ಅವಿಶ್ವಾಸ ನಿರ್ಣಯ ಮಂಡನೆ ಎಚ್ಚರಿಕೆ ಅವಾಸ್ತವಿಕ: ಲಿಬ್ಯಾದ ಹಂಗಾಮಿ ಪ್ರಧಾನಿ ಪ್ರತಿಕ್ರಿಯೆ

Update: 2021-08-29 17:24 GMT

ಟ್ರಿಪೋಲಿ, ಆ.29: ಬಜೆಟ್ ಗೆ ಅನುಮೋದನೆ ನೀಡಲು ವಿಫಲವಾಗಿರುವ ಸಂಸತ್ತಿನ ಉಪಕ್ರಮವು ಸರಕಾರದ ಆಡಳಿತಾತ್ಮಕ ಕಾರ್ಯವನ್ನು ವಿಳಂಬಿಸಲಿದೆ ಎಂದು ಲಿಬ್ಯಾದ ಹಂಗಾಮಿ ಪ್ರಧಾನಿ ಅಬ್ದುಲ್ ಹಾಮಿದ್ ಡಿಬಿಹಾ ಹೇಳಿದ್ದಾರೆ. ಸರಕಾರ ಮಂಡಿಸಿದ್ದ ಬಜೆಟ್ಗೆ ಸಂಸತ್ನಲ್ಲಿ ಅನುಮೋದನೆ ಪಡೆದುಕೊಳ್ಳಲು ಪ್ರಧಾನಿ ವಿಫಲವಾದ ಬಳಿಕ ಲಿಬ್ಯಾದ ಆಡಳಿತಾರೂಡ ಮೈತ್ರಿ ಸರಕಾರದ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ಮುನ್ನೆಲೆಗೆ ಬಂದಿದ್ದು ವಿಶ್ವಸಂಸ್ಥೆ ಬೆಂಬಲಿತ ಶಾಂತಿ ಮಾತುಕತೆಗೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಸಂಸತ್ತಿನ ಚೇಂಬರ್ನಲ್ಲಿ ಹಾಜರಾಗಿ, ತನ್ನ ಸರಕಾರದ ಸಾಧನೆಯ ಕುರಿತ ಪ್ರಶ್ನೆಗೆ ಉತ್ತರಿಸಬೇಕು ಅಥವಾ ಅವಿಶ್ವಾಸ ನಿರ್ಣಯ ಎದುರಿಸಬೇಕು ಎಂದು ಸಂಸತ್ತಿನ ಸ್ಪೀಕರ್ ಆಗ್ವಿಲಾ ಸಾಲೇಹ್ ಕಳೆದ ವಾರ ಪ್ರಧಾನಿ ಅಬ್ದುಲ್ ಹಾಮಿದ್ ಗೆ ಸೂಚಿಸಿದ್ದರು. ತಮ್ಮ ನೇತೃತ್ವದ ಮೈತ್ರಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಂಸತ್ತಿನ ಬೆದರಿಕೆ ಅವಾಸ್ತವಿಕ ಮತ್ತು ಹುರುಳಿಲ್ಲದ ಪ್ರಸ್ತಾವನೆಯಾಗಿದ್ದು , ಈ ವರ್ಷದ ಡಿಸೆಂಬರ್ನಲ್ಲಿ ನಡೆಸಲು ಉದ್ದೇಶಿಸಿರುವ ಚುನಾವಣೆಯನ್ನು ಭಂಗಗೊಳಿಸುವ ಉದ್ದೇಶದ್ದಾಗಿದೆ ಎಂದು ಅಬ್ದುಲ್ ಹಾಮಿದ್ ಹೇಳಿದ್ದಾರೆ. 

ಲಿಬ್ಯಾದಲ್ಲಿ ಸುದೀರ್ಘಾವಧಿಯಿಂದ ಅಧಿಕಾರದಲ್ಲಿದ್ದ ಮಮ್ಮರ್ ಗಡಾಫಿ 2011ರಲ್ಲಿ ನೇಟೊ ನೇತೃತ್ವದ ಪಡೆಗಳಿಂದ ಹತರಾದ ಬಳಿಕ ಆ ದೇಶದಲ್ಲಿ ರಾಜಕೀಯ ಅಸ್ಥಿರತೆ ನೆಲೆಸಿದೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವಸಂಸ್ಥೆ ಮಾನ್ಯತೆ ನೀಡಿರುವ ಸರಕಾರ ಮತ್ತು ಪೂರ್ವಪ್ರಾಂತ್ಯದ ಸಂಸದರನ್ನೊಳಗೊಂಡ ರಾಜಕೀಯ ಸಂಘಟನೆಯ ಮಧ್ಯೆ ಭಿನ್ನಾಭಿಪ್ರಾಯ ತೀವ್ರಗೊಂಡ ಹಿನ್ನೆಲೆಯಲ್ಲಿ, ಈ ವರ್ಷದ ಡಿಸೆಂಬರ್ನಲ್ಲಿ ಚುನಾವಣೆ ನಡೆಸುವ ಷರತ್ತಿನೊಂದಿಗೆ ಅಬ್ದುಲ್ ಹಾಮಿದ್ ನೇತೃತ್ವದ ಹಂಗಾಮಿ ಸರಕಾರವನ್ನು ಸ್ಥಾಪಿಸಲಾಗಿದೆ. 

ಇದೀಗ, ಪೂರ್ವಪ್ರಾಂತ್ಯದ ಸಂಸದರು ಸರಕಾರ ಮಂಡಿಸಿರುವ ಬಜೆಟ್ ಗೆ ಅಪಸ್ವರ ಎತ್ತಿರುವುದರಿಂದ, ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿ ಸಾಗಲು ಸಮಸ್ಯೆಯಾಗಬಹುದು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News