ದ್ರೋಣಾಚಾರ್ಯ ಪ್ರಶಸ್ತಿಗೆ ಏಕಲವ್ಯನ ಹೆಸರಿಡಬಾರದೆ?

Update: 2021-08-20 04:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಇನ್ನೊಬ್ಬರ ಮಗುವಿನ ಹೆಸರನ್ನು ಬದಲಿಸಿ, ತನಗಿಷ್ಟ ಬಂದ ಹೆಸರಿಟ್ಟಾಕ್ಷಣ ಆ ಮಗು ಅವನದಾಗುತ್ತದೆಯೇ?’ ಹೆರಿಗೆಯ ನೋವೇ ಇಲ್ಲದೆ ಹೆಸರು ಬದಲಾಯಿಸಿ ಇನ್ನೊಬ್ಬರ ಮಕ್ಕಳಿಗೆ ತಂದೆಯೆನಿಸಿಕೊಳ್ಳುವ ಬಿಜೆಪಿಯ ಚಾಳಿ ಅತಿರೇಕಕ್ಕೆ ತಲುಪಿದೆ. ಇದು ಬಿಜೆಪಿ ಮಾಡುತ್ತಿರುವ ಬಂಡವಾಳವಿಲ್ಲದ ವ್ಯಾಪಾರ. ಹೊಸ ಯೋಜನೆಗಳನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದು, ತಮ್ಮ ನಾಯಕರ ಹೆಸರಿಡುವುದಕ್ಕೆ ಸಾಕಷ್ಟು ಶ್ರಮ, ಬಂಡವಾಳ, ಸಮಯದ ಅಗತ್ಯವಿದೆ. ಇದರ ಬದಲು, ಹಿಂದಿನ ಸರಕಾರ ರೂಪಿಸಿರುವ ಯೋಜನೆಗಳ ಹೆಸರನ್ನು ಬದಲಿಸಿ, ಹೊಸದಾಗಿ ನಾಮಕರಣ ಮಾಡಿದರೆ? ಆರ್ಥಿಕವಾಗಿ ಜರ್ಜರಿತವಾಗಿರುವ ದೇಶದ ಅಭಿವೃದ್ಧಿಯ ಬಗ್ಗೆ ಯೋಚಿಸಲು ಸಾಧ್ಯವಿಲ್ಲದ ಕೇಂದ್ರ ಸರಕಾರ, ಜನರನ್ನು ಯಾಮಾರಿಸಲು ಇದೀಗ ‘ಹೆಸರು ಬದಲಾವಣೆ’ಯ ಮೊರೆ ಹೊಕ್ಕಿದೆ.

ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಈ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದರು. ಯಾವುದೇ ನಗರ, ಪಟ್ಟಣ ಅಥವಾ ಇನ್ನಿತರ ಸ್ಮಾರಕಗಳ ಹೆಸರುಗಳ ಹಿಂದೆ ಒಂದು ಇತಿಹಾಸ, ಪರಂಪರೆಯಿರುತ್ತದೆ. ಆ ಹೆಸರನ್ನು ಅಳಿಸಲು ಮುಂದಾಗುವ ಮೂಲಕ ಸರಕಾರ ಈ ದೇಶದ ಪರಂಪರೆಯನ್ನು ಅಳಿಸುವುದಕ್ಕೆ ಹೊರಡುತ್ತದೆ. ಸದ್ಯ ದೇಶ ಎದುರಿಸುತ್ತಿರುವ ಸವಾಲುಗಳಿಗೂ ಈ ಹೆಸರು ಬದಲಾವಣೆಗಳಿಗೂ ಯಾವ ಸಂಬಂಧವೂ ಇಲ್ಲ. ದೇಶದ ಪಾಲಿಗೆ ಈ ಹೆಸರು ಬದಲಾವಣೆ ಯಾವ ರೀತಿಯಲ್ಲೂ ಅನಿವಾರ್ಯವೂ ಅಲ್ಲ. ಹೆಸರಿನ ಬದಲಾವಣೆಗಳಿಗೆ ಹಲವು ರೀತಿಯ ಸಾಮಾಜಿಕ, ರಾಜಕೀಯ, ಆರ್ಥಿಕ ಮುಖಗಳಿವೆ.

