ಬಿಹಾರ ಮತ್ತು ಜಾರ್ಖಂಡ್ ಪುನರ್ರಚನೆಯ ಬಳಿಕ ವ್ಯಕ್ತಿ ಯಾವುದೇ ರಾಜ್ಯದಲ್ಲಿ ಮೀಸಲಾತಿಗೆ ಅರ್ಹ: ಸುಪ್ರೀಂ ಕೋರ್ಟ್

Update: 2021-08-20 16:49 GMT

ಹೊಸದಿಲ್ಲಿ,ಆ.20: ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ಬಿಹಾರ ರಾಜ್ಯವನ್ನು 2000,ನವಂಬರ್ ನಲ್ಲಿ ವಿಭಜಿಸಿ ಜಾರ್ಖಂಡ್ ಅನ್ನು ಪ್ರತ್ಯೇಕ ರಾಜ್ಯವಾಗಿ ರೂಪಿಸಿರುವ ಹಿನ್ನೆಲೆಯಲ್ಲಿ ಮೀಸಲು ವರ್ಗಕ್ಕೆ ಸೇರಿದ ವ್ಯಕ್ತಿಯು ಇವೆರಡರ ಪೈಕಿ ಯಾವುದೇ ರಾಜ್ಯದಲ್ಲಿ ಮೀಸಲಾತಿ ಪಡೆಯಬಹುದು, ಆದರೆ ಏಕಕಾಲದಲ್ಲಿ ಎರಡೂ ರಾಜ್ಯಗಳಲ್ಲಿ ಮೀಸಲಾತಿಯ ಲಾಭವನ್ನು ಪಡೆಯುವಂತಿಲ್ಲ ಎಂದು ಎತ್ತಿ ಹಿಡಿದಿದೆ.

ಬಿಹಾರದ ನಿವಾಸಿಗಳಾಗಿರುವ ಮೀಸಲು ಸಮುದಾಯಗಳ ಸದಸ್ಯರು ಜಾರ್ಖಂಡ್ ರಾಜ್ಯದಲ್ಲಿ ಮುಕ್ತ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಾಗ ಅವರನ್ನು ವಲಸಿಗರೆಂದು ಪರಿಗಣಿಸಬೇಕು ಮತ್ತು ಅವರು ಮೀಸಲಾತಿಯ ಯಾವುದೇ ಸೌಲಭ್ಯವನ್ನು ಕೇಳದೆ ಸಾಮಾನ್ಯ ವರ್ಗದಲ್ಲಿ ಭಾಗವಹಿಸಬಹುದು. ಈ ನೀತಿಯು ಜಾರ್ಖಂಡ್ ನಿವಾಸಿಗಳಿಗೂ ಅನ್ವಯಿಸುತ್ತದೆ ಎಂದೂ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಅಜಯ್ ರಸ್ತೋಗಿ ಅವರ ಪೀಠವು ಎತ್ತಿ ಹಿಡಿದಿದೆ.

ತಾನು ಬಿಹಾರದ ಪಾಟ್ನಾದ ಕಾಯಂ ನಿವಾಸಿಯೆಂದು ತನ್ನ ವಿಳಾಸದ ಪುರಾವೆಯು ತೋರಿಸುತ್ತಿದೆ ಎಂಬ ಕಾರಣದಿಂದ ರಾಜ್ಯ ಸರಕಾರಿ ಸೇವೆಗಳ ಪರೀಕ್ಷೆಯಲ್ಲಿ ತನಗೆ ನೇಮಕಾತಿಯನ್ನು ನಿರಾಕರಿಸಿದ್ದ ಉಚ್ಚ ನ್ಯಾಯಾಲಯದ 2:1 ಬಹುಮತದ ಆದೇಶದ ವಿರುದ್ಧ ಜಾರ್ಖಂಡ್ ನಿವಾಸಿಯಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಪಂಕಜ್ ಕುಮಾರ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು.

