×
Ad

ಜಗಳಗಂಟ ರಾಷ್ಟ್ರ: ಪರಸ್ಪರ ದೂಷಿಸಿಕೊಂಡ ಅಮೆರಿಕ, ಚೀನಾ

Update: 2021-08-25 21:53 IST

 ವಾಷಿಂಗ್ಟನ್, ಆ.25: ಚೀನಾವು ಆಗ್ನೇಯ ಏಶ್ಯಾದ ನೆರೆಹೊರೆಯವರೊಂದಿಗೆ ಕಾಲು ಕೆರೆದು ಜಗಳವಾಡುವ ಜಗಳಗಂಟ, ತಂಟೆಕೋರ ದೇಶ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬುಧವಾರ ಪುನರುಚ್ಚರಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರು ಚೀನಾ ಮತ್ತು ಆಗ್ನೇಯ ಏಶ್ಯಾ ದೇಶಗಳ ನಡುವೆ ಕಂದಕ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇದಕ್ಕೂ ಮುನ್ನ ಚೀನಾದ ಸರಕಾರಿ ಮಾಧ್ಯಮದಲ್ಲಿ ಆರೋಪಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಹ್ಯಾರಿಸ್, ಸಮುದ್ರವ್ಯಾಪ್ತಿಗೆ ಸಂಬಂಧಿಸಿದ ವಿವಾದದಲ್ಲಿ ಚೀನಾದ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಿಸುವ ಅಗತ್ಯವಿದೆ ಎಂದಿದ್ದಾರೆ. 

ಸಮುದ್ರವ್ಯಾಪ್ತಿಗೆ ಸಂಬಂಧಿಸಿ ವಿಶ್ವಸಂಸ್ಥೆಯ ನಿಯಮಗಳಿಗೆ ಬದ್ಧವಾಗುವಂತೆ ಚೀನಾದ ಮೇಲೆ ಒತ್ತಡ ಹೆಚ್ಚಿಸುವ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಮತ್ತು ಆ ದೇಶದ ಜಗಳಗಂಟತನ ಮತ್ತು ಸಮುದ್ರವ್ಯಾಪ್ತಿಯ ಮೇಲೆ ಹಕ್ಕು ಸಾಧಿಸುವ ವಿಪರೀತ ಕ್ರಮಗಳಿಗೆ ಸವಾಲು ಹಾಕಬೇಕಿದೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ಚೀನಾದ ಪ್ರಾಭಲ್ಯವನ್ನು ನಿಯಂತ್ರಿಸಲು ಅಮೆರಿಕ ನಡೆಸುತ್ತಿರುವ ಉಪಕ್ರಮಗಳ ಅಂಗವಾಗಿ ವಿಯೆಟ್ನಾಮ್ ಭೇಟಿ ನೀಡಿ ಅವರು ಅಧ್ಯಕ್ಷ ಗ್ಯುಯೆನ್ ಕ್ಸುವಾನ್ ಫುಕ್ ಜತೆ ಚರ್ಚಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. 

ದಕ್ಷಿಣ ಚೀನಾ ಸಮುದ್ರಮಾರ್ಗವು ಹಡಗುಗಳ ಸಂಚಾರದ ಪ್ರಮುಖ ಮಾರ್ಗವಾಗಿದ್ದು ಇಲ್ಲಿ ಮತ್ಸ್ಯಸಂಪತ್ತೂ ಹೇರಳವಾಗಿದೆ. ಚೀನಾ, ವಿಯೆಟ್ನಾಮ್, ಬ್ರುನೈ, ಮಲೇಶ್ಯಾ, ಫಿಲಿಪ್ಪೀನ್ಸ್ ಈ ಸಮುದ್ರಪ್ರದೇಶ ವ್ಯಾಪ್ತಿಯ ದೇಶಗಳಾಗಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪವನ್ನು ನಿರ್ಮಿಸಿರುವ ಚೀನಾ ಅಲ್ಲಿ ಸೇನಾನೆಲೆಗಳನ್ನು ಸ್ಥಾಪಿಸಿದೆ. ಇದು ತನ್ನ ಸಾರ್ವಭೌಮ ಜಲಪ್ರದೇಶವಾಗಿದೆ ಎಂದು ವಾದಿಸುವ ಚೀನಾ ಇಲ್ಲಿ ವಿದೇಶದ ಯುದ್ಧನೌಕೆಗಳ ಸಂಚಾರಕ್ಕೆ ಆಕ್ಷೇಪ ಸೂಚಿಸುತ್ತಿದೆ. ಈ ಸಮುದ್ರವ್ಯಾಪ್ತಿಯಲ್ಲಿ ಚೀನಾದ ಆಕ್ಷೇಪದ ಮಧ್ಯೆಯೂ ಅಮೆರಿಕ ಪ್ರತೀವರ್ಷ ನೌಕಾ ಕವಾಯತು ನಡೆಸುತ್ತದೆ.