ಹಿಂದೆ ಬಿಪಿಎಲ್ ಕಾರ್ಡ್ ಅಥವಾ ಬಡತನದ ರೇಖೆಗಿಂತ ಕೆಳಗಿರುವವರನ್ನು, ಸರಕಾರ ಮೇಲೆತ್ತಿದ್ದೂ ಇದೇ ಹೆಸರು ಬದಲಾವಣೆ ಮಾಡುವ ಮೂಲಕ. ಬಡವರನ್ನು ಗುರುತಿಸುವ ಮಾನದಂಡಗಳನ್ನು ಬದಲಿಸುವುದೂ ಒಂದು ರೀತಿಯಲ್ಲಿ ಹೆಸರನ್ನು ಬದಲಿಸಿದಂತೆಯೇ. ದಿನಕ್ಕೆ 35 ರೂಪಾಯಿ ದುಡಿಯುವವರು ಇಂದಿನಿಂದ ಶ್ರೀಮಂತರು ಎಂದು ಸರಕಾರ ಕರೆದರೆ, ದೇಶದ ತುಂಬಾ ಶ್ರೀಮಂತರೇ ತುಂಬಿ ತುಳುಕುತ್ತಾರೆ. ಹಂತ ಹಂತವಾಗಿ ಈ ದೇಶದ ಬಿಪಿಎಲ್ ಕಾರ್ಡ್‌ದಾರರನ್ನು ಸರಕಾರ ಮೇಲೆತ್ತಿದ್ದು ಇಂತಹ ಬದಲಾವಣೆಯ ಮೂಲಕ. ಆ ಬಳಿಕ ನಿಧಾನಕ್ಕೆ ಊರು, ನಗರಗಳ ಹೆಸರುಗಳನ್ನು ಬದಲಾಯಿಸುವ ಮೂಲಕ ದೇಶವನ್ನು ಪುರಾತನ ವೈಭವೋಪೇತ ‘ರಾಜ ಮಹಾರಾಜ’ರ ಕಾಲಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಯಿತು. ಇನ್ನೇನು ಕೆಲವೇ ವರ್ಷಗಳಲ್ಲಿ ತಾಜ್‌ಮಹಲ್ ‘ತೇಜೋಮಹಲ್’ ಆಗಿ ಭಾರತ ಪ್ರಜ್ವಲಿಸುವ ದಿನಗಳು ಬರಬಹುದು. ಈ ಮೂಲಕ ಭಾರತವನ್ನು ವೇದಕಾಲದ ‘ಸ್ವರ್ಣಯುಗದೆಡೆಗೆ’ ಕೊಂಡೊಯ್ಯುವ ಭರವಸೆಯನ್ನು ಸರಕಾರ ಈಡೇರಿಸುತ್ತಿದೆ. ಈ ಹೆಸರು ಬದಲಾವಣೆಯ ಅಫೀಮಿನ ವಿಸ್ಮತಿಯಲ್ಲಿ ಜನರು ವಾಸ್ತವವನ್ನು ಮರೆಯುತ್ತಿದ್ದಾರೆ.

