×
Ad

ಕೇಂದ್ರದ ಬಂಡವಾಳ ಕ್ರೋಢೀಕರಣ ಯೋಜನೆ ಕಾನೂನು ಬದ್ಧಗೊಳಿಸಿದ ಲೂಟಿಯಾಗಿದೆ: ಕಾಂಗ್ರೆಸ್ ವಾಗ್ದಾಳಿ‌

Update: 2021-08-24 22:31 IST

ಹೊಸದಿಲ್ಲಿ, ಆ.24: ಮೂಲಸೌಕರ್ಯಗಳ ಮೂಲಕ ಬಂಡವಾಳ ಕ್ರೋಢೀಕರಿಸುವ ಕೇಂದ್ರ ಸರಕಾರ ಯೋಜನೆಯು ‘‘ಕಾನೂನುಬದ್ಧಗೊಳಿಸಲಾದ ಲೂಟಿ ಹಾಗೂ ಸಂಘಟಿತ ದರೋಡೆ’’ ಎಂದು ಕಾಂಗ್ರೆಸ್ ಮಂಗಳವಾರ ಬಣ್ಣಿಸಿದ್ದು, ಕಳೆದ ಕೆಲವು ದಶಕಗಳಿಂದ ಸೃಷ್ಟಿಸಲಾದ ಅಮೂಲ್ಯವಾದ ಸಾರ್ವಜನಿಕ ಸೊತ್ತುಗಳನ್ನು ಆಯ್ದ ಕೆಲವು ಮಂದಿಗೆ ಹಸ್ತಾಂತರಿಸಲಾಗುತ್ತಿದೆಯೆಂದು ಅದು ಆರೋಪಿಸಿದೆ.

‌ಜನತೆಯ ಕಠಿಣ ಪರಿಶ್ರಮದಿಂದ ನಿರ್ಮಿಸಲಾದ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಸರಕಾರವು ತನ್ನ ಬಿಲಿಯಾಧೀಶ ‘ಸ್ನೇಹಿತರಿಗೆ’ ಒಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.

‘‘ನೋಟು ನಿಷೇಧದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅದನ್ನು ಸಂಘಟಿತ ಲೂಟಿ ಹಾಗೂ ಕಾನೂನುಬದ್ಧವಾದ ದರೋಡೆ ಎಂದು ಸರಿಯಾಗಿ ಬಣ್ಣಿಸಿದ್ದರು.ಇದೀಗ ಬಂಡವಾಳ ಕ್ರೋಢೀಕರಣ ಮೇಳದ ಮೂಲಕ ದಶಕಗಳಿಂದ ಸೃಷ್ಟಿಯಾದ ಸಾರ್ವಜನಿಕ ಆಸ್ತಿಗಳನ್ನು ಆಯ್ದ ಕೆಲವೇ ಮಂದಿಗೆ ನೀಡಲಾಗುತ್ತಿದೆ. ಇದು ಕೂಡಾ ಕಾನೂನುಬದ್ಧವಾದ ಲೂಟಿ ಹಾಗೂ ಸಂಘಟಿತ ದರೋಡೆಯಾಗಿದೆ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಕಳೆದ 70 ವರ್ಷಗಳಲ್ಲಿ ದೇಶದ ಜನತೆಯ ಕಠಿಣ ಪರಿಶ್ರಮದಿಂದ ಸೃಷ್ಟಿಯಾದ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಕೇಂದ್ರ ಸರಕಾರ ತನ್ನ ಬಿಲಿಯಾಧೀಶ ಸ್ನೇಹಿತರಿಗೆ ಸರಕಾರ ನೀಡುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಟ್ವೀಟಿಸಿದ್ದಾರೆ.

ಬಿಜೆಪಿ ಆಳ್ವಿಕೆಯಲ್ಲಿ ದೇಶದ ಆಸ್ತಿಗಳನ್ನು ಸಂರಕ್ಷಿಲು ಸಾಧ್ಯವಿಲ್ಲವೆಂದು ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.

