ಮಹಿಷನ ನಾಡಿಗೆ ಕಳಂಕ ತಂದ ಸಾಮೂಹಿಕ ಅತ್ಯಾಚಾರ ಪ್ರಕರಣ

Update: 2021-08-28 05:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅತ್ಯಾಚಾರ ನಡೆದಾಗ ಪುರುಷನ ನೀಚತನ ಚರ್ಚೆಗೆ ಒಳಗಾಗಬೇಕು. ಪುರುಷರು ಸಮಾಜದಲ್ಲಿ ಹೇಗಿರಬೇಕು, ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು, ರಾತ್ರಿ ಒಬ್ಬಳೇ ಹೆಣ್ಣು ಮಗಳು ನಡೆದು ಬಂದರೆ ಅವಳಿಗೆ ಯಾವ ರೀತಿಯಲ್ಲಿ ನೆರವಾಗಬೇಕು? ಇತ್ಯಾದಿ ವಿಷಯಗಳು ಮುನ್ನೆಲೆಗೆ ಬರಬೇಕು. ಇದೇ ಸಂದರ್ಭದಲ್ಲಿ, ಹೆಣ್ಣಿನ ಕುರಿತಂತೆ ಪುರುಷನಿಗಿರಬೇಕಾದ ಹೊಣೆಗಾರಿಕೆಗಳನ್ನು ಸಮಾಜ ಜಾಗೃತಿಗೊಳಿಸಬೇಕು. ನಡೆದ ಕೃತ್ಯದ ಬಗ್ಗೆ ಪುರುಷ ಸಮಾಜ ಲಜ್ಜೆಯಿಂದ ತಲೆತಗ್ಗಿಸಬೇಕು.. ಭಾರತೀಯ ಸಂಸ್ಕೃತಿ ಮಹಿಳೆಗೆ ನೀಡಿರುವ ಹಿರಿಮೆಯ ಬಗ್ಗೆ ಪ್ರವಚನಗಳನ್ನು ನೀಡಿ, ಪುರುಷರಲ್ಲಿ ನೈತಿಕತೆಯನ್ನು ಜಾಗೃತಿಗೊಳಿಸಬೇಕು. ದುರದೃಷ್ಟವಶಾತ್ ಪ್ರತಿ ಅತ್ಯಾಚಾರ ಪ್ರಕರಣದಲ್ಲಿ ಈ ದೇಶದಲ್ಲಿ ಪ್ರಶ್ನೆಗೊಳಗಾಗುವುದು ಪುರುಷನಲ್ಲ, ಬದಲಿಗೆ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತ ಮಹಿಳೆ. ಯಾವುದೇ ಒಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಕ್ಷಣ ಮಹಿಳೆ ಎಷ್ಟು ಗಂಟೆಗೆ ಮನೆಯಿಂದ ಹೊರಬರಬೇಕು, ಎಷ್ಟು ಗಂಟೆಗೆ ಮನೆ ಸೇರಬೇಕು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು, ಯಾವ ಬಟ್ಟೆ ಧರಿಸಬೇಕು, ಧರಿಸಬಾರದು? ಮೊದಲಾದ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ತಮ್ಮ ಹೊಣೆಗಾರಿಕೆಗಳಿಂದ ಜಾರಿಕೊಳ್ಳುವ ರಾಜಕಾರಣಿಗಳು, ‘ಮಹಿಳೆಯರ ಪಾತ್ರ ಅತ್ಯಾಚಾರದಲ್ಲಿ ಎಷ್ಟಿದೆ ?’ ಎನ್ನುವುದನ್ನು ಮಾಧ್ಯಮಗಳಿಗೆ ವಿವರಿಸಲಾರಂಭಿಸುತ್ತಾರೆ. ಇದೇ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯ ಪಾತ್ರ ಚರ್ಚೆಯಿಂದ ಬದಿಗೆ ಸರಿದಿರುತ್ತದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಸಾಮೂಹಿಕ ಅತ್ಯಾಚಾರಗಳ ಚರ್ಚೆ ಇದೀಗ, ಮಹಿಳೆಯ ವರ್ತನೆಯನ್ನು ವಿಶ್ಲೇಷಿಸುವಲ್ಲಿಗೆ ಬಂದು ನಿಂತಿದೆ.

