ಅಸ್ಸಾಂ-ಮಿಝೋರಾಂ ಗಡಿ ಘರ್ಷಣೆ: ಕೇಂದ್ರ, ರಾಜ್ಯ ಸರಕಾರಗಳಿಗೆ ಎನ್ಎಚ್ಆರ್ಸಿ ನೋಟಿಸ್

Update: 2021-08-24 17:14 GMT

ಹೊಸದಿಲ್ಲಿ, ಅ. 23: ಎರಡು ಈಶಾನ್ಯ ರಾಜ್ಯಗಳ ನಡುವಿನ ಗಡಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಕೇಂದ್ರ ಸರಕಾರ, ಅಸ್ಸಾಂ ಹಾಗೂ ಮಿಜೋರಾಂ ಸರಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ನೋಟಿಸು ಜಾರಿ ಮಾಡಿದೆ.

ಅಸ್ಸಾಂನ ಕಾಮರೂಪ್ ಜಿಲ್ಲೆಯ ನಿವಾಸಿ ಮುಹಮ್ಮದ್ ಇಂಜುಮಲ್ ಹಕ್ ಅವರ ದೂರು ಸ್ವೀಕರಿಸಿದ ಬಳಿಕ ಎನ್ಎಚ್ಆರ್ಸಿ ಈ ನೋಟಿಸು ಜಾರಿ ಮಾಡಿದೆ.

ಮಿಝೋರಾಂ ಪೊಲೀಸರೊಂದಿಗೆ ಗುಂಪು ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಅಧಿಕಾರಿಗಳ ಮೇಲೆ ದಾಳಿ ನಡೆಸಿತು ಎಂದು ಹಕ್ ಆರೋಪಿಸಿದ್ದಾರೆ.

ಎರಡು ರಾಜ್ಯಗಳ ಪೊಲೀಸರ ನಡುವೆ ಗುಂಡು ಹಾರಾಟ ಹಾಗೂ ಘರ್ಷಣೆಗಳು ನಡೆದ ಬಳಿಕ ರಾಜ್ಯದ ಗಡಿಯಲ್ಲಿ ಜುಲೈ 26ರಂದು ಹಿಂಸಾಚಾರ ಸಂಭವಿಸಿತ್ತು.

ಘರ್ಷಣೆಯ ಸಂದರ್ಭ ಐವರು ಅಸ್ಸಾಂ ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು. ಕೊಲಾಸಿಬ್ ಜಿಲ್ಲೆಯ ವೈರಂಗೇಟ್ನಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ರಾಜ್ಯ ಪೊಲೀಸರು ನಿರ್ವಹಿಸುತ್ತಿದ್ದ ಹೊರ ಠಾಣೆಯನ್ನು ಅಸ್ಸಾಂನ ಸುಮಾರು 200 ಪೊಲೀಸರು ದಾಟಿ ಹೋಗಿದ್ದರು ಎಂದು ಮಿರೆರಾಂ ಸರಕಾರ ಪ್ರತಿಪಾದಿಸಿತ್ತು.

ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಅಸ್ಸಾಂ ಹಾಗೂ ಮಿಝೋರಾಂನ ಮುಖ್ಯ ಕಾರ್ಯದರ್ಶಿಗಳಿಗೆ ರವಿವಾರ ನೋಟಿಸು ಜಾರಿ ಮಾಡಿರುವ ಎನ್ಎಚ್ಆರ್ಸಿ, ಒಂದು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

‘‘ಸರಕಾರಿ ಅಧಿಕಾರಿಗಳ ಸಾವು ಹಾಗೂ ಗಾಯಗಳಾದ ಗಂಭೀರ ಆರೋಪವನ್ನು ದೂರುದಾರರು ಮಾಡಿದ್ದಾರೆ. ಇದು ಮೃತಪಟ್ಟವರ ಹಾಗೂ ಗಾಯಗೊಂಡವರ ಮಾನವ ಹಕ್ಕುಗಳ ಉಲ್ಲಂಘನೆ. ಇಂತಹ ಮಾದರಿಯ ಪ್ರಕರಣಗಳನ್ನು ಆಯೋಗ ತುಂಬಾ ಗಂಭೀರವಾಗಿ ಪರಿಗಣಿಸುತ್ತದೆ’’ ಎಂದು ಎನ್ಎಚ್ಆರ್ಸಿ ಹೇಳಿದೆ.

21ರ ಹರೆಯದ ಹಕ್ ಅವರು ಗುವಾಹಟಿಯ ವಿದ್ಯಾರ್ಥಿ. ಘಟನೆ ನಡೆದ ನಾಲ್ಕು ದಿನಗಳ ಬಳಿಕ ಜುಲೈ 30ರಂದು ಅವರು ಈ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News