ಇತ್ತೀಚೆಗೆ ರಾಜೀವ್‌ಗಾಂಧಿ ಖೇಲ್ ರತ್ನ್ನ ಪ್ರಶಸ್ತಿಯನ್ನು ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯಾಗಿ ಸರಕಾರ ಬದಲಿಸಿತು. ಈ ಮೂಲಕ, ತಾನು ಧ್ಯಾನ್‌ಚಂದ್‌ಗೆ ಗೌರವವನ್ನು ಸಲ್ಲಿಸಿದೆ ಎಂದೂ ಸರಕಾರ ಹೇಳಿಕೊಂಡಿದೆ. ಆದರೆ ಸರಕಾರ ಧ್ಯಾನ್‌ಚಂದ್‌ರನ್ನು ಗೌರವಿಸುವುದಕ್ಕಿಂತ, ರಾಜೀವ್‌ಗಾಂಧಿಯ ಹೆಸರನ್ನು ಅವಮಾನಿಸುವ ದುರುದ್ದೇಶವನ್ನು ಹೊಂದಿತ್ತು. ಕ್ರೀಡೆ ಜನರ ಹೃದಯವನ್ನು ಬೆಸೆಯುವ ಉದ್ದೇಶವನ್ನು ಹೊಂದಿದೆ. ಜಾತಿ, ಧರ್ಮ, ಪಕ್ಷ, ದೇಶ ಎಲ್ಲ ಗಡಿಗಳನ್ನು ಅಳಿಸಿ ಜನರನ್ನು ಒಂದಾಗಿಸುವ ಶಕ್ತಿ ಕ್ರೀಡೆಗಿದೆ. ಇಂತಹ ಕ್ರೀಡೆಯ ಏಕತೆಯನ್ನು ಹೆಸರಿನ ರಾಜಕೀಯದ ಮೂಲಕ ಒಡೆಯಲು ಪ್ರಯತ್ನಿಸಿರುವುದು ಖೇದಕರ. ರಾಜೀವ್‌ಗಾಂಧಿ ಈ ದೇಶವನ್ನು ಕಂಪ್ಯೂಟರ್ ಯುಗಕ್ಕೆ ಮುನ್ನಡೆಸಿದ ನಾಯಕ. 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡಿದವರು. 21ನೇ ಶತಮಾನಕ್ಕೆ ದೇಶವನ್ನು ಸಿದ್ಧಪಡಿಸಿದ, ಯುವಕರ ಕುರಿತಂತೆ ಅಪಾರ ಕಾಳಜಿಯಿದ್ದ ನಾಯಕ. ಅಷ್ಟೇ ಅಲ್ಲ, ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದವರು.

ಅಂದಿನ ಸರಕಾರ ಒಂದು ಪ್ರಶಸ್ತಿಯನ್ನು ಘೋಷಿಸಿ ಅದಕ್ಕೆ ರಾಜೀವ್‌ಗಾಂಧಿಯ ಹೆಸರನ್ನು ನೀಡಿದ್ದಿದ್ದರೆ ಅದಕ್ಕೆ ಅದರದೇ ಕಾರಣವಿರಬಹುದು. ಈ ಸರಕಾರ ಹೊಸತೊಂದು ಪ್ರಶಸ್ತಿಯನ್ನು ಪ್ರಕಟಿಸಿ ಅದಕ್ಕೆ ಧ್ಯಾನ್‌ಚಂದ್ ಹೆಸರಿಟ್ಟಿದ್ದರೆ, ಕ್ರೀಡೆಗೂ, ಧ್ಯಾನ್‌ಚಂದ್‌ಗೂ ಗೌರವ ನೀಡಿದಂತಾಗುತ್ತಿತ್ತು ಅಥವಾ ಇತ್ತೀಚೆಗೆ ಅಹ್ಮದಾಬಾದ್‌ನಲ್ಲಿ ಉದ್ಘಾಟನೆಗೊಂಡ ವಿಶ್ವದ ಅತಿದೊಡ್ಡ ಕ್ರೀಡಾಂಗಣಕ್ಕೆ ಮೋದಿಯವರು ತಮ್ಮ ಹೆಸರಿನ ಬದಲು ಧ್ಯಾನ್‌ಚಂದ್ ಹೆಸರಿಡುವ ಅವಕಾಶವಿತ್ತು. ಆದರೆ ರಾಜಕೀಯ ದ್ವೇಷಕ್ಕೆ ಒಂದು ಪ್ರಶಸ್ತಿಯ ಹೆಸರನ್ನು ಬಲಿಕೊಡುವ ಮೂಲಕ ಕ್ರೀಡೆಗೂ ಧ್ಯಾನ್‌ಚಂದ್‌ರಿಗೂ ಏಕಕಾಲದಲ್ಲಿ ಸರಕಾರ ಅವಮಾನ ಮಾಡಿದೆ. ನಿಜಕ್ಕೂ ಕೆಲವೊಮ್ಮೆ ಕೆಲವೊಂದು ಹೆಸರುಗಳು ಪ್ರಶಸ್ತಿಯನ್ನು