ಚೀನಾವು ಬೆದರಿಕೆ, ಬಲಪ್ರಯೋಗ ನಡೆಸುತ್ತಿದೆ ಎಂದು ಆರೋಪಿಸಿ ಬೆರಳು ತೋರಿಸುವ ಸಂದರ್ಭ ತಮ್ಮ ನಡವಳಿಕೆಯ ಬಗ್ಗೆ ಕಮಲಾ ಹ್ಯಾರಿಸ್ ಬೂಟಾಟಿಕೆ ತೋರಿದ್ದಾರೆ. ಪ್ರಾದೇಶಿಕ ದೇಶಗಳನ್ನು ಬೆದರಿಸಿ, ಬಲಪ್ರಯೋಗಿಸಿ ಚೀನಾವನ್ನು ನಿರ್ಬಂಧಿಸುವ ಅಮೆರಿಕದ ಯೋಜನೆಗೆ ಸೇರ್ಪಡೆಗೊಳಿಸುವ ಅಮೆರಿಕ ನಿಜಕ್ಕೂ ಜಗಳಗಂಟ ದೇಶ . ದಕ್ಷಿಣ ಏಶ್ಯಾ ದೇಶಗಳೊಂದಿಗಿನ ಚೀನಾದ ಏಕೈಕ ಬದ್ಧತೆಯೆಂದರೆ ದಕ್ಷಿಣ ಏಶ್ಯಾ ದೇಶಗಳು ಮತ್ತು ಚೀನಾದ ಮಧ್ಯೆ ಕಂದಕ ನಿರ್ಮಿಸುವ ಪ್ರಯತ್ನವಾಗಿದೆ ಎಂದು ಚೀನಾದ ಸರಕಾರಿ ಪ್ರಾಯೋಜಿತ ಮಾಧ್ಯಮದ ಸಂಪಾದಕೀಯ ಬರಹದಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ, ಹ್ಯಾರಿಸ್ ಅವರ ವಿಯೆಟ್ನಾಂ ಭೇಟಿ ಕಾರ್ಯಕ್ರಮ ಸೋಮವಾರದ ಬದಲು ಮಂಗಳವಾರಕ್ಕೆ ಮುಂದೂಡಲ್ಪಟ್ಟಿತ್ತು. ಹನೋಯ್ಯಲ್ಲಿ ಹವಾನಾ ಸಿಂಡ್ರೋಮ್ನಂತಹ ವಿಲಕ್ಷಣ ಕಾಯಿಲೆಯ ಪ್ರಕರಣದ ಬಗ್ಗೆ ಶಂಕೆ ಇರುವುದರಿಂದ ಹ್ಯಾರಿಸ್ ಭೇಟಿ ವಿಳಂಬವಾಗಿದೆ ಎಂದು ವಿಯೆಟ್ನಾಮ್ ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಹೇಳಿಕೆ ನೀಡಿತ್ತು. ಆದರೆ ಈ ವಿಳಂಬದ ಸಂದರ್ಭ, ವಿಯೆಟ್ನಾಮ್ ಪ್ರಧಾನಿ ಫಾಮ್ ಮಿನ್ ಚಿನ್ ಹಾಗೂ ವಿಯೆಟ್ನಾಮ್ನಲ್ಲಿನ ಚೀನಾದ ರಾಯಭಾರಿ ಪೂರ್ವನಿಗದಿಯಾಗದ ಸಭೆ ನಡೆಸಿದ್ದು, ವಿಯೆಟ್ನಾಮ್ ವಿದೇಶ ನೀತಿಗೆ ಸಂಬಂಧಿಸಿದ ವಿಷಯದಲ್ಲಿ ಪ್ರತ್ಯೇಕ ನಿಲುವು ತಳೆಯಬಾರದು ಎಂದು ಈ ಸಭೆಯಲ್ಲಿ ಚೀನಾ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News