ತಾಲಿಬಾನ್ ನೊಂದಿಗೆ ‌ಅಮೆರಿಕ ಗುಪ್ತಚರ ಏಜೆನ್ಸಿ ಸಿಐಎ ರಹಸ್ಯ ಮಾತುಕತೆ: ವರದಿ

Update: 2021-08-24 16:23 GMT

ವಾಷಿಂಗ್ಟನ್, ಆ.24: ಅಮೆರಿಕದ ಗುಪ್ತಚರ ಏಜೆನ್ಸಿ ಸಿಐಎ ಮುಖ್ಯಸ್ಥ ವಿಲಿಯಂ ಬರ್ನ್ಸ್ ಸೋಮವಾರ ಅಫ್ಗಾನ್ ನ ರಾಜಧಾನಿ ಕಾಬೂಲ್ ನಲ್ಲಿ ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್‌ ರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಮಂಗಳವಾರ ವರದಿ ಮಾಡಿದೆ. 

ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಗಾನ್ನಿಂದ ಸಾವಿರಾರು ಮಂದಿಯ ಸ್ಥಳಾಂತರ ಪ್ರಕ್ರಿಯೆಗೆ ವಿಧಿಸಿರುವ ಗಡುವು ಹತ್ತಿರ ಬರುತ್ತಿದ್ದಂತೆಯೇ ಸೋಮವಾರ ಬೈಡೆನ್ ಆಡಳಿತ ಮತ್ತು ತಾಲಿಬಾನ್ ಮಧ್ಯೆ ಈ ಉನ್ನತ ಮಟ್ಟದ ಸಭೆ ನಡೆದಿದೆ. 

ಬೈಡೆನ್ ಆಡಳಿತದಲ್ಲಿರುವ ಅತ್ಯಂತ ಅನುಭವಿ ರಾಜತಂತ್ರಜ್ಞರಲ್ಲಿ ಬರ್ನ್ಸ್ ಒಬ್ಬರಾಗಿದ್ದರೆ ಬರಾದರ್ ತಾಲಿಬಾನ್ ನ ಉನ್ನತ ಮುಖಂಡರಲ್ಲಿ ಒಬ್ಬರು. ಸಿಐಎ ವಕ್ತಾರ ಈ ಸಭೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ನಿರ್ದೇಶಕರ ಪ್ರವಾಸದ ಬಗ್ಗೆ ಯಾರೊಂದಿಗೂ ಚರ್ಚಿಸುವುದಿಲ್ಲ ಎಂದಿದ್ದಾರೆ. 

ಅಜ್ಞಾತವಾಗಿರಲು ಬಯಸಿದ ಅಮೆರಿಕದ ಉನ್ನತ ಅಧಿಕಾರಿಯಿಂದ ಈ ಮಾಹಿತಿ ಲಭಿಸಿದೆ. ತೆರವು ಕಾರ್ಯಾಚರಣೆಯ ಗಡುವು ವಿಸ್ತರಿಸುವ ಬಗ್ಗೆ ಮಾತುಕತೆ ನಡೆದಿರುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ. 

ಆಗಸ್ಟ್ 31ರ ಗಡುವಿನೊಳಗೆ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳದಿದ್ದರೆ ಗಡುವು ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಬೈಡೆನ್ ಹೇಳಿದ್ದರೆ, ಯಾವುದೇ ಕಾರಣಕ್ಕೂ ವಿಸ್ತರಣೆ ಸಾಧ್ಯವಿಲ್ಲ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಅಮೆರಿಕ ಅಥವಾ ಬ್ರಿಟನ್ ವಿಸ್ತರಣೆ ಬಯಸಿದರೆ ಅದಕ್ಕೆ ಉತ್ತರ ಇಲ್ಲ ಎಂದಾಗಿರುತ್ತದೆ. ಅಥವಾ ಅವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಹೇಳಿರುವುದಾಗಿ ಸ್ಕೈ ನ್ಯೂಸ್ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News