ಅಣಕಿಸುವಂತಿರುತ್ತವೆ. ಅದಕ್ಕೆ ಅತ್ಯುತ್ತಮ ಉದಾಹರಣೆ, ಕ್ರೀಡಾ ತರಬೇತುದಾರರಿಗೆ ನೀಡುತ್ತಾ ಬರುತ್ತಿರುವ ‘ದ್ರೋಣಾಚಾರ್ಯ’ ಪ್ರಶಸ್ತಿ. ಜೊತೆಗೆ ದ್ರೋಣಾಚಾರ್ಯರ ಅಪ್ಪಟ ಶಿಷ್ಯ ಅರ್ಜುನನ ಹೆಸರಲ್ಲೂ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ದ್ರೋಣಾಚಾರ್ಯ ಯಾರಿಗೆ ತರಬೇತಿ ಕೊಟ್ಟ, ಯಾರ ಹೆಬ್ಬೆರಳನ್ನು ಕತ್ತರಿಸಿಕೊಂಡ ಎಂಬುದನ್ನು ನಾವೆಲ್ಲ ಪುರಾಣದಲ್ಲಿ ಓದಿದ್ದೇವೆ. ದ್ರೋಣಾಚಾರ್ಯ ಬಿಲ್ವಿದ್ಯೆಯನ್ನು ಕಲಿಸಿದ್ದು ಕ್ಷತ್ರಿಯರ ಮಕ್ಕಳಿಗೆ. ಇದೇ ಸಂದರ್ಭದಲ್ಲಿ ದ್ರೋಣರ ಮೂರ್ತಿಯನ್ನು ಮಾಡಿ ಅದನ್ನು ಪೂಜಿಸಿ ಬಿಲ್ವಿದ್ಯೆಯನ್ನು ಸ್ವಯಂ ಕಲಿತ ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿ ಆತನ ಭವಿಷ್ಯವನ್ನೇ ದ್ರೋಣಾಚಾರ್ಯರು ನಾಶ ಮಾಡಿದರು. ಉಳ್ಳವರಿಗೆ, ಮೇಲ್‌ಜಾತಿಗಷ್ಟೇ ಶಿಕ್ಷಣ ಕಲಿಸುವ ದ್ರೋಣರ ಪಾತ್ರ ಯಾವ ರೀತಿಯಲ್ಲೂ ಒಬ್ಬ ಕ್ರೀಡಾ ತರಬೇತಿದಾರನಿಗೆ ಆದರ್ಶವಾಗಲಾರದು. ಹಾಗೆಯೇ, ಸೂತ ಪುತ್ರ ಕರ್ಣನನ್ನು ಮೋಸದಿಂದ ಕೊಂದ ಅರ್ಜುನ ಕೂಡ ಒಬ್ಬ ಅಪ್ಪಟ ಕ್ರೀಡಾಳುವಿಗೆ ಆದರ್ಶನಾಗಲಾರ. ಇಂದು ಕ್ರೀಡಾವಲಯವನ್ನು ದ್ರೋಣರ ಮನಸ್ಥಿತಿಯ ಜನರೇ ಮುತ್ತಿಕೊಂಡಿರುವುದು ಕಾಕತಾಳೀಯವಲ್ಲ.

ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ನೀಡುವ ಏಕಲವ್ಯ ಪ್ರಶಸ್ತಿಯನ್ನು ರಾಷ್ಟ್ರಮಟ್ಟದಲ್ಲಿ ನೀಡಬೇಕಾಗಿದೆ. ದ್ರೋಣಾಚಾರ್ಯರ ಹೆಸರಲ್ಲಿ ಕೊಡುವ ಪ್ರಶಸ್ತಿಯನ್ನು ಏಕಲವ್ಯನ ಹೆಸರಿಗೆ ಬದಲಾಯಿಸಬೇಕು. ಆ ಮೂಲಕ ಕ್ರೀಡಾಲೋಕದೊಳಗಿರುವ ಭ್ರಷ್ಟಾಚಾರ, ಜಾತೀಯತೆಗಳು ಒಂದಿಷ್ಟಾದರೂ ತಗ್ಗಬಹುದೋ ನೋಡಬೇಕು. ಯಾಕೆಂದರೆ ನಮ್ಮ ಕ್ರೀಡಾಕ್ಷೇತ್ರದಲ್ಲಿ ಸ್ವಯಂಸಾಧಕ ಏಕಲವ್ಯರ ಸಂಖ್ಯೆಗಿಂತ ಹೆಬ್ಬೆರಳು ಕತ್ತರಿಸುವ ದ್ರೋಣಾಚಾರ್ಯರ ಸಂಖ್ಯೆ ದೊಡ್ಡದಿದೆ. ಕ್ರೀಡಾ ಸಾಧನೆಗೆ ಈ ದ್ರೋಣಚಾರ್ಯರೇ ದೊಡ್ಡ ತಡೆಯಾಗಿದ್ದಾರೆ. ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್ ಸುದ್ದಿ ಮಾಡುತ್ತಿದೆ.

