ಮೂರನೇ ಮಗುವಿಗಾಗಿ ಹಂಬಲಿಸುತ್ತಿರುವ ಚೀನಾ!

Update: 2021-08-21 04:38 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸ್ವಾತಂತ್ರಾನಂತರ ಚೀನಾದ ಜೊತೆಗೆ ಭಾರತ ನಿರಂತರ ಸ್ಪರ್ಧೆಯಲ್ಲಿದೆ. ಆ ಸ್ಪರ್ಧೆಯಲ್ಲಿ ಭಾರತ ‘ಜನಸಂಖ್ಯೆಯ ವಿಷಯ’ದಲ್ಲಿ ಒಂದಿಷ್ಟು ಯಶಸ್ಸನ್ನು ಸಾಧಿಸಿದೆ. ಅಷ್ಟೇ ಅಲ್ಲ, ಇನ್ನೆರಡು ದಶಕದಲ್ಲಿ ಚೀನಾವನ್ನು ಭಾರತ ಮೀರಿಸುವ ಸಾಧ್ಯತೆಯ ಕುರಿತಂತೆಯೂ ವರದಿಗಳು ಬರುತ್ತಿವೆ. ಈ ಜನಸಂಖ್ಯಾ ವಿಷಯದಲ್ಲಿ ‘ಸ್ಪರ್ಧೆ’ ಹೇಗಿರಬೇಕು ಎನ್ನುವುದರ ಕುರಿತಂತೆ ಸ್ಪಷ್ಟ ನಿಲುವು ಉಭಯ ದೇಶಗಳಿಗೂ ಇದ್ದಂತಿಲ್ಲ. ಹೆಚ್ಚಳವಾಗುತ್ತಿದ್ದ ಜನಸಂಖ್ಯೆಯನ್ನು ಇಳಿಸುವುದಕ್ಕಾಗಿ ಎರಡು ದೇಶಗಳು ಕಳೆದ ನಾಲ್ಕು ದಶಕಗಳಿಂದ ಹೆಣಗಾಡುತ್ತಿದ್ದವು. ಇಲ್ಲವಾದರೆ ‘ಜನಸಂಖ್ಯಾ ಸ್ಫೋಟ’ವಾಗುತ್ತದೆ ಎಂದು ಅರ್ಥ ಶಾಸ್ತ್ರಜ್ಞರು ಉಭಯ ದೇಶಗಳನ್ನು ಬೆದರಿಸುತ್ತಾ ಬಂದಿದ್ದಾರೆ. ಚೀನಾ ಮತ್ತು ಭಾರತ ಭೌಗೋಳಿಕವಾಗಿಯೂ ವಿಸ್ತಾರ ಪ್ರದೇಶವನ್ನು ಹೊಂದಿವೆ. ಜನಸಂಖ್ಯಾ ಸ್ಫೋಟವನ್ನು ಗಂಭೀರವಾಗಿ ತೆಗೆದುಕೊಂಡ ಚೀನಾ, ‘ಒಂದು ಕುಟುಂಬಕ್ಕೆ ಒಂದೇ ಮಗು’ ಎಂಬ ನಿಯಮವನ್ನು ಆರು ದಶಕಗಳ ಹಿಂದೆ ಜಾರಿಗೊಳಿಸಿ ಬಿಟ್ಟಿತು. ಸರ್ವಾಧಿಕಾರವನ್ನು ಹೊಂದಿರುವ ಚೀನಾದಲ್ಲಿ ಇಂತಹ ಕಠಿಣ ನಿಯಮವನ್ನು ಜಾರಿಗೊಳಿಸುವುದು ಕಷ್ಟವೇನಿರಲಿಲ್ಲ. ಜನಸಂಖ್ಯಾ ನಿಯಂತ್ರಣ ವಿಷಯದಲ್ಲಿ ಚೀನಾವನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಹಲವು ಸ್ವದೇಶಿ ಚಿಂತಕರು ವಾದ ಮಂಡಿಸಿದ್ದರು. ಮಕ್ಕಳನ್ನು ಹೊಂದುವ ವಿಷಯದಲ್ಲಿ ಬಲವಂತ ಅಥವಾ ಹೇರಿಕೆ ಪ್ರಜಾಪ್ರಭುತ್ವ ದೇಶವಾಗಿರುವ ಭಾರತಕ್ಕೆ ಸಲ್ಲ ಎಂದು ನಮ್ಮ ಹಿರಿಯರು ಮನಗಂಡು, ಕುಟುಂಬ ಯೋಜನೆಯನ್ನು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಅರ್ಥಪೂರ್ಣವಾಗಿ ಜಾರಿಗೊಳಿಸಿದರು. ಪರಿಣಾಮವಾಗಿ ಇಂದು ಸಮಸ್ಯೆಯಾಗುವಷ್ಟು ಜನಸಂಖ್ಯೆಯನ್ನೇನೂ ದೇಶ ಹೊಂದಿಲ್ಲ.