2020,ಫೆ.24ರ ಉಚ್ಚ ನ್ಯಾಯಾಲಯದ ತೀರ್ಪು ಕಾನೂನಿನಲ್ಲಿ ಸುಸ್ಥಿರವಲ್ಲ ಎಂದು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯವು ಅದನ್ನು ತಳ್ಳಿಹಾಕಿತು.

2007ರ ಜಾಹೀರಾತು ಸಂಖ್ಯೆ 11ಕ್ಕೆ ಸಂಬಂಧಿಸಿದಂತೆ ಆಯ್ಕೆಯಾಗಿರುವ ಪಂಕಜ ಕುಮಾರ್ ಅವರನ್ನು ಆರು ವಾರಗಳಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಮತ್ತು ಅವರು ಆದೇಶಪತ್ರದಲ್ಲಿಯ ತನ್ನ ನಿಯೋಜನೆಯಂತೆ ಜ್ಯೇಷ್ಠತೆಗೆ ಅರ್ಹರಾಗಿರುತ್ತಾರೆ ಎಂದೂ ಸರ್ವೋಚ್ಚ ನ್ಯಾಯಾಲಯವು ನಿರ್ದೇಶ ನೀಡಿತು.

1974ರಲ್ಲಿ ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಪಂಕಜ ಕುಮಾರ ಜನಿಸಿದ್ದು,ಪಾಟ್ನಾದ ಕಾಯಂ ನಿವಾಸಿಯಾಗಿದ್ದ ಅವರ ತಂದೆ ಹಜಾರಿಬಾಗ್ದಲ್ಲಿ ಉದ್ಯೋಗದಲ್ಲಿದ್ದರು. 1989ರಲ್ಲಿ ತನ್ನ 15ನೇ ವಯಸ್ಸಿನಲ್ಲಿ ಪಂಕಜ ಕುಮಾರ ರಾಂಚಿಗೆ ಸ್ಥಳಾಂತರಗೊಂಡಿದ್ದು, ಬಿಹಾರ ಪುನರ್ರಚನೆಯ ಬಳಿಕ ರಾಂಚಿ ಜಾರ್ಖಂಡ್ನ ರಾಜಧಾನಿಯಾಗಿತ್ತು.

1999,ಡಿ.21ರಂದು ರಾಂಚಿಯ ಶಾಲೆಯೊಂದರಲ್ಲಿ ಸಹಾಯಕ ಶಿಕ್ಷಕನಾಗಿ ನೇಮಕಗೊಂಡಿದ್ದ ಪಂಕಜ ಕುಮಾರ 2008ರವರೆಗೂ ಅದೇ ಶಾಲೆಯಲ್ಲಿ ಸೇವೆಯಲ್ಲಿ ಮುಂದುವರಿದಿದ್ದರು. 2008ರಲ್ಲಿ ಜಾರ್ಖಂಡ್ನಲ್ಲಿ ಮೂರನೇ ಸಂಯುಕ್ತ ಸಿವಿಲ್ ಪರೀಕ್ಷೆಗಳಿಗೆ ಹಾಜರಾಗಿದ್ದ ಅವರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು.

2007,ಜ.12ರಂದು ಅವರು ತನ್ನನ್ನು ರಾಂಚಿ ನಿವಾಸಿಯನ್ನಾಗಿ ಉಲ್ಲೇಖಿಸಿ ಸಿವಿಲ್ ಪರೀಕ್ಷೆಗಳಿಗೆ ಸಲ್ಲಿಸಿದ್ದ ಅರ್ಜಿಯೊಂದಿಗೆ ಲಗತ್ತಿಸಿದ್ದ ಜಾತಿ ಪ್ರಮಾಣಪತ್ರದಲ್ಲಿ ಅವರ ಮೂಲವಿಳಾಸವನ್ನು ಪಾಟ್ನಾ ಎಂದು ತೋರಿಸಲಾಗಿತ್ತು.
 ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News