ಮಧ್ಯಪ್ರದೇಶ: ಎರಡು ವರ್ಷಗಳಲ್ಲಿ ಆರನೇ ಬಾರಿ ರೈತ ಪ್ರಕಾಶ್ ಗೆ ಜಾಕ್ ಪಾಟ್
ಪನ್ನಾ,( ಮಧ್ಯಪ್ರದೇಶ): ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ರೈತರೊಬ್ಬರಿಗೆ ಎರಡು ವರ್ಷಗಳಲ್ಲಿ ಆರನೇ ಬಾರಿ ಜಾಕ್ ಪಾಟ್ ಹೊಡೆದಿದೆ. ಸರಕಾರದಿಂದ ಗುತ್ತಿಗೆಗೆ ಪಡೆದ ಗಣಿಗಾರಿಕೆಯ ಭೂಮಿಯಲ್ಲಿ ಈ ಬಾರಿ ರೈತನಿಗೆ 6.47 ಕ್ಯಾರೆಟ್ ತೂಕದ ಉತ್ತಮ ಗುಣಮಟ್ಟದ ವಜ್ರ ಲಭಿಸಿದೆ.
ರೈತ ಪ್ರಕಾಶ್ ಮಜುಂದಾರ್ ಅವರು ಶುಕ್ರವಾರ ಜಿಲ್ಲೆಯ ಜರುವಾಪುರ ಗ್ರಾಮದ ಗಣಿಯಿಂದ ಈ ವಜ್ರವನ್ನು ಪತ್ತೆ ಹಚ್ಚಿದ್ದಾರೆ ಎಂದು ಉಸ್ತುವಾರಿ ವಜ್ರದ ಅಧಿಕಾರಿ ನೂತನ್ ಜೈನ್ ತಿಳಿಸಿದ್ದಾರೆ.
ಮುಂಬರುವ ಹರಾಜಿನಲ್ಲಿ 6.47 ಕ್ಯಾರೆಟ್ ವಜ್ರವನ್ನು ಮಾರಾಟಕ್ಕೆ ಇಡಲಾಗುವುದು ಹಾಗೂ ಸರಕಾರದ ಮಾರ್ಗಸೂಚಿಗಳ ಪ್ರಕಾರ ಬೆಲೆ ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.
ಹರಾಜಿನಿಂದ ಪಡೆದ ಮೊತ್ತವನ್ನು ಗಣಿಗಾರಿಕೆಯಲ್ಲಿ ತೊಡಗಿರುವ ತನ್ನ ನಾಲ್ವರು ಪಾಲುದಾರರೊಂದಿಗೆ ಹಂಚಿಕೊಳ್ಳುವುದಾಗಿ ಮಜುಂದಾರ್ ಅವರು ಹೇಳಿದರು.
"ನಾವು ಐವರು ಪಾಲುದಾರರು. ನಾವು 6.47 ಕ್ಯಾರೆಟ್ ತೂಕದ ವಜ್ರವನ್ನು ಪಡೆದುಕೊಂಡಿದ್ದೇವೆ. ಅದನ್ನು ನಾವು ಸರಕಾರಿ ವಜ್ರದ ಕಚೇರಿಯಲ್ಲಿ ಠೇವಣಿ ಇರಿಸಿದ್ದೇವೆ" ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ನಾನು ಕಳೆದ ವರ್ಷ 7.44 ಕ್ಯಾರೆಟ್ ವಜ್ರವನ್ನು ಪತ್ತೆ ಹಚ್ಚಿದ್ದೆ ಎಂದು ಮಜುಂದಾರ್ ಹೇಳಿದರು. ಅದಲ್ಲದೆ, ಅವರು ಕಳೆದ ಎರಡು ವರ್ಷಗಳಲ್ಲಿ 2 ರಿಂದ 2.5 ಕ್ಯಾರೆಟ್ ತೂಕದ ಇತರ ನಾಲ್ಕು ಅಮೂಲ್ಯ ಸ್ಟೋನ್ ಗಳನ್ನು ಗಣಿಯಲ್ಲಿ ಪಡೆದಿದ್ದೇನೆ ಎಂದರು.
ಖಾಸಗಿ ಅಂದಾಜಿನ ಪ್ರಕಾರ 6.47 ಕ್ಯಾರೆಟ್ ವಜ್ರವು ಹರಾಜಿನಲ್ಲಿ ಸುಮಾರು ರೂ. 30 ಲಕ್ಷ ಪಡೆಯುವ ಸಾಧ್ಯತೆಯಿದೆ.