ಕೊರೋನಣ್ಣನ ಕೆಲವು ಗಮನಾರ್ಹ ಸ್ವಭಾವಗಳು

Update: 2021-08-29 05:12 GMT

ಅಣಕ

ಬಲಪಂಥೀಯ ತೀವ್ರವಾದಿಗಳು ಹಬ್ಬುತ್ತಿರುವ ಜನಾಂಗವಾದವೆಂಬ ಮಹಾಮಾರಿಗೆ ಹೋಲಿಸಿದರೆ ಕಡಿಮೆ ಅಪಾಯಕಾರಿಯಾಗಿದ್ದರೂ, ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಂಡಿರುವ ಕೊರೋನ ರೋಗಾಣುವನ್ನು ನಿಯಂತ್ರಣದಲ್ಲಿಡಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಸದ್ಯ ನಮ್ಮ ಎಲ್ಲ ಸಮಸ್ಯೆಗಳ ಬಗ್ಗೆ ಸದಾ ಗಾಢವಾಗಿ ಚಿಂತಿಸುತ್ತಿರುವ ಮತ್ತು ನಮ್ಮ ಒಂದೊಂದೇ ಸಮಸ್ಯೆಯನ್ನು ಗುರುತಿಸಿ ಅದರ ಪರಿಹಾರಕ್ಕೆ ಸರ್ವ ಶ್ರಮ ನಡೆಸುವ ಸರಕಾರಗಳು ನಮ್ಮ ಬಳಿ ಇರುವುದರಿಂದ ನಾವು ಹೆಚ್ಚು ಟೆನ್ಶನ್ ತೆಗೆದುಕೊಳ್ಳಬೇಕಾಗಿಲ್ಲ. ನಮ್ಮೆಲ್ಲಾ ಟೆನ್ಯನ್‌ಗಳನ್ನೂ ತಾವೇ ತಮ್ಮ ಮೇಲೆ ಹೊತ್ತುಕೊಳ್ಳುವ ಸಂವೇದನಾಶೀಲ ಸರಕಾರಗಳು ನಮ್ಮ ಬಳಿ ಇರುವುದು ನಮ್ಮ ಪರಮ ಸೌಭಾಗ್ಯ. ಕೇಂದ್ರ ಹಾಗೂ ರಾಜ್ಯಗಳಲ್ಲಿರುವ ಈ ನಮ್ಮ ಜನಪರ ಸರಕಾರಗಳು ಬೆಲೆ ಏರಿಕೆ, ಜಾತಿ ವೈಷಮ್ಯ, ಕೋಮು ವಿದ್ವೇಷ ಮತ್ತು ಭ್ರಷ್ಟಾಚಾರಗಳನ್ನು ಸಂಪೂರ್ಣ ಹದ್ದುಬಸ್ತಿನಲ್ಲಿಟ್ಟಂತೆ, ಕೊರೋನ ನಿಯಂತ್ರಣಕ್ಕೂ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆ.