ಭಾರತದ ಸಂಪನ್ಮೂಲ ಮತ್ತು ಭೌಗೋಳಿಕ ಪ್ರದೇಶಕ್ಕೆ ಹೋಲಿಸಿದರೆ ಈಗ ಇರುವ ಜನಸಂಖ್ಯೆ ಖಂಡಿತವಾಗಿಯೂ ಭಾರತಕ್ಕೆ ಸಮಸ್ಯೆಯಾಗದು. ಆದರೆ ಚೀನಾದ ಜೊತೆಗೆ ಸ್ಪರ್ಧಿಸುವ ಭಾರತದ ಕೆಲವು ನಾಯಕರ ಹಂಬಲ ಮತ್ತೆ ಗರಿ ಬಿಚ್ಚಿದೆ. ‘ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿ ಚೀನಾವನ್ನು ಮಾದರಿಯಾಗಿಸಿಕೊಳ್ಳಬೇಕು’ ಎಂಬ ವಾದಕ್ಕೆ ಮತ್ತೆ ರೆಕ್ಕೆ ಪುಕ್ಕ ಬಂದಿದೆ. ದೇಶದಲ್ಲಿ ಅಗತ್ಯಕ್ಕಿಂತ ಜಾಸ್ತಿ ‘ಪ್ರಜಾಪ್ರಭುತ್ವ’ ಅಸ್ತಿತ್ವದಲ್ಲಿದೆ ಎಂದು ವಾದಿಸುವ ನಾಯಕರು ಭಾರತದಲ್ಲಿ ಅಧಿಕಾರ ಹಿಡಿದಿದ್ದಾರೆ. ಭಾರತದ ಪ್ರಜಾಸತ್ತಾತ್ಮಕ ಕಾನೂನುಗಳಿಗಿಂತ ಚೀನಾದೊಳಗಿರುವ ಸರ್ವಾಧಿಕಾರಿ ಕಾನೂನುಗಳು ಅವರನ್ನು ಸಹಜವಾಗಿಯೇ ಸೆಳೆಯುತ್ತಿವೆ. ಆದುದರಿಂದಲೇ, ಕಠಿಣ ಕುಟುಂಬ ನಿಯಂತ್ರಣವನ್ನು ಕಾನೂನಿನ ಮೂಲಕ ಜನರ ಮೇಲೆ ಹೇರಲು ಮುಂದಾಗಿದ್ದಾರೆ. ‘ಮೂರನೆಯ ಮಗುವನ್ನು ಹೊಂದಿದ ಯಾವುದೇ ಕುಟುಂಬಕ್ಕೆ ಸರಕಾರಿ ಸೌಲಭ್ಯಗಳಿಲ್ಲ, ಮತದಾನದಲ್ಲಿ ಸ್ಪರ್ಧಿಸುವ ಅವಕಾಶವಿಲ್ಲ’ ಎಂಬಿತ್ಯಾದಿ ಕಾನೂನುಗಳು ಉತ್ತರ ಪ್ರದೇಶದಲ್ಲಿ ಈಗಾಗಲೇ ಹೆರಿಗೆಗೆ ಸಿದ್ಧವಾಗಿ ನಿಂತಿದೆ.

