ಕೈಗೊಂಬೆಯಾಗುತ್ತಿರುವ ಪೊಲೀಸರು: ನ್ಯಾಯ ವ್ಯವಸ್ಥೆಯ ಪಾತ್ರವೆಷ್ಟು?

Update: 2021-08-27 05:07 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದಲ್ಲಿಂದು ಪೊಲೀಸ್ ಅಧಿಕಾರಿಗಳು ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ಕೈಗೊಂಬೆಗಳಾಗುತ್ತಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಕಳವಳವನ್ನು ವ್ಯಕ್ತಪಡಿಸಿದೆ. ಮೇಲ್ನೋಟಕ್ಕೆ ಸುಪ್ರೀಂಕೋರ್ಟ್‌ನ ಆತಂಕ ದೇಶದ ಪಾಲಿಗೊಂದು ಭರವಸೆಯಾಗಿದೆ. ಆದರೆ ಇಂತಹದೊಂದು ಹೇಳಿಕೆಗೆ ಕಾರಣವಾಗಿರುವ ಪ್ರಕರಣವನ್ನು ತುಸು ಕೆದಕಿ ನೋಡಿದಾಗ ನಮಗೆ ನಿರಾಸೆಯಾಗುತ್ತದೆ. ಹಿಂದಿನ ಬಿಜೆಪಿ ಸರಕಾರದೊಂದಿಗೆ ಸಿಂಗ್ ಅತ್ಯಂತ ನಿಕಟವಾಗಿದ್ದರು ಎನ್ನುವ ಆರೋಪಗಳಿವೆ. ಅಂದಿನ ಸರಕಾರ ಸಿಂಗ್ ಅವರನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಂಡಿತ್ತು. ಇದೀಗ ಸರಕಾರ ಬದಲಾದ ಬೆನ್ನಿಗೇ, ಸಿಂಗ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಬಿದ್ದಿದೆ. ಸುಮಾರು 10 ಕೋಟಿ ರೂ. ವೌಲ್ಯದ ಆಸ್ತಿ ಪತ್ತೆಯಾಗಿದ್ದು, ಬೇನಾಮಿ ವ್ಯವಹಾರಗಳ ಕುರಿತ ದಾಖಲೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ ಸಿಂಗ್, ಈ ದಾಳಿ ಪೂರ್ವಾಗ್ರಹ ಪೀಡಿತ ಎಂದು ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರದೊಂದಿಗೆ ನಿಕಟವಾಗಿದ್ದೆ ಎಂದು ಶಂಕಿಸಿ ನನ್ನ ಮೇಲೆ ಈಗಿನ ಸರಕಾರ ದಾಳಿ ನಡೆಸುತ್ತಿದೆ. ಆದುದರಿಂದ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಅವರು ಸುಪ್ರೀಂಕೋರ್ಟ್ ಮೆಟ್ಟಿಲನ್ನೇರಿದ್ದಾರೆ. ಈ ಹಿನ್ನೆಲೆಯಲ್ಲಿ, ಸಿಂಗ್ ಅವರಿಗೆ ಪೂರಕವಾಗಿ ಸುಪ್ರೀಂಕೋರ್ಟ್ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಇಂದು ಕೇಂದ್ರ ಸರಕಾರ ವಿವಿಧ ತನಿಖಾ ಸಂಸ್ಥೆಗಳನ್ನು ತನ್ನ ಕೈಗೊಂಬೆ ಮಾಡಿಕೊಳ್ಳುತ್ತಿರುವ ಬಗೆಗಿನ ಆತಂಕದಿಂದ ನ್ಯಾಯಾಧೀಶರಿಂದ ಈ ಹೇಳಿಕೆ ಹೊರ ಬಂದಿಲ್ಲ ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ಗಮನಿಸಬೇಕಾಗಿದೆ.

