ಗಾಝಾ ಪ್ರದೇಶಕ್ಕೆ ಸರಕು ಸಾಗಣೆಗೆ ಅವಕಾಶ ನೀಡಿದ ಇಸ್ರೇಲ್

Update: 2021-08-26 16:54 GMT

ಜೆರುಸಲೇಂ, ಆ.25: ಗಾಝಾ ಪಟ್ಟಿಯಲ್ಲಿ ವಿಧಿಸಿದ್ದ ವಾಣಿಜ್ಯ ನಿರ್ಭಂಧಗಳನ್ನು ಸಡಿಲಗೊಳಿಸುವುದಾಗಿ ಮತ್ತು ಗಾಝಾ ಪ್ರದೇಶಕ್ಕೆ ಸರಕು ಸಾಗಣೆಗೆ ಅವಕಾಶ ನೀಡುವುದಾಗಿ ಇಸ್ರೇಲ್ ಹೇಳಿದೆ.

ಗಾಝಾದ ಮೇಲೆ ವಿಧಿಸಿರುವ ಕಠಿಣ ನಿರ್ಬಂಧವನ್ನು ಸಡಿಲಿಸುವಂತೆ ಆಗ್ರಹಿಸಿ ಬುಧವಾರ ಇಸ್ರೇಲ್ ಗಡಿಭಾಗದ ಬಳಿ ನೂರಾರು ಪೆಲೆಸ್ತೀನೀಯರು ಪ್ರತಿಭಟನೆ ನಡೆಸಿದ್ದರು. ಶನಿವಾರ ಇದೇ ಕಾರಣ ಮುಂದಿಟ್ಟು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಸ್ರೇಲ್ ಸೇನೆ ಮತ್ತು ಪ್ರತಿಭಟನಾಕಾರರ ಮಧ್ಯೆ ಘರ್ಷಣೆ ನಡೆದಿತ್ತು.

ಈ ಘಟನೆಗಳ ಬಳಿಕ, ಗಾಝಾದಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಮುಂದಾಗಿರುವ ಇಸ್ರೇಲ್, ಗಾಝಾಕ್ಕೆ ಸರಕು ಸಾಗಣೆಯ ವಾಹನಗಳನ್ನು ಹೆಚ್ಚಿಸಲು ಹಾಗೂ ಗಾಝಾದ ವ್ಯಾಪಾರಸ್ತರು ಗುರುವಾರದಿಂದ ಇಸ್ರೇಲ್ ಪ್ರವೇಶಿಸಲು ಅನುಮತಿ ನೀಡುವುದಾಗಿ ಘೋಷಿಸಿದೆ.

ಪ್ರದೇಶದ ಭದ್ರತೆಯನ್ನು ರಕ್ಷಿಸಿಕೊಂಡು ಹೋಗುವ ಷರತ್ತಿನ ಮೇಲೆ ನಿರ್ಬಂಧ ಸಡಿಲಿಸಲಾಗಿದೆ. ಗಡಿಭಾಗದ ಪರಿಸ್ಥಿತಿ ಸುಧಾರಿಸಿದರೆ ಇನ್ನಷ್ಟು ಸಡಿಲಿಕೆಯಾಗಬಹುದು ಎಂದು ಇಸ್ರೇಲ್- ಪೆಲೆಸ್ತೀನ್ ಗಡಿದಾಟು ಪ್ರದೇಶದ ಉಸ್ತುವಾರಿ ರಕ್ಷಣಾ ಸಮಿತಿಯ ಹೇಳಿಕೆ ತಿಳಿಸಿದೆ.

ಈಜಿಪ್ಟ್ ಕೂಡಾ ಗಾಝಾ ಪಟ್ಟಿಗೆ ಹೊಂದಿಕೊಂಡಿರುವ ತನ್ನ ಗಡಿಯನ್ನು ಗುರುವಾರದಿಂದ ಆಂಶಿಕವಾಗಿ ತೆರೆಯಲಿದೆ ಎಂದು ಹಮಾಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News