ರಸ್ತೆಗಳು, ರೈಲು,ಗಣಿಗಳು, ಟೆಲಿಕಾಂ, ಇಂಧನ, ಅನಿಲ , ವಿಮಾನನಿಲ್ದಾಣ, ಬಂದರುಗಳು, ಕ್ರೀಡಾಂಗಣ ಸೇರಿದಂತೆ ಆರು ಕೋಟಿ ರೂ. ಮೌಲ್ಯದ ದೇಶದ ಸೊತ್ತುಗಳನ್ನು ಮಾರಾಟಕ್ಕಿಡಲಾಗಿದೆ... ಮೋದಿಜಿಯವರು ಭೂಮಿಯಿಂದ ಹಿಡಿದು ಆಗಸದವರೆಗೆ ಎಲ್ಲವನ್ನೂ ಮಾರಾಟ ಮಾಡಲಿದ್ದಾರೆ. ಒಂದು ವೇಳೆ ಬಿಜೆಪಿ ಇದ್ದಲ್ಲಿ ದೇಶದ ಆಸ್ತಿಗಳನ್ನು ಸಂರಕ್ಷಿಸಲು ಸಾಧ್ಯವಿಲ್ಲ’’ ಎಂದು ಅವರು ಹಿಂದಿಯಲ್ಲಿ ಸ್ಟಾಪ್ ಸೆಲ್ಲಿಂಗ್ ಇಂಡಿಯಾ ಹ್ಯಾಶ್ಟ್ಯಾಗ್ ನೊಂದಿಗೆ ಟ್ವೀಟಿಸಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಅನಾವರಣಗೊಳಿಸಿದಾಗ ರಾಷ್ಟ್ರೀಯ ಬಂಡವಾಳ ಕ್ರೋಢೀಕರಣ ಯೋಜನೆ (ಎನ್ಎಂಪಿ)ಯು, ಪ್ರಯಾಣಿಕ ರೈಲುಗಳು, ರೈಲು ನಿಲ್ದಾಣಗಳು, ವಿಮಾನನಿಲ್ದಾಣಗಳು, ರಸ್ತೆ ಹಾಗೂ ಕ್ರೀಡಾಂಗಣಗಳ ನಿರ್ಮಾಣ, ನಿರ್ವಹಣೆಯಲ್ಲಿ ಖಾಸಗಿ ಕಂಪೆನಿಗಳ ಪಾಲುಗಾರಿಕೆ ಅವಕಾಶ ನೀಡಲಾಗಿದೆ.
 ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ 25 ವಿಮಾನನಿಲ್ದಾಣಗಳು ಸೇರಿದಂತೆ ಚೆನ್ನೈ, ಭೋಪಾಲ್, ವಾರಣಾಸಿ ಹಾಗೂ ವಡೋದರ ಸೇರಿದಂತೆ 40 ರೈಲು ನಿಲ್ದಾಣಗಳು, 15 ಕ್ರೀಡಾಂಗಣಗಳು ಹಾಗೂ ಹಲವಾರು ರೈಲ್ವೆ ಕಾಲನಿಗಳಲ್ಲಿ ಖಾಸಗಿ ಹೂಡಿಕೆಯನ್ನು ಮಾಡಲು ಗುರುತಿಸಲಾಗಿದೆ.

‘ಸರಕಾರವು ಆತ್ಮನಿರ್ಭರತೆ ಬಗ್ಗೆ ಆಡಂಬರದ ಮಾತುಗಳನ್ನಾಡುತ್ತಿದೆ, ಆದರೆ ಅದು ವಾಸ್ತವಿಕವಾಗಿ ತನ್ನ ಶತಕೋಟ್ಯಾಧಿಪತಿ ಸ್ನೇಹಿತರನ್ನು ದೇಶವು ಅವಲಂಭಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಟ್ವೀಟ್ ಮಾಡಿದ್ದಾರೆ. ಈ ಬಿಲಿಯಾಧೀಶ ಮಿತ್ರರಿಗೆ ಎಲ್ಲಾ ಕೆಲಸಗಳನ್ನು ಹಾಗೂ ಸಂಪತ್ತನ್ನು ನೀಡುತ್ತಿದೆ’’ 

ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News