ಇಷ್ಟಾಗಿಯೂ ದೇಶದಲ್ಲಿ ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಾಗುತ್ತಿದ್ದಾರೆ ಎನ್ನುವ ಸುಪ್ರೀಂಕೋರ್ಟ್ ಆತಂಕ ನೂರಕ್ಕೆ ನೂರು ಸತ್ಯ. ಅದು ಕೇವಲ, ಛತ್ತೀಸ್‌ಗಡದಲ್ಲಿ ನಡೆದ ಘಟನೆಗೆ ಸೀಮಿತವಾಗಬೇಕಾಗಿಲ್ಲ. ಆದರೆ ಪೊಲೀಸರ ಈ ಸ್ಥಿತಿಯ ಕಾರಣ ಛತ್ತೀಸ್‌ಗಢ ಪ್ರಕರಣದಷ್ಟು ಸರಳವೂ ಆಗಿಲ್ಲ. ಪಕ್ಷವೊಂದರ ಕೈಗೊಂಬೆಯಾಗಿ ಅಥವಾ ಕಾಲಾಳುವಾಗಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸುತ್ತಿರುವುದರ ನೇರ ಸಂತ್ರಸ್ತರು ಈ ದೇಶದ ಜನಸಾಮಾನ್ಯರು. ಇದರ ದುಷ್ಪರಿಣಾಮ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ದೇಶಾದ್ಯಂತ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳು ಅಥವಾ ಕೋಮು ಹಿಂಸಾಚಾರಗಳ ಹಿಂದೆ ಪೊಲೀಸರ ವೈಫಲ್ಯ ಅಥವಾ ಅವರ ನೇರ ಸಹಕಾರಗಳಿರುವುದು ಗುಟ್ಟಾಗಿರುವ ಸಂಗತಿಯೇನೂ ಅಲ್ಲ. ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ಹಿತಾಸಕ್ತಿಗೆ ಪೂರಕವಾಗಿ, ದೇಶದ ಕಾನೂನು ವ್ಯವಸ್ಥೆಯನ್ನೇ ಬಲಿಕೊಡುವ ಮಟ್ಟಕ್ಕೆ ಇಡೀ ಪೊಲೀಸ್ ವ್ಯವಸ್ಥೆಯೇ ಇಳಿಯುತ್ತಿರುವ ಹಲವು ಪ್ರಕರಣಗಳು ನಮ್ಮ ಮುಂದಿವೆ. ಇತ್ತೀಚೆಗೆ ನಡೆದ ದಿಲ್ಲಿ ಗಲಭೆಯಲ್ಲಿ, ಪೊಲೀಸರು ಕೇಂದ್ರ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡಿವೆೆ ಎಂಬ ಆರೋಪಗಳನ್ನು ಮಾಧ್ಯಮಗಳು ಮಾಡಿವೆ. ಮಾತ್ರವಲ್ಲ, ಪೊಲೀಸರ ವಿರುದ್ಧ ಹಲವು ಸಾಮಾಜಿಕ ಕಾರ್ಯಕರ್ತರು ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ. ದಿಲ್ಲಿಯಲ್ಲಿ ಪೊಲೀಸರು ರಾಜಕೀಯ ಪಕ್ಷದ ಒತ್ತಡದಿಂದಾಗಿ ಕೈಗೊಂಬೆಗಳಾಗಿಲ್ಲ. ಅವರೇ ಸ್ವತಃ ರಾಜಕೀಯ ಪಕ್ಷವೊಂದರ ಭಾಗವಾಗಿ ಕೆಲಸ ಮಾಡಿದ್ದಾರೆ ಎನ್ನುವುದನ್ನು ಗಮನಿಸಬೇಕಾಗಿದೆ.