ನಮ್ಮ ಅನೇಕ ವೈದ್ಯರು, ಔಷಧ ಉತ್ಪಾದಕರು ಮತ್ತು ವೈದ್ಯಕೀಯ ಕೇಂದ್ರಗಳೆಲ್ಲ ಕೊರೋನ ಪೀಡಿತರು ಮತ್ತವರ ಕುಟುಂಬಗಳ ಕಿಸೆ ಬೋಳಿಸುವ ಕಾರ್ಯಾಚರಣೆಯಲ್ಲಿ ತಲ್ಲೀನರಾಗಿರುವುದರಿಂದ ನಮ್ಮ ಸಮಾಜವು ಕೊರೋನ ಕುರಿತು ಅಧಿಕೃತ ಮಾಹಿತಿಗಾಗಿ ಅವರನ್ನು ನಂಬಿ ಕೂರುವ ಹಾಗಿಲ್ಲ. ಈ ವಿಷಯದಲ್ಲೂ ನಾವು ನಮ್ಮ ಹಿತೈಷಿ ಸರಕಾರಗಳನ್ನೇ ಅವಲಂಬಿಸಬೇಕಾದುದು ಅನಿವಾರ್ಯವಾಗಿದೆ. ಬಹುಕಾಲದಿಂದ ಕೊರೋನ ಜೊತೆ ನಿತ್ಯ ವ್ಯವಹರಿಸುತ್ತಿರುವ ನಮ್ಮ ಗೌರವಾನ್ವಿತ ಸರಕಾರಗಳು, ಆ ಕುರಿತು ಭಾರೀ ವೈಜ್ಞಾನಿಕ ಹಾಗೂ ವೃತ್ತಿಪರ ಅಧ್ಯಯನ, ಸಂಶೋಧನೆ ಇತ್ಯಾದಿಗಳನ್ನೆಲ್ಲ ನಡೆಸಿವೆ. ಈ ಗಹನಾಧ್ಯಯನಗಳ ಸರಮಾಲೆಯಿಂದಾಗಿ ಇದೀಗ ಕೊರೋನದ ವಂಶಮೂಲ, ಜನ್ಮ ಮೂಲ, ಜಾತಕ, ವ್ಯಕ್ತಿತ್ವ, ಸ್ವಭಾವ, ಅಭಿರುಚಿ, ದೌರ್ಬಲ್ಯಗಳು, ಇತಿಮಿತಿಗಳು ಇತ್ಯಾದಿಗಳ ಕುರಿತು ಸಾಕಷ್ಟು ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಉದಾ:

ಕೊರೋನ ಎಂಬುದು ಸರಕಾರಿ ನಿಯಮಗಳನ್ನು ಸಕಾಲದಲ್ಲಿ ಅರಿತುಕೊಂಡು ಕಟ್ಟುನಿಟ್ಟಾಗಿ ಪಾಲಿಸುವ ವಿಧೇಯ ಪ್ರಜೆ. ಸಮಯ ಪಾಲನೆಯ ವಿಷಯದಲ್ಲೂ ಕೊರೋನ ವೈರಸ್ಸು ತುಂಬಾ ಶಿಸ್ತು ಬದ್ಧ. ಅದರ ಈ ಎಲ್ಲ ಸ್ವಭಾವಗಳನ್ನು ಗಣನೆಗೆ ತೆಗೆದುಕೊಂಡೇ ಸರಕಾರವು ಅದನ್ನು ನಿಯಂತ್ರಿಸುವುದಕ್ಕೆ ಕ್ರಮಗಳನ್ನು ಕೈಗೊಂಡಿರುವುದರಿಂದ ಆ ಕ್ರಮಗಳು ಕೊರೋನವನ್ನು ನಿಯಂತ್ರಿಸುವಲ್ಲಿ ಅಷ್ಟೊಂದು ಕ್ಷಿಪ್ರವಾಗಿ ಯಶಸ್ವಿಯಾಗುತ್ತಿವೆ. ಕೊರೋನ ವೈರಸ್ಸು ಬೆಳಗ್ಗೆ ತನ್ನ ಮನೆಯಿಂದ (ಅಥವಾ ಯಾರದಾದರೂ ಮೂಗು, ಬಾಯಿ ಇತ್ಯಾದಿಗಳಿಂದ) ಹೊರ ಬರುವ ಮುನ್ನ, ಭಟ್ರು ಪಂಚಾಂಗ ನೋಡಿದಂತೆ, ಇವತ್ತು ತಾರೀಕು ಎಷ್ಟು, ಇವತ್ತು ದಿನ ಯಾವುದು, ಈಗ ಸಮಯ ಎಷ್ಟು ಇತ್ಯಾದಿ ಎಲ್ಲ ವಿವರಗಳನ್ನು ಸಂಗ್ರಹಿಸುತ್ತದೆ. ಸಂಪಾದಕೀಯ ಇರುವ ಪತ್ರಿಕೆಗಳನ್ನು ಓದುತ್ತದೆ. ಗಟ್ಟಿಯಾಗಿ ಕಿವಿಮುಚ್ಚಿಕೊಂಡು, ಟಿವಿ ಸುದ್ದಿ ಚಾನೆಲ್‌ಗಳನ್ನೂ ವೀಕ್ಷಿಸುತ್ತದೆ. ಸರಕಾರ ಇಂದು ‘ಕೋವಿಡ್ ಕರ್ಫ್ಯೂ’ ಘೋಷಿಸಿದೆ ಎಂದು ಗೊತ್ತಾದರೆ ಸಾಕು. ಅದು ಹೊರ ಬರುವುದೇ ಇಲ್ಲ. ಊರಲ್ಲಿ ಗಿರಾಕಿಗಳಿಲ್ಲದಿರುವಾಗ ತಾನು ಹೊರಹೋಗಿ ಏನಾಗಬೇಕಾಗಿದೆ? ಎಂಬುದು ಅದರ ಜಾಣ ತರ್ಕವಾಗಿರುತ್ತದೆ. ‘ಲಾಕ್‌ಡೌನ್’ ಇದ್ದರೂ ಅಷ್ಟೇ. ಅದು ಲಾಕ್‌ಡೌನ್‌ನ ವೇಳಾಪಟ್ಟಿಯನ್ನು ನೋಡುತ್ತದೆ. ಲಾಕ್‌ಡೌನ್ ಸಮಯ ಆರಂಭವಾಯಿತು ಎಂದೊಡನೆ ಅದು ಹಾದಿ ಬೀದಿಗಳನ್ನು ಬಿಟ್ಟು ತರಾತುರಿಯಿಂದ ಓಡಿ ತನ್ನ ಗೂಡೊಳಗೆ ಸೇರಿ ಬಿಡುತ್ತದೆ. ಮತ್ತೆ ಅದು ಮರಳಿ ಬರುವುದು ಲಾಕ್‌ಡೌನ್ ಅವಧಿ ಮುಗಿದ ಬಳಿಕ ಮಾತ್ರ. ಈ ಮಧ್ಯೆ ಎಲ್ಲಿ ಎಷ್ಟು ಮೂಗು, ಬಾಯಿಗಳು ಕಾಣಸಿಕ್ಕರೂ ಅದು ಅವುಗಳೊಳಗೆ ಪ್ರವೇಶಿಸುವುದು ಬಿಡಿ, ಆ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ.

ಕೊರೋನ ವೈರಸ್ಸಿಗೆ ಮಾಸ್ಕ್ ಅಂದರೆ ತುಂಬಾ ಭಯ. ಯಾರಾದರೂ ಮಾಸ್ಕ್ ಧರಿಸಿರುವುದು ದೂರದಿಂದ ಕಾಣಿಸಿದರೆ ಮುಗಿಯಿತು. ಅದು ತಕ್ಷಣ ತನ್ನ ಕಾಲಿಗೆ ಬುದ್ಧಿ ಹೇಳುತ್ತದೆ. ಮಾಸ್ಕ್ ಇದ್ದರಷ್ಟೇ ಸಾಕು. ಅದು ಬಾಯಿ, ಮೂಗುಗಳನ್ನು ಮುಚ್ಚಿಕೊಂಡಿರಬೇಕೆಂಬ ನಿರ್ಬಂಧವೇನೂ ಇಲ್ಲ. ಗಲ್ಲದ ಅಥವಾ ಕೊರಳಿನ ಸುತ್ತ ಇದ್ದರೂ ಸಾಕು, ಒಂದೇ ಕಿವಿಯಲ್ಲಿ ನೇತಾಡುತ್ತಾ ಹಾರಾಡುತ್ತಿದ್ದರೂ ಸಾಕು. ಬೇಡಪ್ಪಾನಿನ್ನ ಸಹವಾಸ ಎನ್ನುತ್ತಾ ಕೊರೋನ, ಅಲ್ಲಿಂದ ಪಲಾಯನ ಮಾಡಿ ಬಿಡುತ್ತದೆ.