ಆ ಮೂಲಕ, ಭಾರತವನ್ನು ಭವಿಷ್ಯದ ಚೀನಾ ಮಾಡುವುದಕ್ಕೆ ನಮ್ಮ ನಾಯಕರು ಸಜ್ಜಾಗಿದ್ದಾರೆ. ವಿಪರ್ಯಾಸವೆಂದರೆ, ಯಾವಾಗ ಭಾರತ ‘ಮೂರನೆಯ ಮಗುವಿಗೆ ನಿಷೇಧ’ ಹೇರುವ ಇಂಗಿತವನ್ನು ವ್ಯಕ್ತಪಡಿಸಿತೋ ಅತ್ತ ಚೀನಾದಲ್ಲಿ ‘ಮೂರನೇ ಮಗುವನ್ನು ರಾಜಹಾಸು ಹಾಸಿ’ ಸ್ವಾಗತಿಸಲು ಸಿದ್ಧತೆ ನಡೆದಿದೆ. ಅಲ್ಲಿನ ಆಡಳಿತ ರೂಢ ಕಮ್ಯುನಿಸ್ಟ್ ಪಕ್ಷ ಪ್ರಸ್ತುತ ಪಡಿಸಿದ ಮೂರು ಮಕ್ಕಳ ನೀತಿಗೆ ಚೀನಾದ ರಾಷ್ಟ್ರೀಯ ಸಂಸತ್ತು ಶುಕ್ರವಾರ ಅನುಮೋದನೆ ನೀಡಿದೆ. ಭಾರತದಲ್ಲಿ ಮೂರನೇ ಮಗುವಿಗೆ ಸರ್ವ ಸವಲತ್ತುಗಳನ್ನು ನಿಷೇಧಿಸಲಾಗುತ್ತಿದ್ದರೆ, ಚೀನಾದಲ್ಲಿ ಮೂರನೇ ಮಗುವನ್ನು ಹೊಂದಿದ ಕುಟುಂಬದ ವೆಚ್ಚವನ್ನು ಹೊತ್ತುಕೊಳ್ಳಲು ಸರಕಾರ ನಿರ್ಧರಿಸಿದೆ. ಮೂರನೇ ಮಗುವನ್ನು ಹೊಂದಿದ ಕುಟುಂಬಕ್ಕೆ ಆರ್ಥಿಕ ನೆರವು, ತೆರಿಗೆ ಕಡಿತ, ವಿಮೆ, ಶಿಕ್ಷಣ, ವಸತಿ, ಉದ್ಯೋಗಗಳಲ್ಲಿ ಹೆಚ್ಚಿನ ಅವಕಾಶ ಮೊದಲಾದ ಯೋಜನೆಗಳನ್ನು ಘೋಷಿಸಿದೆ. 2016ರಲ್ಲೇ ಚೀನಾ ಸರಕಾರ ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಇದೀಗ ಎರಡನೇ ಮಗುವಿನಿಂದ ಮೂರನೇ ಮಗುವಿಗೆ ತನ್ನ ನೀತಿಯನ್ನು ಸಡಿಲಿಸಿದೆ. ಮೂರನೇ ಮಗುವನ್ನು ಹೊಂದುವುದಕ್ಕೆ ಚೀನಾ ಪ್ರೋತ್ಸಾಹ ನೀಡಲು ಮುಖ್ಯ ಕಾರಣವೊಂದಿದೆ. ‘ಒಂದು ಮಗು’ ನೀತಿಯಿಂದಾಗಿ ಚೀನಾದಲ್ಲಿ ವೃದ್ಧರ ಸಂಖ್ಯೆ ಹೆಚ್ಚಿದೆ ಮಾತ್ರವಲ್ಲ, ಯುವ ಜನರ ಪ್ರಮಾಣ ನಿರಂತರ ಇಳಿಕೆಯಾಗುತ್ತಿದೆ. ಚೀನಾದಲ್ಲಿ 60 ವರ್ಷ ಮೀರಿದವರ ಜನಸಂಖ್ಯೆ 264 ಮಿಲಿಯನ್ ತಲುಪಿದ್ದು, ಇದು ಕಳೆದ ವರ್ಷಕ್ಕಿಂತ ಶೇ.18.7 ಹೆಚ್ಚಳವಾಗಿದೆ.

ರಾಷ್ಟ್ರ ನಿರ್ಮಾಣದಲ್ಲಿ ವೃದ್ಧರ ಭಾಗೀದಾರಿಕೆಯೇ ಇಲ್ಲ ಎಂದಲ್ಲ. ಆದರೆ ವೃದ್ಧರ ಏರಿಕೆಯ ಜೊತೆ ಜೊತೆಗೆ ಯುವಕರ ಸಂಖ್ಯೆ ಇಳಿಯುವುದು ಅತ್ಯಂತ ಅಪಾಯಕಾರಿಯಾಗಿದೆ. ಭವಿಷ್ಯದಲ್ಲಿ ಶ್ರಮದ ಕೆಲಸಗಳಿಗೆ ಯುವಕರ ಕೊರತೆ ಬೀಳುವುದು ಮಾತ್ರವಲ್ಲ, ವೃದ್ಧರ ಆರೈಕೆಯ ಹೆಚ್ಚುವರಿ ಹೊರೆಯೂ ಸರಕಾರಕ್ಕೆ ಬೀಳಲಿದೆ. ಚೀನಾದ ‘ಸರ್ವಾಧಿಕಾರಿ ಕುಟುಂಬ ಯೋಜನೆ’ಯ ಪರಿಣಾಮ ಇದು. ಸಾಧಾರಣವಾಗಿ ಪ್ರಬಲ ದೇಶಗಳು ಕೈ ಬಿಟ್ಟ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದ ದೌರ್ಬಲ್ಯವಾಗಿದೆ. ಅಂತೆಯೇ ಚೀನಾ ಬೇಡವೆಂದು ಬಳಸಿ ಎಸೆದ ಜನಸಂಖ್ಯಾ ನೀತಿಯನ್ನು ಪ್ರಸಾದವೆಂದು ಭಾರತ ಕೈಗೆತ್ತಿಕೊಂಡಿದೆ. ಭಾರತವೇನಾದರೂ ಜನಸಂಖ್ಯಾ ವಿಷಯದಲ್ಲಿ ಕಾನೂನಾತ್ಮಕವಾಗಿ ಕಠಿಣ ಹಸ್ತಕ್ಷೇಪ ನಡೆಸಲು ಹೋದರೆ ಅದು ಭಾರತದ ಭವಿಷ್ಯದ ಮೇಲೆ ಅತ್ಯಂತ ಭೀಕರ ಪರಿಣಾಮಗಳನ್ನು ಬೀರಬಹುದು. ಭಾರತ ವೃದ್ಧರ ದೇಶವಾಗಿ ಮಾತ್ರವಲ್ಲ, ಅನಾಥರ, ಬೀದಿಮಕ್ಕಳ ದೇಶವಾಗಿಯೂ ಹೊರ ಹೊಮ್ಮಲಿದೆ. ಕಾನೂನಿಗೆ ಅಂಜಿ ನಡೆಯುವ ಭ್ರೂಣ ಹತ್ಯೆಗಳು ಕಸದ ತೊಟ್ಟಿಗಳಿಗೆ ಹೊಸ ಸಮಸ್ಯೆಯಾಗಿ ಕಾಡಬಹುದು. ಉತ್ತರ ಪ್ರದೇಶದ ಕಾಯ್ದೆಯಲ್ಲಿ ಭ್ರೂಣ ಹತ್ಯೆಯ ನಿಯಮಗಳನ್ನು ಸಡಿಲಿಸಲಾಗಿದೆ. ಹೆಣ್ಣು ಎಂಬ ಕಾರಣಕ್ಕೆ ಭ್ರೂಣ ಹತ್ಯೆ ಗೈಯುವ ರಾಕ್ಷಸರು ಈ ಕಾನೂನನ್ನು ದುರ್ಬಳಕೆ ಮಾಡುವ ಎಲ್ಲ ಸಾಧ್ಯತೆಗಳಿವೆ. ಭಾರತದಲ್ಲಿ ಗರ್ಭ ಧರಿಸುವುದು ಹೆಣ್ಣು ಮಕ್ಕಳ ಸ್ವಯಂ ಆಯ್ಕೆಯಲ್ಲ. ಬಹುತೇಕ ಗರ್ಭಧಾರಣೆಗಳು ಆಕಸ್ಮಿಕವಾಗಿರುತ್ತವೆೆ. ಇಂತಹ ಸಂದರ್ಭದಲ್ಲಿ ಹುಟ್ಟಿದ ಮೂರನೇ ಮಗು ಬೀದಿ ಪಾಲಾಗುವ ಸಾಧ್ಯತೆಗಳೇ ಅಧಿಕ.

ಈಗಾಗಲೇ ಭಾರತ ಬೀದಿ ಮಕ್ಕಳಿಗಾಗಿ ಕುಖ್ಯಾತಿಯನ್ನು ಪಡೆದಿದೆ. ಭವಿಷ್ಯದಲ್ಲಿ ಇಂತಹ ಅನಾಥ ಬೀದಿ ಮಕ್ಕಳ ಹೊರೆಯನ್ನು ಸರಕಾರ ವಹಿಸಬೇಕಾಗುತ್ತದೆ. ಇವೆಲ್ಲದರ ನಡುವೆ ಯುವಕರ ಕೊರತೆ ಭಾರತವನ್ನು ಇನ್ನಷ್ಟು ಕುಗ್ಗಿಸಬಹುದು. ಜೊತೆಗೆ ಭಾರತದೊಳಗೇ ಆಕಸ್ಮಿಕವಾಗಿ ಹುಟ್ಟಿದ ಮೂರನೆಯ ಮಕ್ಕಳ ಹೊಸ ದೇಶವೊಂದು ಸೃಷ್ಟಿಯಾಗಬಹುದು. ಇದೇ ಸಂದರ್ಭದಲ್ಲಿ ಚೀನಾ ಇತ್ತೀಚೆಗೆ ತನ್ನ ದೇಶದೊಳಗಿರುವ ಸಂಪನ್ಮೂಲ ಅಸಮಾನತೆಯನ್ನು ಗಂಭೀರವಾಗಿ ಗಮನಿಸುತ್ತಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಯೋಜನೆಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಇದೂ ಜನಸಂಖ್ಯೆಯನ್ನು ಸಂಪನ್ಮೂಲವಾಗಿಸುವಲ್ಲಿ ಚೀನಾ ಇಡುತ್ತಿರುವ ಮಹತ್ವದ ಹೆಜ್ಜೆಯಾಗಿದೆ. ಭಾರತದಲ್ಲಿ ಈಗ ಇರುವ ಜನಸಂಖ್ಯೆ ಯಾವ ರೀತಿಯಲ್ಲೂ ಭಾರವಲ್ಲ ಎನ್ನುವುದನ್ನು ಆರ್ಥಿಕ ತಜ್ಞರು ಪದೇ ಪದೇ ಸಾರಿ ಹೇಳುತ್ತಿದ್ದಾರೆ. ಸದ್ಯಕ್ಕೆ ಸರಕಾರದ ನೀತಿಯಿಂದಾಗಿ ಇರುವ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಕೈ ಸೇರುತ್ತಿದೆ. ಈ ಸಂಪನ್ಮೂಲಗಳ ಸಮಾನ ಹಂಚಿಕೆ ಮಾಡಿದಾಗ ದೇಶದ ಜನಸಂಖ್ಯೆ ಭಾರವಾಗದೆ ಶಕ್ತಿಯಾಗಿ ಬದಲಾಗುತ್ತದೆ.

ವಿಪರ್ಯಾಸವೆಂದರೆ, ದೇಶದಲ್ಲ್ಲಿ ಜನಸಂಖ್ಯಾ ಕಾನೂನನ್ನು ಜಾರಿಗೊಳಿಸುವ ನಾಯಕರಲ್ಲಿ ದೇಶದ ಕುರಿತ ಕಾಳಜಿ ಎಳ್ಳಷ್ಟೂ ಇಲ್ಲ. ದೇಶದ ಭವಿಷ್ಯದ ಬಗ್ಗೆಯೂ ಅವರಿಗೆ ಚಿಂತೆಯಿಲ್ಲ. ಅವರು ಜನಸಂಖ್ಯಾ ಕಾಯ್ದೆಯನ್ನು ವರ್ತಮಾನದ ದ್ವೇಷ ರಾಜಕೀಯಕ್ಕೆ ಬಳಸಲು ಹೊರಟಿದ್ದಾರೆ. ಈ ಮೂಲಕ ಒಂದು ಸಮುದಾಯದ ಜನಸಂಖ್ಯೆ ಬೆಳೆಯದಂತೆ ನಾವು ತಡೆಯುತ್ತಿದ್ದೇವೆ ಎಂಬ ಭ್ರಮೆಯನ್ನು ಇನ್ನೊಂದು ಸಮುದಾಯದ ನಡುವೆ ಬಿತ್ತಿ ತಮ್ಮ ರಾಜಕೀಯ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ಹೊರಟಿದ್ದಾರೆ. ಆದರೆ ಇದು ಅಂತಿಮವಾಗಿ ದೇಶವನ್ನು ಇನ್ನಷ್ಟು ದಯನೀಯ ಸ್ಥಿತಿಗೆ ಕೊಂಡೊಯ್ಯಬಹುದೇ ಹೊರತು, ಯಾವ ರೀತಿಯಲ್ಲೂ ಲಾಭವನ್ನುಂಟು ಮಾಡಲಾರದು. ಒಂದು ವೇಳೆ ಭಾರತ ಕಠಿಣ ಜನಸಂಖ್ಯಾ ಕಾಯ್ದೆಯನ್ನು ಜಾರಿಗೊಳಿಸಿದರೆ ನಾಲ್ಕು ದಶಕಗಳ ಬಳಿಕ, ದೇಶ ಕಾರ್ಮಿಕ ಶಕ್ತಿಗಾಗಿ ಚೀನಾದ ಕಡೆಗೆ ನೋಡಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ದೇಶದ ಬೀದಿಗಳು ವೃದ್ಧರ ಆಶ್ರಮವಾಗಿ ಪರಿವರ್ತನೆಯಾಗಬಹುದು. ಹತ್ಯೆಗೈಯಲ್ಪಟ್ಟ ಭ್ರೂಣಗಳ ತ್ಯಾಜ್ಯಗಳ ನಿರ್ವಹಣೆಗೆ ಹೊಸತೊಂದು ಇಲಾಖೆಯನ್ನು ಸೃಷ್ಟಿಸಬೇಕಾದ ಸ್ಥಿತಿ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News