ದಿಲ್ಲಿಯ ಗಲಭೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ನಿಷ್ಕ್ರಿಯರಾಗಿದ್ದರು ಎನ್ನುವ ಆರೋಪಗಳಷ್ಟೇ ಪೊಲೀಸರ ಮೇಲಿರುವುದಲ್ಲ, ಗಲಭೆಗಳಲ್ಲಿ ಕೆಲವು ಪೊಲೀಸರು ನೇರವಾಗಿ ಭಾಗವಹಿಸಿದ್ದಾರೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಬಂದಿವೆ. ಈ ಹಿಂದೆ ಗುಜರಾತ್ ಗಲಭೆಯಲ್ಲೂ ಇದೇ ಆರೋಪ ಕೇಳಿ ಬಂದಿತ್ತು. ಪೊಲೀಸರು ಪಕ್ಷಪಾತಿಯಾಗಿ ಕೆಲಸ ಮಾಡಿರುವುದು ಗಮನಕ್ಕೆ ಬಂದಾಗ ಮಧ್ಯ ಪ್ರವೇಶಿಸಬೇಕಾಗಿದ್ದುದು ನ್ಯಾಯಾಲಯ. ಸುಮಾರು 40ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ದಿಲ್ಲಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಕೂಡ ವೌನ ಪಾಲಿಸಿತು. ಇಂದು ಸಾಮಾಜಿಕ ಕಾರ್ಯಕರ್ತರು ಒಬ್ಬೊಬ್ಬರಾಗಿ ನ್ಯಾಯಾಲಯದ ಮೆಟ್ಟಿಲನ್ನು ತುಳಿದು ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ ಪೊಲೀಸರನ್ನು ಸಣ್ಣ ಪ್ರಮಾಣದಲ್ಲಿ ನ್ಯಾಯಾಲಯ ತರಾಟೆಗೆ ತೆಗೆದುಕೊಳ್ಳುತ್ತಿದೆ. ಆಡಳಿತದಲ್ಲಿರುವ ಪಕ್ಷದ ಕೈಗೊಂಬೆಗಳಾಗದೆ, ಸಂವಿಧಾನಕ್ಕೆ ಬದ್ಧವಾಗಿ ಕರ್ತವ್ಯ ನಿರ್ವಹಿಸಿದರೆ ಅವರ ಸ್ಥಿತಿ ಏನಾಗಬಹುದು ಎನ್ನುವುದಕ್ಕೆ ನಮ್ಮ ಮುಂದೆ ನಿವೃತ್ತ ಪೊಲೀಸ್ ಅಧಿಕಾರಿ ಸಂಜೀವ ಭಟ್ ಇದ್ದಾರೆ. ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾದ, ನಕಲಿ ಎನ್‌ಕೌಂಟರ್‌ಗಳನ್ನು ನಡೆಸಿದ ಆರೋಪ ಹೊತ್ತ ಅಧಿಕಾರಿಗಳೆಲ್ಲ ನಿರಪರಾಧಿಗಳೆಂದು ಹೊರ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ರಾಜಕಾರಣಿಗಳನ್ನು ಪ್ರಶ್ನಿಸಿದ, ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಪ್ರಭುತ್ವದ ವಿರುದ್ಧ ಧ್ವನಿಯೆತ್ತಿದ ಸಂಜೀವ ಭಟ್ ಕ್ಷುಲ್ಲಕ ಆರೋಪದಲ್ಲಿ ಇನ್ನೂ ಜೈಲಲ್ಲಿದ್ದಾರೆ. ಇವರು ಜೈಲಲ್ಲಿರುವುದಕ್ಕೆ ಕೇವಲ ರಾಜಕೀಯ ಪಕ್ಷಗಳು ಮಾತ್ರ ಕಾರಣವಲ್ಲ. ಒಂದು ವೇಳೆ ಈ ದೇಶದ ನ್ಯಾಯ ವ್ಯವಸ್ಥೆ ಪ್ರಭುತ್ವದ ಕೈಗೊಂಬೆಯಾಗಿಲ್ಲ ಎಂದಾಗಿದ್ದರೆ ಸಂಜೀವ ಭಟ್‌ರಂತಹ ಅಧಿಕಾರಿಗಳು ಜೈಲು ಕಂಬಿ ಎಣಿಸುವ ಸ್ಥಿತಿ ನಿರ್ಮಾಣವಾಗಬೇಕಾಗಿರಲಿಲ್ಲ. ಸಂಜೀವ ಭಟ್‌ಗೆ ಒದಗಿರುವ ಸ್ಥಿತಿಯನ್ನು ನೋಡಿದ ಯಾವುದೇ ಪೊಲೀಸ್ ಅಧಿಕಾರಿಯಾಗಿರಲಿ, ಆತ ಸಂವಿಧಾನ ಬದ್ಧವಾಗಿ ಕೆಲಸ ಮಾಡಲು ಸಾಧ್ಯವೇ? ಆಡಳಿತದಲ್ಲಿರುವ ಪಕ್ಷಗಳನ್ನು ಎದುರು ಹಾಕಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗೆ ಉತ್ತರಿಸುವ ಹೊಣೆಗಾರಿಕೆ ಮತ್ತೆ ಸುಪ್ರೀಂಕೋರ್ಟ್ ಹೆಗಲ ಮೇಲೆಯೇ ಬೀಳುತ್ತದೆ.