ಯಾವುದೇ ಅಪಘಾತ ಸಂಭವಿಸಿರಲಿ, ನಾವು ಮೊತ್ತ ಮೊದಲು ಸಂತ್ರಸ್ತರ ಜೊತೆಗೇ ನಿಲ್ಲಬೇಕು. ಒಬ್ಬ ಸೈಕಲ್ ಸವಾರನಿಗೆ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ಢಿಕ್ಕಿ ಹೊಡೆದರೆ, ತಕ್ಷಣ ನಾವು ಸವಾರನ ಸ್ಥಿತಿಗತಿಯ ಬಗ್ಗೆ ಮಾತನಾಡಬೇಕು. ರಸ್ತೆಯಲ್ಲಿ ಇಷ್ಟೆಲ್ಲ ಒತ್ತಡಗಳಿರುವಾಗ ಸೈಕಲ್ ಜೊತೆಗೆ ಬಂದಿರುವುದೇ ತಪ್ಪು, ಕಾರು ವೇಗವಾಗಿ ಓಡುವುದು ಸಹಜ, ಸೈಕಲ್ ಸವಾರಿಗಾಗಿ ವಿಶೇಷ ರಸ್ತೆ ಬಳಸಬೇಕು, ನಗರಗಳಲ್ಲಿ ಸೈಕಲ್ ಬಳಸುವುದು ತಪ್ಪು ಎನ್ನುತ್ತಾ ಅವಘಡಕ್ಕೆ ಕಾರಣನಾದ ಕಾರು ಮಾಲಕನನ್ನು ರಕ್ಷಿಸುವುದು, ಇನ್ನಷ್ಟು ಅವಘಡಗಳಿಗೆ ನಾವು ಸಮ್ಮತಿಯನ್ನು ನೀಡಿದಂತೆ. ಒಂದು ಅಂಗಡಿಯಲ್ಲಿ ಕಳವು ನಡೆಯಿತು. ಆ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಇಲ್ಲ ಎನ್ನುವುದನ್ನೇ ಮುಂದಿಟ್ಟು ಅಂಗಡಿ ಮಾಲಕನನ್ನು ತರಾಟೆಗೆ ತೆಗೆದುಕೊಂಡರೆ? ನೀನು ಸಿಸಿ ಕ್ಯಾಮರಾ ಅಳವಡಿಸದೇ ಇದ್ದುದರಿಂದ ಕಳ್ಳರು ಸುಲಭವಾಗಿ ನಿನ್ನ ಅಂಗಡಿಗೆ ನುಗ್ಗಿದರು ಎಂದು ಕಾನೂನು ರಕ್ಷಕರು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಂಡರೆ? ಒಬ್ಬ ಮಹಿಳೆ ರಾತ್ರಿ ಮನೆಯಿಂದ ಹೊರಡುವ ಸಂದರ್ಭದಲ್ಲಿ ಆಕೆಗೆ ನಾವು ಎಷ್ಟು ಬೇಕಾದರೂ ಮುಂಜಾಗರೂಕತೆಯನ್ನು ನೀಡಬಹುದು. ಆಕೆ ಧರಿಸಿರುವ ವಸ್ತ್ರಗಳ ಬಗ್ಗೆಯೂ ಎಚ್ಚರಿಕೆ ನೀಡಬಹುದು. ಯಾಕೆಂದರೆ ರಸ್ತೆಯಲ್ಲಿ ರೇಬಿಸ್ ಕಾಯಿಲೆ ಅಂಟಿಕೊಂಡಿರುವ ಹುಚ್ಚು ನಾಯಿಗಳೂ ಇರುತ್ತವೆ. ಆ ನಾಯಿಗಳಿಗೆ ಸರಿತಪ್ಪುಗಳ ಅರಿವಿರುವುದಿಲ್ಲ ಮತ್ತು ನಮ್ಮ ಬೀದಿಯಲ್ಲಿ ಹುಚ್ಚುನಾಯಿಗಳನ್ನು ಹಿಡಿದು ಅದಕ್ಕೆ ಬೇಕಾದ ಚಿಕಿತ್ಸೆ ನೀಡುವ ವ್ಯವಸ್ಥೆಯಿಲ್ಲ ಎನ್ನುವುದನ್ನೂ ಆಕೆಗೆ ಮನವರಿಕೆ ಮಾಡಬಹುದು. ಆದರೆ, ಯಾವಾಗ ಆಕೆ ಹುಚ್ಚುನಾಯಿಗಳಿಗೆ ಬಲಿಯಾಗುತ್ತಾಳೋ, ಆಗ ‘ಹುಚ್ಚು ನಾಯಿ ಇರುವುದೇ ಹಾಗೆ. ನೀನೇಕೆ ಎಚ್ಚರಿಕೆ ವಹಿಸಲಿಲ್ಲ?’ ಎಂದು ಸಂತ್ರಸ್ತೆಯನ್ನು ಪ್ರಶ್ನಿಸುವುದು ಸರಿಯಾದ ಕ್ರಮವಲ್ಲ. ‘ಹುಚ್ಚುನಾಯಿಗಳು ಯಾಕೆ ನಮ್ಮ ಬೀದಿಗಳಲ್ಲಿ ಇವೆ?’ ‘ಅವುಗಳು ಯಾಕೆ ಕಾನೂನಿನ ಬೆದರಿಕೆಯಿಲ್ಲದೆ ಬೀದಿಗಳಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿವೆ?’ ‘ಅಂತಹ ಹುಚ್ಚುನಾಯಿಗಳ ಪಡೆ, ಈ ಹಿಂದೆ ಹಲವು ಅನಾಹುತಗಳನ್ನು ಮಾಡಿದ್ದರೂ ಸಂಬಂಧಪಟ್ಟವರು ಅವುಗಳಿಗೆ ಲಗಾಮು ಹಾಕಲು ಯಾಕೆ ವಿಫಲರಾಗಿದ್ದಾರೆ?’ ಎನ್ನುವ ಪ್ರಶ್ನೆಗಳು ಮಹತ್ವವನ್ನು ಪಡೆಯಬೇಕು. ದುರಂತ ನಡೆದ ಬಳಿಕ ನಾವು ಸಂತ್ರಸ್ತೆಯನ್ನು ಪ್ರಶ್ನಿಸುವುದು, ಅಪರಾಧಿಗಳನ್ನು ಮತ್ತು ಅಪರಾಧಗಳನ್ನು ಪೋಷಿಸಿದಂತೆ ಮತ್ತು ಅದು ಮಾನವೀಯ ಸಮಾಜಕ್ಕೆ ತಕ್ಕುದಾದುದು ಖಂಡಿತ ಅಲ್ಲ.

ಮಹಿಳೆ ಸಂಜೆ ಏಳು ಗಂಟೆಗೆ ಬೆಟ್ಟ ಪ್ರದೇಶದಲ್ಲಿ ತನ್ನ ಸ್ನೇಹಿತನೊಂದಿಗೆ ಹೋದ ಕಾರಣದಿಂದಲೇ ಅತ್ಯಾಚಾರ ನಡೆಯಿತು ಎಂಬ ವಾದ ಹತ್ತು ಹಲವು ಮಿತಿಗಳನ್ನು ಹೊಂದಿದೆ. ಈ ದೇಶದಲ್ಲಿ ಅತ್ಯಾಚಾರ ನಡೆಯಬೇಕಾದರೆ, ಮಹಿಳೆಯೊಬ್ಬಳು ಒಬ್ಬಂಟಿಯಾಗಿ ಬೆಟ್ಟ ಪ್ರದೇಶದಲ್ಲಿ ಓಡಾಡ ಬೇಕು ಎಂದಿಲ್ಲ. ಕೆಲವೊಮ್ಮೆ ಆಕೆ ತನ್ನ ಬದುಕಿನ ಮೂಲಭೂತ ಬೇಡಿಕೆಯನ್ನು ಮುಂದಿಟ್ಟು ಸಚಿವರ ಖಾಸಗಿ ಕೋಣೆಗೆ ಹೋದರೂ ಈ ಅತ್ಯಾಚಾರ ನಡೆಯಬಹುದು ಅಥವಾ ಒಬ್ಬ ಮಹಿಳೆ ದೇವಸ್ಥಾನಕ್ಕೆ ಪೂಜೆಗೆಂದು ಹೋದಾಗ ಅಲ್ಲಿನ ಅರ್ಚಕನ ನೇತೃತ್ವದಲ್ಲೇ ಅತ್ಯಾಚಾರ ನಡೆಯಬಹುದು. ಉತ್ತರ ಪ್ರದೇಶದ ದೇವಸ್ಥಾನದಲ್ಲೇ ಇಂತಹದೊಂದು ಘಟನೆ ನಡೆದಿರುವುದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಯಿತು. ಹಾಥರಸ್‌ನ ಗದ್ದೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಕೊಲೆಗೈಯಲ್ಪಟ್ಟ ಮಹಿಳೆಯರು ಬಟ್ಟೆಯ ಕಾರಣಕ್ಕೆ ಬಲಿಯಾದವರಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ. ಅಷ್ಟೇ ಏಕೆ, ಹೆಣ್ಣು ಮಗುವೊಂದನ್ನು ಜಮ್ಮುವಿನಲ್ಲಿ ದೇವಸ್ಥಾನದೊಳಗೇ ಭೀಕರವಾಗಿ ಸಾಮೂಹಿಕ ಅತ್ಯಾಚಾರಗೈದು ಕೊಲೆಗೈದಿರುವುದು ಯಾಕೆ? ಅತ್ಯಾಚಾರಗೈದವರೆಲ್ಲರೂ ಸಮಾಜದಲ್ಲಿ ಗಣ್ಯರೆಂದು ಗುರುತಿಸಲ್ಪಟ್ಟವರು. ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನು ಆರೋಪಿಸ್ಥಾನದಲ್ಲಿ ನಿಲ್ಲಿಸುವ ಪರಂಪರೆಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರೂ ಸೇರಿದ್ದಾರೆ. ವಿಪರ್ಯಾಸವೆಂದರೆ ಇದೇ ಆರೆಸ್ಸೆಸ್, ಬಿಜೆಪಿಯ ಮುಖಂಡರೆಂದು ಕರೆಸಿಕೊಂಡವರೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿ ಕಂಬಿ ಎಣಿಸುತ್ತಿದ್ದಾರೆ. ಅತ್ಯಾಚಾರಕ್ಕೊಳಗಾಗುವ ಮಹಿಳೆ ಆರೋಪಿಯನ್ನು ‘ಅಣ್ಣಾ’ ಎಂದು ಕರೆದು ಬೇಡಿಕೊಳ್ಳಬೇಕು ಎಂದು ಸಲಹೆ ನೀಡಿದ ಸನ್ಯಾಸಿ ಅಸಾರಾಂ ಬಾಪು, ಈಗ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರಗೈದ ಆರೋಪದಲ್ಲಿ ಜೈಲೊಳಗಿದ್ದಾನೆ. ಇದೇ ಸಂದರ್ಭದಲ್ಲಿ ಪಾರ್ಕ್, ಬೀಚ್ ಅಥವಾ ಪ್ರೇಕ್ಷಣೀಯ ಸ್ಥಳಗಳಲ್ಲಿ ಕಾನೂನು ವ್ಯವಸ್ಥೆಯನ್ನು ಇನ್ನಷ್ಟು ಬಿಗಿಯಾಗಿಸುವ ಅಗತ್ಯವನ್ನು ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ ಬಹಿರಂಗ ಪಡಿಸಿದೆ.

