ಅಫ್ಘಾನ್ ತಲುಪಿದ ತಾಲಿಬಾನ್ ಸಹಸಂಸ್ಥಾಪಕ ಬರಾದಾರ್: ನೂತನ ಸರಕಾರ ರಚನೆ ಕುರಿತ ಮಾತುಕತೆಗೆ ಸಿದ್ಧತೆ
ಕಾಬೂಲ್, ಆ.21: ಅಫ್ಘಾನ್ನಲ್ಲಿ ನೂತನ ಸರಕಾರ ರಚನೆಯ ಕುರಿತು ಮಾತುಕತೆ ನಡೆಸಲು ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಶನಿವಾರ ಕಾಬೂಲ್ಗೆ ಆಗಮಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನ್ ನಲ್ಲಿ ಎಲ್ಲರನ್ನೂ ಪ್ರತಿನಿಧಿಸುವ ಸರಕಾರ ರಚನೆಯಾಗುವ ನಿಟ್ಟಿನಲ್ಲಿ ಬರಾದಾದ್ ಜಿಹಾದಿ ಮುಖಂಡರು ಹಾಗೂ ರಾಜಕೀಯ ಮುಖಂಡರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಖತರ್ ನಲ್ಲಿದ್ದ ಬರಾದಾರ್ ಶನಿವಾರ ಕಂದಹಾರ್ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ಬಾರಿಯ ನಮ್ಮ ಆಡಳಿತ ಸಂಪೂರ್ಣ ಭಿನ್ನವಾಗಿರಲಿದೆ ಎಂದು ತಾಲಿಬಾನ್ ಗಳು ಹೇಳಿರುವುದಾಗಿ ವರದಿಯಾಗಿದೆ.
2010ರಲ್ಲಿ ಕರಾಚಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಬರಾದಾರ್ ಬಿಡುಗಡೆಗೆ ಅಮೆರಿಕ ಒತ್ತಡ ಹೇರಿತ್ತು. 2028ರಲ್ಲಿ ಬಿಡುಗಡೆಗೊಂಡ ಬಳಿಕ ಖತರ್ನಲ್ಲಿ ನೆಲೆಸಿದ್ದ ಬರಾದಾರ್ರನ್ನು ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ದೋಹಾದಲ್ಲಿ ನಡೆದಿದ್ದ ತಾಲಿಬಾನ್- ಅಮೆರಿಕ ನಡುವಿನ ಮಾತುಕತೆಯಲ್ಲಿ ಬರಾದಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಫ್ಘಾನ್ನಿಂದ ಅಮೆರಿಕ ಪಡೆಗಳ ವಾಪಸಾತಿಗೆ ಈ ಮಾುಕತೆ ಸಂದರ್ಭ ಒಪ್ಪಂದವಾಗಿತ್ತು.
ಈ ಮಧ್ಯೆ, ಅಮೆರಿಕದ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕರ ಪಟ್ಟಿಯಲ್ಲಿರುವ ತಾಲಿಬಾನ್ ಹಿರಿಯ ಮುಖಂಡ ಖಲೋಲ್ ಹಖ್ಖಾನಿಯೂ ಈಗ ಕಾಬೂಲ್ನಲ್ಲಿ ಪ್ರತ್ಯಕ್ಷವಾಗಿದ್ದು ಅಫ್ಗಾನ್ ರಾಜಕೀಯ ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಗುಲ್ಬುದೀನ್ ಹೆಕ್ಮತ್ಯಾರ್ ಜತೆ ಮಾತುಕತೆ ನೆಸಿರುವುದಾಗಿ ಮೂಲಗಳು ಹೇಳಿವೆ.