ಅಲ್ಲಲ್ಲಿ ಮಾಸ್ಕ್ ಧರಿಸಿಲ್ಲದ ಬೈಕ್ ಸವಾರರನ್ನು ಹಿಡಿದು, ಸೆಟ್ಲ್‌ಮೆಂಟ್ ಆಗುವವರೆಗೂ ಅವರನ್ನು ಮುದ್ದಾಡುತ್ತ ಅವರ ಕಿವಿಯ ಹತ್ತಿರ ಏನೆಲ್ಲಾ ಉಸುರುವ ಪೊಲೀಸರು ಕೊರೋನಣ್ಣನಿಗೆ ಅಲ್ಲಲ್ಲಿ ಕಾಣ ಸಿಗುತ್ತಾರೆ. ಆದರೆ ಅದಕ್ಕೆ ಆರಕ್ಷಕ ಪಡೆಗಳೆಂದರೆ ಅಪಾರ ಗೌರವ. ಎಷ್ಟಾದರೂ ಅದು ಕಾನೂನು ಪಾಲಕ ನಾಗರಿಕನಲ್ಲವೇ? ಪೊಲೀಸರು ಕೊರೋನ ಬಾಧಿತರಾಗಿರಲಿ ಅಥವಾ ಬೈಕ್ ಸವಾರರು ಸೋಂಕಿತರಾಗಿರಲಿ, ಅವರಿಬ್ಬರೂ ಪರಸ್ಪರ ಹತ್ತಿರ ಬಂದಷ್ಟು ಕೊರೋನ ದೂರ ಓಡುತ್ತಿರುತ್ತದೆ. ಪೊಲೀಸರ ಸೋಂಕು ಬೈಕ್ ಸವಾರರಿಗಾಗಲಿ, ಬೈಕ್ ಸವಾರರ ಸೋಂಕು ಪೊಲೀಸರಿಗಾಗಲಿ ತಗಲದಂತೆ ಕೊರೋನ ಗರಿಷ್ಠ ಎಚ್ಚರಿಕೆ ವಹಿಸುತ್ತದೆ.

ಕೊರೋನ ಕೈಯಲ್ಲಿ ಸದಾ ಒಂದು ಅಡಿಕೋಲು ಇದ್ದೇ ಇರುತ್ತದೆ. ಅದು ಪಕ್ಕಾ ಜಾತಿವಾದಿ ಮಡಿವಂತರಂತೆ ತನ್ನ ಹಾಗೂ ಅಕ್ಕಪಕ್ಕದವರ ಮಧ್ಯೆ ಅಂತರ ಎಷ್ಟಿದೆ ಎಂದು ಅಳೆಯುತ್ತಲೇ ಇರುತ್ತದೆ. ಎರಡು ಅಡಿಗಿಂತ ಹೆಚ್ಚು ದೂರದಲ್ಲಿರುವವರ ಕುರಿತು, ‘ಇವನಾರವ, ಇವನಾರವ’ ಎಂದೆನ್ನುತ್ತಾ ಅವರನ್ನು ಕಡೆಗಣಿಸಿ ಬಿಡುತ್ತದೆ. ಎರಡು ಅಡಿಗಿಂತ ಹತ್ತಿರ ಇರುವವರನ್ನು, ‘ಇವ ನನ್ನವ, ಇವ ನನ್ನವ’ ಎನ್ನುತ್ತಾ ಹಾರಿಹೋಗಿ ಬಿಗಿದಪ್ಪಿಕೊಳ್ಳುತ್ತದೆ. ಲಾಕ್‌ಡೌನ್ ಇಲ್ಲದ ಸಮಯದಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಒಂದೆಡೆ ಸೇರಿ ಪರಸ್ಪರರ ಮೇಲೆ ಉರುಳು ಸೇವೆ ನಡೆಸುತ್ತಿದ್ದರೂ ಕೊರೋನ, ಅವರ ಈ ಐಕ್ಯ ಪ್ರದರ್ಶನಕ್ಕೆ ಅಂಜಿ ದೂರ ಉಳಿಯುತ್ತದೆ. ಲಾಕ್‌ಡೌನ್ ಇಲ್ಲದಾಗ ಮಾತ್ರ ಎಲ್ಲಾದರೂ ಒಬ್ಬಿಬ್ಬರು ಸಿಕ್ಕಾಗ ಅವರೊಳಗೆ ಪ್ರವೇಶಿಸಿ ಬಿಡುತ್ತದೆ. ಸರಕಾರದ ಅನುಮತಿಯೊಂದಿಗೆ ನಡೆಯುವ ಸಭೆಗಳಲ್ಲಂತೂ ಕೊರೋನ ತುಂಬಾ ಸಹಿಷ್ಣುವಾಗಿರುತ್ತದೆ.