ಇಂದಿರಾ ಗಾಂಧಿಯ ಮೇಲೆ ಹಲವು ಆರೋಪಗಳು ಇವೆಯಾದರೂ, ತಾನು ಬದುಕಿರುವವರೆಗೆ ‘ಬಡವರ ಹೆಸರಲ್ಲಿ’ ರಾಜಕೀಯ ಮಾಡಿದರೇ ಹೊರತು, ದೇವರ ಹೆಸರಲ್ಲಿ ಅಲ್ಲ. ಬಡವರಿಗೆ ಅನ್ನ ಕೊಡುವ ಮಾತನಾಡಿದ ತಾಯಿ ಆಕೆ. ಉಳ್ಳವರಿಂದ ಭೂಮಿಯನ್ನು ಕಸಿದು ಗೇಣಿದಾರರಿಗೆ ನೀಡಿದರು. ದಲಿತರಿಗೆ ತನ್ನ ಅಧಿಕಾರಾವಧಿಯಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಿದರು. ಇಂತಹ ಮಹಿಳೆಯ ಹೆಸರಿನಲ್ಲಿ ನಾಡಿನ ಬಡವರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ದೊಡ್ಡ ಕೊಡುಗೆ ‘ಇಂದಿರಾ ಕ್ಯಾಂಟೀನ್’. ಕೊರೋನ ಕಾಲದಲ್ಲಿ ಸಾವಿರಾರು ಜನರ ಹೊಟ್ಟೆಯ ಬೆಂಕಿಯನ್ನು ತಣಿಸಿದ ಹೆಗ್ಗಳಿಕೆಯನ್ನು ಇದು ಹೊಂದಿದೆ. ಈ ಕ್ಯಾಂಟೀನ್‌ಗೆ ಇನ್ನಷ್ಟು ಸವಲತ್ತುಗಳನ್ನು ಒದಗಿಸಿ ವಿಸ್ತರಿಸಬೇಕಾದುದು ಇಂದಿನ ಅಗತ್ಯ ಹೊರತು, ಅದರ ಹೆಸರನ್ನು ಬದಲಾಯಿಸುವುದು ಅಲ್ಲ ಅಥವಾ ಬಡವರಿಗಾಗಿ ಹೊಸ ಯೋಜನೆಯೊಂದನ್ನು ರೂಪಿಸಿ ತಮಗೆ ಪ್ರಾತಃಸ್ಮರಣೀಯರಾಗಿರುವವರ ಹೆಸರನ್ನಿಡಬಹುದು. ಅದರ ಬದಲು ಸಿದ್ದರಾಮಯ್ಯ ಹೆತ್ತ ಮಗುವಿನ ಹೆಸರನ್ನು ಬದಲಿಸಿ ತನ್ನ ಮಗುವೆಂದು ಘೋಷಿಸಲು ಹೊರಡುವುದು ಬಿಜೆಪಿಗೆ ಭೂಷಣವಲ್ಲ. ಹೀಗಾದಲ್ಲಿ, ಮುಂದೊಂದು ದಿನ ಸರಕಾರ ‘ಕೊರೋನ’ ಹೆಸರನ್ನೇ ಬದಲಿಸಿ, ರಾಜ್ಯದಿಂದ ಕೊರೋನವನ್ನು ಇಲ್ಲವಾಗಿಸುವ ದಿನ ದೂರವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News