ಕಾಬೂಲ್ ವಿಮಾನನಿಲ್ದಾಣದಲ್ಲಿ ಮುಂದುವರಿದ ಗೊಂದಲ, ನೂಕುನುಗ್ಗಲು: ಗುಂಡೇಟಿನಿಂದ ಒಬ್ಬ ಮೃತ್ಯು

Update: 2021-08-23 18:33 GMT

ಕಾಬೂಲ್, ಆ.23: ತಾಲಿಬಾನ್ಗಳ ನಿಯಂತ್ರಣದಲ್ಲಿರುವ ಅಫ್ಗಾನ್ನಿಂದ ಹೊರತೆರಳಲು ಸಾವಿರಾರು ಮಂದಿ ನಡೆಸುತ್ತಿರುವ ಹತಾಶ ಪ್ರಯತ್ನದಿಂದ ಗೊಂದಲದ ಗೂಡಾಗಿರುವ ಕಾಬೂಲ್ ವಿಮಾನನಿಲ್ದಾಣದ ಪ್ರವೇಶ ದ್ವಾರದ ಬಳಿ ಸೋಮವಾರ ನಡೆದ ಗುಂಡು ಹಾರಾಟದಲ್ಲಿ ಅಫ್ಗಾನ್ನ ಓರ್ವ ಯೋಧ ಮೃತಪಟ್ಟಿರುವುದಾಗಿ ಜರ್ಮನ್ ಅಧಿಕಾರಿಗಳು ಹೇಳಿದ್ದಾರೆ .

ವಿಮಾನನಿಲ್ದಾಣದ ಪ್ರವೇಶದ್ವಾರದ ಬಳಿ ನಡೆದ ಅಪರಿಚಿತ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಅಫ್ಗಾನ್ ಯೋಧ ಮೃತಪಟ್ಟು ಕನಿಷ್ಟ 3 ಯೋಧರು ಗಾಯಗೊಂಡಿದ್ದಾರೆ ಎಂದು ಜರ್ಮನ್ ಸೇನೆ ಟ್ವೀಟ್ ಮಾಡಿದೆ. ವಿಮಾನನಿಲ್ದಾಣದಲ್ಲಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ 6 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಟೆಲಿಯ ಮಾನವಹಕ್ಕು ಸಂಘಟನೆ ಹೇಳಿದೆ.

 ವಿಮಾನ ನಿಲ್ದಾಣದ ಹೊರಗಡೆ ನೆರೆದಿರುವ ಗುಂಪಿನಿಂದಾಗಿ ತೆರವು ಕಾರ್ಯಾಚರಣೆಗೆ ಹೆಚ್ಚಿನ ಸಮಸ್ಯೆಯಾಗಿದೆ ಎಂದು ಜರ್ಮನ್ನ ರಕ್ಷಣಾ ಸಚಿವೆ ಆ್ಯನೆಗ್ರೆಟ್ ಕ್ರ್ಯಾಂಪ್-ಕರೆನ್ಬೌರ್ ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವವರನ್ನು ತಡೆಯುವುದಿಲ್ಲ ಎಂಬ ತಾಲಿಬಾನ್ಗಳ ಭರವಸೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ನಮಗೆ ಅಗತ್ಯವಿರುವುದು ಸಿಕ್ಕಿದೆ. ಆದರೆ ನಿಜವಾದ ಸಮಸ್ಯೆ ಎದುರಾಗಿರುವುದು ನಿಲ್ದಾಣದ ಹೊರಗೆ ಜಮಾಯಿಸಿದ ಅನಿಯಂತ್ರಿತ ಗುಂಪಿನಿಂದ’ ಎಂದಿದ್ದಾರೆ.

ಅಫ್ಗಾನ್ನಿಂದ ಸ್ಥಳಾಂತರಿಸಲಾಗಿರುವ ಜನರನ್ನು ಅವರು ಉದ್ದೇಶಿಸಿದ ಸ್ಥಳಗಳಿಗೆ ಕಳುಹಿಸುವ ಕಾರ್ಯದಲ್ಲಿ ನೆರವಾಗಲು 18 ವಾಣಿಜ್ಯ ವಿಮಾನಗಳ ನೆರವು ಕೋರಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಆಗಸ್ಟ್ 14ರಿಂದ ಅಮೆರಿಕದ ವಾಯುಪಡೆ ವಿಮಾನ ಹಾಗೂ ಮೈತ್ರಿಪಡೆಯ ವಿಮಾನಗಳ ಮೂಲಕ 30 ಸಾವಿರಕ್ಕೂ ಅಧಿಕ ಜನರನ್ನು ಅಫ್ಗಾನ್ನಿಂದ ತೆರವುಗೊಳಿಸಲಾಗಿದೆ. 

