ಇಂಧನ ಬೆಲೆಗಳು ಇಳಿಯಬಹುದೇ? ಎಂಬ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್‌ ಉತ್ತರವೇನು ಗೊತ್ತೇ?

Update: 2021-08-16 17:37 GMT

ಹೊಸದಿಲ್ಲಿ,ಆ.16: ಇಂಧನ ಬೆಲೆಗಳು ಇಳಿಯುವ ಸಾಧ್ಯತೆಯಿದೆಯೇ ಎಂದು ದೇಶದ ಜನರು ತಲೆಕೆಡಿಸಿಕೊಂಡಿರುವ ಮಧ್ಯೆಯೇ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಹಿಂದಿನ ಸರಕಾರವು ತೈಲಕಂಪನಿಗಳಿಗೆ ವಿತರಿಸಿದ್ದ ತೈಲ ಬಾಂಡ್ಗಳ ವೆಚ್ಚವನ್ನು ಭರಿಸುವ ಪ್ರಮೇಯವಿಲ್ಲದಿದ್ದರೆ ಸರಕಾರವು ತೈಲಬೆಲೆಗಳನ್ನು ಇಳಿಸುವ ಮೂಲಕ ಜನರಿಗೆ ನೆಮ್ಮದಿಯನ್ನೊದಗಿಸುತ್ತಿತ್ತು ಎಂದು ಹೇಳಿದ್ದಾರೆ. 

ಮಾಜಿ ಪ್ರಧಾನಿ ಮನಮೋಹನ ಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರಕಾರವು ತೈಲ ಕಂಪನಿಗಳಿಗೆ ನಗದು ಸಬ್ಸಿಡಿಯ ಬದಲು ತೈಲ ಬಾಂಡ್ಗಳನ್ನು ವಿತರಿಸಿತ್ತು ಮತ್ತು ಅವು ಈಗ ನಗದೀಕರಣಕ್ಕಾಗಿ ಸಜ್ಜಾಗಿವೆ.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೀತಾರಾಮನ್ ಪೆಟ್ರೋಲ್ ಮತ್ತು ಡೀಸೆಲ್ಗಳ ಮೇಲಿನ ಅಬಕಾರಿ ಸುಂಕವನ್ನು ಸದ್ಯಕ್ಕೆ ಇಳಿಸಲು ಏಕೆ ಸಾಧ್ಯವಿಲ್ಲ ಎನ್ನುವುದನ್ನು ವಿವರಿಸುತ್ತ,‘1.4 ಲ.ಕೋ.ರೂ.ಗೂ ಮೀರಿದ ಯುಪಿಎದ ತೈಲಬಾಂಡ್ಗಳ ಹೊರೆ ನನ್ನ ತಲೆಯ ಮೇಲೆ ಇದ್ದಿರದಿದ್ದರೆ ನಾನು ಇಂಧನಗಳ ಬೆಲೆಗಳನ್ನು ತಗ್ಗಿಸುತ್ತಿದ್ದೆ ’ಎಂದು ಹೇಳಿದರು.

ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರವು 70,000 ಕೋ.ರೂ.ಗೂ ಹೆಚ್ಚಿನ ಮೊತ್ತವನ್ನು ಕೇವಲ ಬಡ್ಡಿಪಾವತಿಗಾಗಿಯೇ ವ್ಯಯಿಸಿದೆ ಎಂದು ಬಲ್ಲ ಮೂಲಗಳು ಕಳೆದ ಜೂನ್ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದವು.

ಯುಪಿಎ ಆಡಳಿತವು ಇಂಧನಗಳ ಮೇಲಿನ ಸಬ್ಸಿಡಿಯಿಂದಾಗಿ ತೈಲ ಕಂಪನಿಗಳಿಗೆ ಆಗುತ್ತಿದ್ದ ನಷ್ಟವನ್ನು ತೈಲ ಬಾಂಡ್ಗಳನ್ನಾಗಿ ಪರಿವರ್ತಿಸಿತ್ತು ಎಂದು ಕೇಂದ್ರವು ಆರೋಪಿಸಿದೆ.

ಹೆಚ್ಚಿನ ಪೆಟ್ರೋಲಿಯಂ ಬೆಲೆಗಳ ಸಮಸ್ಯೆಯನ್ನು ಬಗೆಹರಿಸಲು ಮಾರ್ಗವೊಂದನ್ನು ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕುಳಿತು ಚರ್ಚಿಸುವ ಅಗತ್ಯವಿದೆ ಎಂದು ಸೀತಾರಾಮನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News