ಅದು ಜನರ ನಡುವಣ ಅಂತರವನ್ನು ಅಡಿಗಳ ಬದಲು ಮಿಲಿಮೀಟರ್‌ಗಳಲ್ಲಿ ಅಳೆದು ಒಂದು ಎಮ್‌ಎಮ್ ಅಥವಾ ಎರಡು ಎಮ್‌ಎಮ್ ಅಂತರದಲ್ಲಿರುವವರನ್ನೂ ಬಿಟ್ಟು ಬಿಡುತ್ತದೆ. ಬಸ್ಸು, ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಕೊರೋನದ ನಡವಳಿಕೆ ತುಂಬಾ ವಿಚಿತ್ರವಾಗಿರುತ್ತದೆ. ಅದು ಟಿಕೆಟ್ ಕೌಂಟರ್‌ಗಳ ಬಳಿಮಾತ್ರ ಭಾರೀ ಸಕ್ರಿಯವಾಗಿ ಠಳಾಯಿಸುತ್ತಿರುತ್ತದೆ. ವಾಹನಗಳ ಒಳಗೆ ಅದು ಪ್ರವೇಶಿಸುವುದೇ ಇಲ್ಲ. ಆದ್ದರಿಂದಲೇ ಅಲ್ಲವೇ, ಟಿಕೆಟ್ ಕೌಂಟರ್‌ಗಳಲ್ಲಿ ಕಟ್ಟು ನಿಟ್ಟಾಗಿ ಸಾಮಾಜಿಕ, ಆಧ್ಯಾತ್ಮಿಕ ಇತ್ಯಾದಿ ಅಂತರಗಳನ್ನು ಪಾಲಿಸಬೇಕೆಂದು ಸರಕಾರ ಅಷ್ಟೊಂದು ಕಟುವಾಗಿ ಆದೇಶಿಸಿರುವುದು ಮತ್ತು ದೊಣ್ಣೆಧಾರಿ ಪೊಲೀಸರು ಅಷ್ಟು ಕಟ್ಟುನಿಟ್ಟಾಗಿ ಅಲ್ಲಿ ಅಂತರ ನಿಯಮವನ್ನು ಅನುಷ್ಠಾನಿಸುವುದು? ವಾಹನದೊಳಗೆ ಸ್ಥಳವಿಲ್ಲದೆ, ಜನರೆಲ್ಲ ಒಬ್ಬರ ಮಡಿಲಲ್ಲಿ ಇನ್ನೊಬ್ಬರೆಂಬಂತೆ ಕೂತರೂ ಅದಕ್ಕೆ ನಿರ್ಬಂಧವಿಲ್ಲ. ಏಕೆಂದರೆ ಅದು ಕೊರೋನ ಮುಕ್ತ ಪ್ರದೇಶ. ಭಾರತದ ಆಧ್ಯಾತ್ಮಿಕ ಪರಿಸರದಲ್ಲಿ ಬಹುಕಾಲ ಓಡಾಡಿರುವ ಕೊರೋನ ಒಂದಷ್ಟು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಒಲವುಗಳನ್ನೂ ಬೆಳೆಸಿಕೊಂಡಿದೆ. ಶಾಲೆ, ಕಾಲೇಜುಗಳಲ್ಲಿ ನಾಲ್ಕು ಮಂದಿ ಕಂಡರೂ ದಾಳಿ ಮಾಡಿ ಬಿಡುವ ಕೊರೋನ ಧಾರ್ಮಿಕ ಪ್ರದೇಶಗಳಲ್ಲಿ ತೀರಾ ನಿಷ್ಕ್ರಿಯವಾಗಿ ಬಿಡುತ್ತದೆ. ಅದಕ್ಕೆ ಆರಾಧನಾಲಯಗಳೆಂದರೆ, ಹಾಗೆಯೇ ಧಾರ್ಮಿಕ ಉತ್ಸವ, ಮೇಳ ಇತ್ಯಾದಿಗಳೆಂದರೆ ಭಾರೀ ಗೌರವಾದರ ಭಾವ. ಪೂಜಾಲಯಗಳಲ್ಲಿ, ಉತ್ಸವಗಳಲ್ಲಿ ಲಕ್ಷಾಂತರ ಜನ ಸೇರಿದರೂ, ನೂಕುನುಗ್ಗಲು ನಡೆಸಿದರೂ ಕೊರೋನ ಮಾತ್ರ ಅಲ್ಲಿ ಭಕ್ತಿಪರವಶನಾಗಿ ಧ್ಯಾನಮಗ್ನವಾಗಿರುತ್ತದೆ. ಭಕ್ತ ಸಮೂಹವನ್ನು ತಾನು ಬಾಧಿಸುವುದಿಲ್ಲ ಎಂದು ಕೊರೋನ ಎಲ್ಲ ದೇವರುಗಳ ಮುಂದೆ ಶಪಥ ಮಾಡಿದೆ ಮತ್ತು ಈ ತನ್ನ ಗುಟ್ಟನ್ನು ಸರಕಾರಗಳಿಗೆ ತಿಳಿಸಿಯೂ ಬಿಟ್ಟಿದೆ. ಇತರೆಡೆ ಕೊರೋನ ಕರ್ಫ್ಯೂ ಜಾರಿಗೊಳಿಸುವ ಸರಕಾರಗಳು ಧಾರ್ಮಿಕ ಜನಜಂಗುಳಿಯ ಬಗ್ಗೆ ಯಾಕಿಷ್ಟು ಉದಾರ ನೀತಿ ಅನುಸರಿಸುತ್ತಿವೆ ಎಂದು ಪ್ರಶ್ನಿಸುವವರು ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು.

