ಪಂಜ್‌ ಶಿರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಪಡೆಗಳ ಜಮಾವಣೆ: ರಶ್ಯಾ ಹೇಳಿಕೆ

Update: 2021-08-19 17:30 GMT
photo : twitter.com/Plaid_Lavrov

ಮಾಸ್ಕೋ, ಆ.19: ಅಫ್ಘಾನ್‌ನ ಪಂಜ್‌ ಶಿರ್ ಕಣಿವೆಯಲ್ಲಿ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಮತ್ತು ಅಹ್ಮದ್ ಮಸೂದ್ ನೇತೃತ್ವದಲ್ಲಿ ತಾಲಿಬಾನ್ ವಿರೋಧಿ ಪಡೆಗಳು ಒಟ್ಟುಗೂಡುತ್ತಿವೆ ಎಂದು ರಶ್ಯಾದ ವಿದೇಶ ವ್ಯವಹಾರ ಸಚಿವ ಸರ್ಗೈ ಲಾವ್ರೋವ್ ಹೇಳಿದ್ದಾರೆ. ಅಫ್ಘಾನ್ ಮೇಲೆ ತಾಲಿಬಾನ್‌ಗಳು ಇನ್ನೂ ಪೂರ್ಣ ನಿಯಂತ್ರಣ ಸಾಧಿಸಿಲ್ಲ. ಪಂಜ್‌ಶಿರ್ ಕಣಿವೆಯಲ್ಲಿ ಮಾಜಿ ಉಪಾಧ್ಯಕ್ಷ ಸಲೇಹ್ ಹಾಗೂ ಅಹ್ಮದ್ ಮಸೂದ್ ನೇತೃತ್ವದಲ್ಲಿ ಪ್ರಭಲ ತಂಡವೊಂದು ಒಟ್ಟುಸೇರುತ್ತಿದೆ ಎಂದು ಲಾವ್ರೋವ್ ಹೇಳಿದ್ದಾರೆ. ಲಿಬ್ಯಾದ ವಿದೇಶ ಸಚಿವರ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ಧಿಗಾರರ ಜತೆ ಮಾತನಾಡಿದರು. ಅಫ್ಘಾನ್‌ನಲ್ಲಿ ಪ್ರಾತಿನಿಧಿಕ ಸರಕಾರದ ರಚನೆಗಾಗಿ ಎಲ್ಲಾ ರಾಜಕೀಯ ಪಕ್ಷಗಳನ್ನು ಒಳಗೊಂಡ ಸಮಗ್ರ ಚರ್ಚೆ ನಡೆಯಬೇಕು ಎಂದವರು ಒತ್ತಾಯಿಸಿದರು.

 ಅಫ್ಘಾನ್‌ನಲ್ಲಿ ರಚನೆಯಾಗಲಿರುವ ನೂತನ ಸರಕಾರದ ಬಗ್ಗೆ ತಾನು ಆಶಾವಾದಿಯಾಗಿದ್ದೇನೆ. ಅಲ್ಲಿರುವ ತನ್ನ ರಾಯಭಾರ ಕಚೇರಿ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ರಶ್ಯಾ ಹೇಳಿದೆ. ಈ ವಾರದ ಆರಂಭದಲ್ಲಿ ರಶ್ಯಾದ ರಾಯಭಾರಿ ಕಾಬೂಲ್‌ನಲ್ಲಿ ತಾಲಿಬಾನ್ ಜತೆ ಮಾತುಕತೆ ನಡೆಸಿದ್ದರು.

ಇನ್ನೂ ತಾಲಿಬಾನ್‌ಗಳ ವಶಕ್ಕೆ ಬಾರದಿರುವ ಕಾಬೂಲ್‌ನ ಈಶಾನ್ಯದಲ್ಲಿರುವ ಹಿಂದುಕುಶ್ ಪ್ರಾಂತ್ಯದ ಪಂಜ್‌ಶಿರ್ ಕಣಿವೆಯಲ್ಲಿ ಸಲೇಹ್ ಭೂಗತರಾಗಿರುವುದಾಗಿ ಊಹಿಸಲಾಗಿದೆ. ಇವರೊಂದಿಗೆ ತಾಲಿಬಾನ್ ವಿರೋಧಿ ಹೋರಾಟಗಾರರ ತಂಡದ ಮುಖಂಡ ಅಹ್ಮದ್ ಶಾ ಮಸೂದ್‌ನ ಪುತ್ರ ಇದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ಸಾಕಷ್ಟು ಬಲಿಷ್ಟ ಹೋರಾಟಗಾರರ ಪಡೆಯೊಂದಿದ್ದು, ಮುಂದಿನ ದಿನಗಳಲ್ಲಿ ತಾಲಿಬಾನ್‌ಗಳ ವಿರುದ್ಧ ಹೊಂಚುದಾಳಿ(ಗೆರಿಲ್ಲಾ ಅಭಿಯಾನ)ಯ ಮೂಲಕ ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಪ್ರಕೃತಿದತ್ತ ರಕ್ಷಣಾ ಗೋಡೆಯನ್ನು ಹೊಂದಿರುವ ಪಂಜ್‌ಶಿರ್ ಕಣಿವೆ 1990ರ ಅಂತರ್ಯುದ್ಧದ ಸಂದರ್ಭದಲ್ಲೂ ತಾಲಿಬಾನ್ ಕೈವಶವಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News