ಭದ್ರತಾ ಸಮಸ್ಯೆ ಹಾಗೂ ಅಮೆರಿಕದ ಆಡಳಿತಶಾಹಿ ಪ್ರತಿಬಂಧಕಗಳಿಂದಾಗಿ ತೆರವು ಕಾರ್ಯಾಚರಣೆ ನಿಧಾನವಾಗಿದ್ದು ಇನ್ನೂ ಸಾವಿರಾರು ಮಂದಿ(ಅಮೆರಿಕನ್ನರು, ಇತರ ವಿದೇಶೀಯರು ಹಾಗೂ ಅಮೆರಿಕಾಕ್ಕೆ ನೆರವಾಗಿದ್ದ ಅಫ್ಗಾನೀಯರು ಸೇರಿದಂತೆ) ಸ್ಥಳಾಂತರಕ್ಕೆ ಕಾಯುತ್ತಿದ್ದಾರೆ. ಈ ಮಧ್ಯೆ, ತೆರವು ಕಾರ್ಯಾಚರಣೆಯಲ್ಲಿರುವ ಅಮೆರಿಕದ ವಿಮಾನಗಳ ಮೇಲೆ ಐಸಿಸ್ ನ ಸ್ಥಳೀಯ ಗುಂಪಿನವರು ಕ್ಷಿಪಣಿ ದಾಳಿ ನಡೆಸುವ ಅಥವಾ ವಿಮಾನನಿಲ್ದಾಣದ ಹೊರಗೆ ನೆರೆದಿರುವ ಗುಂಪಿನ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿರುವ ಹಿನ್ನೆಲೆಯಲ್ಲಿ, ಕ್ಷಿಪಣಿ ದಾಳಿ ಪ್ರತಿಬಂಧಕ ವ್ಯವಸ್ಥೆಯೊಂದಿಗೆ ವಿಮಾನಗಳ ಕಾರ್ಯಾಚರಣೆ ವುುಂದುವರಿದಿರುವುದಾಗಿ ವರದಿಯಾಗಿದೆ.

ಅಫ್ಗಾನ್ ನಿಂದ ಪಲಾಯನ ಮಾಡಲು ಮುಂದಾಗಿರುವ ಸಾವಿರಾರು ಜನತೆ ಕಳೆದ ವಾರ ಕಾಬೂಲ್ ವಿಮಾನನಿಲ್ದಾಣಕ್ಕೆ ನುಗ್ಗಿದಾಗ ಅಲ್ಲಿ ನೂಕುನುಗ್ಗಲು, ಗೊಂದಲ, ಕಾಲ್ತುಳಿತ ಸಂಭವಿಸಿತ್ತು. ಅಮೆರಿಕ ಯೋಧರನ್ನು ತೆರವುಗೊಳಿಸುವ ಕಾರ್ಯದಲ್ಲಿದ್ದ ಅಮೆರಿಕದ ಸೇನಾವಿಮಾನಕ್ಕೆ ಜೋತುಬಿದ್ದು ಕೆಲವರು ಹೊರತೆರಳಲು ವಿಫಲ ಪ್ರಯತ್ನ ನಡೆಸಿದ್ದರು. ಈ ಎಲ್ಲಾ ಗೊಂದಲ, ಅವ್ಯವಸ್ಥೆ, ಪ್ರಾಣಹಾನಿಗೆ ಅಮೆರಿಕದ ಸೇನೆ ಕಾರಣ ಎಂದು ತಾಲಿಬಾನ್ ಗಳು ಆರೋಪಿಸಿದ್ದರು.

ಈ ಮಧ್ಯೆ, ಉತ್ತರದ ಪಂಜ್ಶಿರ್ ಪ್ರಾಂತ್ಯದಲ್ಲಿ ತಮ್ಮ ವಿರುದ್ಧ ತೀವ್ರಗೊಂಡಿರುವ ಸಶಸ್ತ್ರ ಪ್ರತಿರೋಧವನ್ನು ಮಟ್ಟಹಾಕಲು ತಾಲಿಬಾನ್ ತನ್ನ ಪಡೆಗಳನ್ನು ಕಾಬೂಲ್ನಿಂದ ಪಂಜ್ಶಿರ್ನತ್ತ ಸ್ಥಳಾಂತರಿಸಿದ್ದು, ವಿರೋಧಿ ಬಣದ ಕೈವಶವಾಗಿದ್ದ 3 ಜಿಲ್ಲೆಗಳನ್ನು ಮರುಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈಗ ಪಂಜ್ಶಿರ್ ನಿಯಂತ್ರಣಕ್ಕೆ ನಿರ್ಣಾಯಕ ಹೋರಾಟ ನಡೆಸಲಾಗುತ್ತಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News