ಕಾಬೂಲ್‌ ವಿಮಾನ ನಿಲ್ದಾಣದ ಹೊರಗಡೆ ಆತ್ಮಾಹುತಿ ಬಾಂಬ್‌ ದಾಳಿ: ಹಲವು ಸಾವು ಶಂಕೆ

Update: 2021-08-26 17:01 GMT
photo: video screengrab twitter

ವಾಷಿಂಗ್ಟನ್,ಆ.26: ಅಮೆರಿಕ ಮತ್ತು ಇತರ ದೇಶಗಳು ಸಾವಿರಾರು ಜನರನ್ನು ತೆರವುಗೊಳಿಸುವ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನ ಹಮೀದ್ ಕರ್ಝಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಗುರುವಾರ ಭಾರೀ ಸ್ಫೋಟ ಸಂಭವಿಸಿದ್ದು,ಅಮೆರಿಕ ಸೇನೆಯು ಇದನ್ನು ದೃಢಪಡಿಸಿದೆ. ೧೩ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ

‘ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸ್ಫೋಟ ಸಂಭವಿಸಿರುವುದನ್ನು ನಾವು ದೃಢಪಡಿಸುತ್ತೇವೆ. ಸಾವುನೋವುಗಳು ಸದ್ಯ ಸ್ಪಷ್ಟವಾಗಿಲ್ಲ. ನಮಗೆ ಲಭ್ಯವಾದಾಗ ಹೆಚ್ಚಿನ ಮಾಹಿತಿಗಳನ್ನು ನೀಡುತ್ತೇವೆ ’ಎಂದು ಪೆಂಟಗಾನ್ ವಕ್ತಾರ ಜಾನ್ ಕರ್ಬಿ ತಿಳಿಸಿದರು.
ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ಬಳಿಕ ದೇಶವನ್ನು ತೊರೆಯಲು ಸಾವಿರಾರು ಜನರು ಕಳೆದ 12 ದಿನಗಳಿಂದಲೂ ಠಿಕಾಣಿ ಹೂಡಿರುವ ವಿಮಾನ ನಿಲ್ದಾಣದ ಮುಖ್ಯ ಅಬ್ಬೆ ಗೇಟ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ದೃಢಪಡದ ವರದಿಗಳು ತಿಳಿಸಿದ್ದರೆ,ಅಬ್ಬೆ ಗೇಟ್ ಬಳಿಯಿರುವ ತೆರವು ಕಾರ್ಯಾಚರಣೆಗಾಗಿ ಪಾಶ್ಚಾತ್ಯ ರಾಷ್ಟ್ರಗಳು ಬಳಸಿದ್ದ ಬ್ಯಾರನ್ ಹೋಟೆಲ್ಗೆ ನಿಕಟದಲ್ಲಿ ಸ್ಫೋಟ ಸಂಭವಿಸಿದೆ ಎಂದ ಇತರ ವರದಿಗಳು ಹೇಳಿವೆ.

ಇಸ್ಲಾಮಿಕ್ ಸ್ಟೇಟ್ (ಐಸಿಸ್) ಗ್ರೂಪ್ ನ ಅಫ್ಘಾನ್ ಘಟಕ ಇಸ್ಲಾಮಿಕ್ ಸ್ಟೇಟ್-ಖೋರಾಸಾನ್ (ಐಎಸ್-ಕೆ)ಗೆ ಸೇರಿದ ಆತ್ಮಹತ್ಯಾ ಬಾಂಬರ್ಗಳು ತನ್ನ ಸೈನಿಕರನ್ನು ತೆರವುಗೊಳಿಸಲು ಅಮೆರಿಕಕ್ಕೆ ಅಂತಿಮ ಗಡುವು ಆಗಿರುವ ಆ.31ಕ್ಕೆ ಮುನ್ನ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಬೆದರಿಕೆಯೊಡ್ಡುತ್ತಿರುವ ಬಗ್ಗೆ ತಮಗೆ ಬೇಹು ಮಾಹಿತಿ ಲಭಿಸಿದೆ ಎಂದು ಅಮೆರಿಕ ಮತ್ತು ಮಿತ್ರದೇಶಗಳ ಅಧಿಕಾರಿಗಳು ಹೇಳಿದ್ದರು.

