ಭಾರತದ ಮಾಜಿ ಫುಟ್ಬಾಲ್ ಆಟಗಾರ ಒಲಿಂಪಿಯನ್ ಚಂದ್ರಶೇಖರನ್ ನಿಧನ

Update: 2021-08-24 14:07 GMT
photo: Twitter

ಹೊಸದಿಲ್ಲಿ: ಭಾರತದ ಮಾಜಿ ಫುಟ್ಬಾಲ್ ಆಟಗಾರ, ತಮ್ಮ ತವರು ರಾಜ್ಯ ಕೇರಳದಲ್ಲಿ ಒಲಿಂಪಿಯನ್ ಚಂದ್ರಶೇಖರನ್ ಎಂದೇ ಪ್ರಸಿದ್ಧರಾಗಿದ್ದ ಓ. ಚಂದ್ರಶೇಖರನ್ ಅವರು ಮಂಗಳವಾರ ಕೊಚ್ಚಿಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಡಿಫೆಂಡರ್ ಆಗಿ ಆಡಿದ್ದ ಚಂದ್ರಶೇಖರನ್ 1960 ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಸದಸ್ಯರಾಗಿದ್ದರು. ಚಂದ್ರಶೇಖರನ್ ಹಾಗೂ  ಅವರ ಸಹ ಆಟಗಾರರ ನೆರವಿನಿಂದ ಭಾರತವು 1-1ರಿಂದ ಫ್ರಾನ್ಸ್ ವಿರುದ್ದ ಡ್ರಾ ಸಾಧಿಸಿತ್ತು. ರೋಮ್ ಒಲಿಂಪಿಕ್ಸ್ ನ ಇನ್ನೊಬ್ಬ ಆಟಗಾರ ಎಸ್.ಎಸ್. ಹಕೀಂ ತೀರಿಕೊಂಡ ಕೆಲವೇ ದಿನಗಳಲ್ಲಿ ಚಂದ್ರಶೇಖರನ್ ಸಾವನ್ನಪ್ಪಿದ್ದಾರೆ.

ಚಂದ್ರಶೇಖರನ್ ಅವರು 1962 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ, 1964 ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ಬೆಳ್ಳಿ, ಮೆರ್ಡೆಕಾ ಟೂರ್ನಿಯಲ್ಲಿ ಬೆಳ್ಳಿ (1959 ಹಾಗೂ  1964) ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.

ತ್ರಿಶೂರ್ ಜಿಲ್ಲೆಯ ಇರಿಂಜಲಕೂಡದಲ್ಲಿ ಜನಿಸಿದ್ದ ಚಂದ್ರಶೇಖರನ್ ಅವರು ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ತಮ್ಮ ಫುಟ್ಬಾಲ್ ಕೌಶಲ್ಯವನ್ನು ಹೆಚ್ಚಿಸಿಕೊಂಡರು ಹಾಗೂ  1956 ರಿಂದ ಮುಂಬೈನಲ್ಲಿ ಕ್ಯಾಲ್ಟೆಕ್ಸ್ ಪರ ಆಡಿದರು. 1966 ರಲ್ಲಿ ಅಂತರ್ ರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತರಾದ ನಂತರ, ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರ  ಆಡಿದರು. ಅವರು 1963 ರಲ್ಲಿ ಸಂತೋಷ್ ಟ್ರೋಫಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದ ಮಹಾರಾಷ್ಟ್ರ ತಂಡದ ನಾಯಕರೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News