳನ್ನು (ಇಬ್ಬರು ಬಾಲಕರು, ಓರ್ವ ಬಾಲಕಿ) ವಿಚಾರಣೆ ನಡೆಸುತ್ತಿದ್ದು, ಈ ಪೈಕಿ ನಾಲ್ವರು ಸಮವಸ್ತ್ರ ಧರಿಸಿದ್ದರು ಹಾಗೂ ಅವರಲ್ಲಿ ಕನಿಷ್ಠ ಇಬ್ಬರು ಪಿಸ್ತೂಲುಗಳನ್ನು ಹೊಂದಿದ್ದರು ಎಂದು ಹೇಳಿದ ಮುಖ್ಯ ನ್ಯಾಯಾಧೀಶ ಅಭಯ ಓಕಾ ಮತ್ತು ನ್ಯಾ.ಎನ್.ಎಸ್.ಸಂಜಯ ಗೌಡ ಅವರ ವಿಭಾಗೀಯ ಪೀಠವು,ಇದು ಮಕ್ಕಳ ಹಕ್ಕುಗಳ ಹಾಗೂ ಬಾಲನ್ಯಾಯ ಕಾಯ್ದೆಯ ನಿಯಮ 86(5)ರ ಗಂಭೀರ ಉಲ್ಲಂಘನೆಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಬೆಟ್ಟುಮಾಡಿತು.
 
ಮಕ್ಕಳೊಂದಿಗೆ ಸಂವಾದಿಸುವ ಪೊಲೀಸ್ ಅಧಿಕಾರಿಯು ಸಾಧ್ಯವಿದ್ದಷ್ಟು ಮಟ್ಟಿಗೆ ಸಾದಾ ಉಡುಪನ್ನು ಧರಿಸಿರಬೇಕು ಮತ್ತು ಸಮವಸ್ತ್ರದಲ್ಲಿರಬಾರದು. ಹೆಣ್ಣುಮಗುವಿನೊಂದಿಗೆ ವ್ಯವಹರಿಸುವಾಗ ಅದಕ್ಕಾಗಿ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಬಾಲನ್ಯಾಯ ಕಾಯ್ದೆಯು ಸ್ಪಷ್ಟಪಡಿಸಿದೆ.

ಸಮವಸ್ತ್ರಧಾರಿಗಳಾಗಿ ಮತ್ತು ಶಸ್ತ್ರಸಜ್ಜಿತರಾಗಿ ಶಾಲಾಮಕ್ಕಳ ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನುವುದನ್ನು ದಾಖಲೆಗಳೊಂದಿಗೆ ಅತ್ಯಂತ ಹಿರಿಯ ಅಧಿಕಾರಿಯಿಂದ ಅಫಿಡವಿಟ್ ಸಲ್ಲಿಸುವ ಮೂಲಕ ಉತ್ತರಿಸುವಂತೆ ಪೀಠವು ಸರಕಾರಕ್ಕೆ ನಿರ್ದೇಶ ನೀಡಿತು.

ಕ್ರಮಪಾಲನಾ ವರದಿಯನ್ನು ಸಲ್ಲಿಸುವ ಜೊತೆಗೆ ಮಕ್ಕಳ ಹಕ್ಕುಗಳ ಇಂತಹ ಉಲ್ಲಂಘನೆಗಳ ಪುನರಾವರ್ತನೆಯಾಗದಂತೆ ರಾಜ್ಯಾದ್ಯಂತ ಪೊಲೀಸರಿಗೆ ನಿರ್ದೇಶಗಳನ್ನು ಹೊರಡಿಸುವುದನ್ನು ಸರಕಾರವು ಪರಿಗಣಿಸಬಹುದು ಎಂದೂ ಪೀಠವು ಸೂಚಿಸಿತು.

'ಈ ಕೃತ್ಯವನ್ನು ನಾವು ಕ್ಷಮಿಸಿದರೆ ಅದು ಪುನರಾವರ್ತನೆಯಾಗುತ್ತದೆ. ಇಂತಹ ಕೃತ್ಯವನ್ನೆಂದಿಗೂ ನಾವು ಕ್ಷಮಿಸುವುದಿಲ್ಲ 'ಎಂದು ವಿಚಾರಣೆ ಸಂದರ್ಭ ಪೀಠವು ಮೌಖಿಕವಾಗಿ ತಿಳಿಸಿತು.