ಕೊರೋನದ ಕೃಪಾಕಟಾಕ್ಷಕ್ಕೆ ಪಾತ್ರರಾದವರಲ್ಲಿ ಪುಢಾರಿ ಎಂಬೊಂದು ವರ್ಗವೂ ಇದೆ. ಪುಢಾರಿಗಳು ತನಗಿಂತ ಅಪಾಯಕಾರಿಗಳೆಂದು ಕೊರೋನ ನಂಬಿರಬೇಕು. ಆದ್ದರಿಂದಲೇ ಅವರು ಎಷ್ಟು ದೊಡ್ಡ ಸಂಖ್ಯೆಯಲ್ಲಿ ತಮ್ಮ ಸಭೆ ಸಮಾರಂಭಗಳನ್ನು ನಡೆಸಿದರೂ, ಕರ್ಫ್ಯೂ, ಲಾಕ್‌ಡೌನ್ ಇತ್ಯಾದಿ ನಿಯಮಗಳನ್ನು ಎಷ್ಟು ಉಲ್ಲಂಘಿಸಿದರೂ ಕೊರೋನ ಅವರ ಬಳಿಗೆ ಹೋಗುವುದಿಲ್ಲ. ಪುಢಾರಿಗಳ ವ್ಯಾಧಿನಿರೋಧಕ ಶಕ್ತಿ ಅಷ್ಟು ಬಲಿಷ್ಠವಾಗಿದೆ ಮತ್ತು ಅವರು ಸ್ವತಃ ಮಹಾ ವ್ಯಾಧಿಗಳಾದ್ದರಿಂದ ಸಣ್ಣಪುಟ್ಟ ವ್ಯಾಧಿಗಳಿಗೆ ತಮ್ಮಾಳಗೆ ಪ್ರವೇಶಿಸುವ ಧೈರ್ಯವಿಲ್ಲ ಎಂಬ ಆತ್ಮವಿಶ್ವಾಸ ಅವರಿಗಿದೆ.

Writer - ಯೂಸುಫ್, ಪುತ್ತಿಗೆ

contributor

Editor - ಯೂಸುಫ್, ಪುತ್ತಿಗೆ

contributor

Similar News