ಬೀಚ್‌ಗಳಲ್ಲಿ , ಪ್ರೇಕ್ಷಣೀಯ ಸ್ಥಳಗಳಲ್ಲಿ ಇಂದು ಅತ್ಯಾಚಾರಿಗಳಷ್ಟೇ ಅಲ್ಲ, ದರೋಡೆಕೋರರು, ಕೋಮು ದುಷ್ಕರ್ಮಿಗಳು ಬೇರೆ ಬೇರೆ ಗುರಿಗಳನ್ನಿಟ್ಟುಕೊಂಡು ಹೊಂಚು ಹಾಕಿ ಕೂತಿರುತ್ತಾರೆ. ಕರಾವಳಿಯಲ್ಲಿ ಪ್ರಸಿದ್ಧ ದೇವಸ್ಥಾನವನ್ನು ಭೇಟಿ ಮಾಡಲು ಬಂದ ವಿದ್ಯಾರ್ಥಿನಿಯರ ಮೇಲೆ ಸಂಘಪರಿವಾರದ ದುಷ್ಕರ್ಮಿಗಳು ಎರಗಿದ್ದರು. ಕಾರಣ, ಇಲ್ಲಿ ವಿದ್ಯಾರ್ಥಿನಿಯರು ಅನ್ಯ ಧರ್ಮದ ವಿದ್ಯಾರ್ಥಿಗಳ ಜೊತೆಗೆ ಬಂದಿದ್ದಾರೆ ಎನ್ನುವುದಷ್ಟೇ ಆಗಿತ್ತು. ಸಮುದ್ರತೀರದಂತಹ ಪ್ರದೇಶಗಳಲ್ಲಿ ಸೌಂದರ್ಯಗಳಷ್ಟೇ ಇರುವುದಲ್ಲ. ಅಲ್ಲಿ ಮನುಷ್ಯರ ವೇಷದಲ್ಲಿ ಬರ್ಬರತೆಗಳೂ ಓಡಾಡುತ್ತಿರುತ್ತವೆ. ಈ ಬಗ್ಗೆ ಮಹಿಳೆಯರೂ ಜಾಗೃತಿಯನ್ನು ಹೊಂದಬೇಕಾಗಿದೆ. ಭಾರತೀಯ ಸಮಾಜ ಬಾಯಿ ಮಾತಿನಲ್ಲಷ್ಟೇ ಹೆಣ್ಣನ್ನು ದೇವತೆಗೆ ಹೋಲಿಸುತ್ತಾ ಬಂದಿದೆ. ಹೆಣ್ಣಿನ ಮೇಲೆ ಸಾಮಾಜಿಕ, ಧಾರ್ಮಿಕ ಕಾರಣಗಳನ್ನು ಮುಂದೊಡ್ಡಿ ಅತಿ ಹೆಚ್ಚು ದೌರ್ಜನ್ಯ ನಡೆಸಿದ ದೇಶ ನಮ್ಮದು ಎನ್ನುವ ಎಚ್ಚರಿಕೆ ಮಹಿಳೆಯರಿಗೂ ಇರಬೇಕು. ಈಗಾಗಲೇ ಭಾರತ ಮಹಿಳೆಯರಿಗೆ ಅತಿ ಹೆಚ್ಚು ಅಪಾಯಕಾರಿ ದೇಶ ಎನ್ನುವುದನ್ನು ವಿಶ್ವಸಂಸ್ಥೆ ವರದಿ ತಿಳಿಸಿದೆ. ಸಾಮಾಜಿಕ, ಜಾತಿ ಕಾರಣಕ್ಕಾಗಿ ನಡೆಯುತ್ತಿರುವ ದೌರ್ಜನ್ಯದ ಬಗೆ ಬೇರೆಯೇ. ಕನಿಷ್ಠ ಮೈಸೂರಿನಲ್ಲಿ ನಡೆದಂತಹ ದುರಂತಗಳನ್ನು ತಪ್ಪಿಸಲು ಮಹಿಳೆಯರೂ ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಬೇಕು. ಅತ್ಯಾಚಾರ ಮಾನವೀಯ ಸಮಾಜಕ್ಕೆ ಒಂದು ಕಳಂಕ. ಈ ಕಳಂಕವನ್ನು ಪುರುಷರು ಮತ್ತು ಮಹಿಳೆಯರು ಜೊತೆಗೂಡಿ ಅಳಿಸಿ ಹಾಕಲು ಪ್ರಯತ್ನಿಸಬೇಕಾಗಿದೆ. ಮಹಿಳೆಯರಿಗೆ ಅಪಾರವಾಗಿ ಗೌರವ ನೀಡುತ್ತಿದ್ದ, ಕೃಷಿ ಸಂಸ್ಕೃತಿಯ ಮೇಲೆ ನಂಬಿಕೆಯನ್ನು ಹೊಂದಿದ್ದ ಮಹಿಷನ ನಾಡಿನಲ್ಲಿ ಇಂತಹ ಘಟನೆ ಪುನರಾವರ್ತಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News