ಇಂತಹುದಕ್ಕೆಲ್ಲ ಮಕ್ಕಳನ್ನೇಕೆ ಗುರಿ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಬೇಕು,ಇದು ಹೀಗೆಯೇ ಮುಂದುವರಿಯಲು ಸಾಧ್ಯವಿಲ್ಲ ಎಂದೂ ಪೀಠವು ಹೇಳಿತು. ನ್ಯಾಯವಾದಿ ನಯನಜ್ಯೋತಿ ಝವಾರ್ ಮತ್ತು ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಕಣ್ಗಾವಲು ಘಟಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಉಚ್ಚ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

ಒಂಭತ್ತು ವರ್ಷದ ಕೆಲವು ಮಕ್ಕಳೂ ಸೇರಿದಂತೆ ಸುಮಾರು 85 ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಇದು ಅತ್ಯಂತ ಪ್ರತಿಕೂಲ ವಾತಾವರಣಕ್ಕೆ ಕಾರಣವಾಗಿತ್ತು ಮತ್ತು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡಿತ್ತು ಎಂದು ಅರ್ಜಿದಾರರು ವಾದಿಸಿದ್ದಾರೆ.

ಶಾಹೀನ್ ಶಿಕ್ಷಣ ಸಂಸ್ಥೆಯ 4,5 ಮತ್ತು 6ನೇ ತರಗತಿಗಳ ವಿದ್ಯಾರ್ಥಿಗಳು ಕಳೆದ ವರ್ಷ ಸಿಎಎ ಮತ್ತು ಎನ್ಆರ್ಸಿ ಕುರಿತು ನಾಟಕವೊಂದನ್ನು ಪ್ರದರ್ಶಿಸಿದ್ದರು. ನಿಲೇಶ ರಕ್ಷಲಾ ಎಂಬ ಕಾರ್ಯಕರ್ತ ಸಲ್ಲಿಸಿದ್ದ ದೂರಿನ ಮೇರೆಗೆ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಸಂಸದೀಯ ಕಾನೂನುಗಳ ಬಗ್ಗೆ ಋಣಾತ್ಮಕ ಅಭಿಪ್ರಾಯವನ್ನು ಹರಡುತ್ತಿರುವ ಆರೋಪದಲ್ಲಿ ಬೀದರ್ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಶಾಲಾ ಅಧಿಕಾರಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಮಗುವೊಂದರ ಹೆತ್ತವರನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಪೊಲೀಸರ ಕ್ರಮವು ಕಾನೂನಿನ ಆಡಳಿತ, ಸಿಆರ್ಪಿಸಿ ಮತ್ತು ಬಾಲನ್ಯಾಯ ಕಾಯ್ದೆಯ ವಿವಿಧ ನಿಬಂಧನೆಗಳು ಹಾಗೂ ಸಾಂವಿಧಾನಿಕ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಶಿಕ್ಷಕರು ಮತ್ತು ಹೆತ್ತವರ ಅನುಪಸ್ಥಿತಿಯಲ್ಲಿ ಪೊಲೀಸರು ಮಕ್ಕಳ ವಿಚಾರಣೆ ನಡೆಸಿದ್ದರು ಮತ್ತು ಮಕ್ಕಳ ಅನುಮತಿಯಿಲ್ಲದೆ ಅದನ್ನು ವೀಡಿಯೊ ಚಿತ್ರೀಕರಿಸಿದ್ದರು ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕ್ರಿಮಿನಲ್ ಕಾನೂನು ಕ್ರಮಗಳಲ್ಲಿ ಅಪ್ರಾಪ್ತ ವಯಸ್ಕರ ವಿಚಾರಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು 2005ರಲ್ಲಿ ಹೊರಡಿಸಿದ್ದ ನಿರ್ದೇಶಗಳಿಗೆ ಅನುಗುಣವಾಗಿ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಅರ್ಜಿಯು ಆಗ್ರಹಿಸಿದ್ದು, ಕಾನೂನುಬಾಹಿರವಾಗಿ ವಿಚಾರಣೆಗೊಳಗಾದ ವಿದ್ಯಾರ್ಥಿಗಳ ಹೆತ್ತವರಿಗೆ ಪರಿಹಾರವನ್ನೂ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News