‘ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಗಳಾಗುತ್ತಿರುವುದು ಇತ್ತೀಚಿನ ಹೊಸ ಪ್ರವೃತ್ತಿ’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲ, ರಾಜಕೀಯ ಪಕ್ಷಗಳ ಕೈಗೊಂಬೆಗಳಾಗಿ ಪೊಲೀಸರು ಕೆಲಸ ಮಾಡುತ್ತಿರುವುದು ಹಳೆಯ ಪ್ರವೃತ್ತಿ. ಹೊಸ ಪ್ರವೃತ್ತಿ ಯಾವುದೆಂದರೆ, ಇತ್ತೀಚಿನ ದಿನಗಳಲ್ಲಿ ನ್ಯಾಯ ವ್ಯವಸ್ಥೆಯೇ ಆಳುವವರ ಕೈಗೊಂಬೆಯಾಗುತ್ತಿರುವುದು. ಮೊದಲಿಗಿಂತ ಎರಡನೆಯದು ಆತಂಕಕಾರಿ. ಶಾಸಕಾಂಗ, ಕಾರ್ಯಾಂಗ ಅಪಾಯದಲ್ಲಿದ್ದಾಗ ಇಡೀ ದೇಶ ಸಂವಿಧಾನದ ಅಳಿವುಉಳಿವಿನ ಭಾರವನ್ನು ನ್ಯಾಯಾಲಯದ ಹೆಗಲ ಮೇಲಿಡುತ್ತದೆ. ಅಂತಹ ನ್ಯಾಯಾಂಗವೇ ಆಳುವವರ ಕೈಗೊಂಬೆಯಾದರೆ? ರಾಜ್ಯಸಭೆಯಂತಹ ಹುದ್ದೆಗಳನ್ನು ಅಪೇಕ್ಷಿಸಿ ನ್ಯಾಯ ಮೂರ್ತಿಗಳು ಸರಕಾರದ ಮೂಗಿನ ನೇರಕ್ಕೆ ತೀರ್ಪುಗಳನ್ನು ನೀಡಿದರೆ? ಕಾನೂನು ವ್ಯವಸ್ಥೆಯ ನಡೆಯ ಮೇಲೆ ನ್ಯಾಯ ವ್ಯವಸ್ಥೆ ತನ್ನ ಹದ್ದಿನ ಕಣ್ಣನ್ನು ಇಟ್ಟಿದ್ದರೆ ಇಂದು ಈ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೇನೋ? ಆದುದರಿಂದ, ಪೊಲೀಸ್ ವ್ಯವಸ್ಥೆಗಳು ರಾಜಕಾರಣಿಗಳ ಹಿಡಿತಕ್ಕೆ ಸಿಕ್ಕಿ ನರಳುವಲ್ಲಿ ತನ್ನ ಪಾತ್ರವೆಷ್ಟು ಎನ್ನುವುದನ್ನು ಸುಪ್ರೀಂಕೋರ್ಟ್ ಆತ್ಮ ವಿಮರ್ಶೆಗೆ ಒಡ್ಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News