ಭಯೋತ್ಪಾದಕ ದಾಳಿಯ ಬೆದರಿಕೆಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸುತ್ತುಮುತ್ತಲಿನ ಪ್ರದೇಶಗಳನ್ನು ತಕ್ಷಣ ತೊರೆಯುವಂತೆ ಗುರುವಾರ ನಸುಕಿನಲ್ಲಿ (ಅಫ್ಘಾನ್ ಸಮಯ) ಪಾಶ್ಚಾತ್ಯ ದೇಶಗಳು ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದವು. ಕಾಬೂಲ್ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿರುವ ವಿಮಾನಗಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಹೇಗಾದರೂ ಅಫ್ಘಾನಿಸ್ತಾನದಿಂದ ಪಾರಾಗಲು ಹಾತೊರೆಯುತ್ತಿರುವ ಜನರು ಅಲ್ಲಿ ಬೀಡು ಬಿಟ್ಟಿದ್ದಾರೆ. 

ಅಬ್ಬೆ ಗೇಟ್,ಈಸ್ಟ್ ಗೇಟ್ ಅಥವಾ ನಾರ್ಥ್ ಗೇಟ್ಗಳಲ್ಲಿರುವ ಜನರು ತಕ್ಷಣವೇ ಅಲ್ಲಿಂದ ತೆರಳುವಂತೆ ಅಮೆರಿಕದ ವಿದೇಶಾಂಗ ಇಲಾಖೆಯು ಹೇಳಿದೆ. ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದಕ ದಾಳಿಯು ಸನ್ನಿಹಿತವಾಗಿದೆ. ಕಳೆದೊಂದು ವಾರಗಳಲ್ಲಿ ಲಭಿಸಿದ ವರದಿಗಳು ಹಿಂದೆಂದಿಗಿಂತಲೂ ಹೆಚ್ಚು ವಿಶ್ವಾಸಾರ್ಹವಾಗಿವೆ ಎಂದು ಬ್ರಿಟನ್ನ ಸಶಸ್ತ್ರ ಪಡೆಗಳ ಸಚಿವ ಜೇಮ್ಸ್ ಹೀಪ್ಪೆ ಗುರುವಾರ ಬೆಳಿಗ್ಗೆಯಷ್ಟೇ ಹೇಳಿದ್ದರು.

ಕಾಬೂಲ್ ವಿಮಾನ ನಿಲ್ದಾಣದಿಂದ ತಮ್ಮ ತೆರವು ವಿಮಾನಯಾನಗಳು ಅಂತ್ಯಗೊಂಡಿವೆ ಅಥವಾ ಶೀಘ್ರವೇ ಅಂತ್ಯಗೊಳ್ಳಲಿವೆ ಎಂದು ಅಮೆರಿಕ ನೇತೃತ್ವದ ಮೈತ್ರಿಕೂಟದ ಹೆಚ್ಚಿನ ದೇಶಗಳು ತಿಳಿಸಿವೆ.

ಆ.14ರಂದು ಅಮೆರಿಕದ ನಿಯಂತ್ರಣದಲ್ಲಿರುವ ಕಾಬೂಲ್ ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ತೆರವು ಕಾರ್ಯಾಚರಣೆ ಆರಂಭಗೊಂಡ ಬಳಿಕ ಅಫ್ಘಾನಿಗಳು ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ ಸ್ಥಳಾಂತರಿಸಲಾದ ಜನರ ಸಂಖ್ಯೆ ಗುರುವಾರ 95,700ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News