ಗಾಝಾದಲ್ಲಿ ಇಸ್ರೇಲ್ ಬಾಂಬ್ ದಾಳಿ

Update: 2021-08-29 17:32 GMT

ಜೆರುಸಲೇಂ, ಆ.29: ಗಾಝಾ ಪಟ್ಟಿಯಲ್ಲಿ ಹಮಾಸ್ ನಿಯಂತ್ರಣದ ಪ್ರದೇಶದಿಂದ ಇಸ್ರೇಲ್ ಸೇನೆಯತ್ತ ಸ್ಪೋಟಕ ತುಂಬಿದ್ದ ಬಲೂನುಗಳನ್ನು ಹಾರಿಬಿಟ್ಟಿರುವುದಕ್ಕೆ ಉತ್ತರವಾಗಿ ಹಮಾಸ್ ನೆಲೆಯ ಮೇಲೆ ರವಿವಾರ ಬಾಂಬ್ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ‌

ಶನಿವಾರ ರಾತ್ರಿ ಗಾಝಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಪ್ರದೇಶಗಳನ್ನು ಪ್ರತ್ಯೇಕಿಸುವ ಗಡಿಭಾಗದಲ್ಲಿ ಜಮಾಯಿಸಿದ ನೂರಾರು ಪೆಲೆಸ್ತೀನ್ ಪ್ರತಿಭಟನಾಕಾರರು ಸ್ಪೋಟಕ ತುಂಬಿದ್ದ ಬಲೂನುಗಳು ಹಾಗೂ ಬೆಂಕಿ ಹಚ್ಚಿದ್ದ ಟಯರ್ಗಳನ್ನು ಎಸೆದರು. ಗಲಭೆಯನ್ನು ನಿಯಂತ್ರಿಸಲು ಇಸ್ರೇಲ್ ಸೇನೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಇಸ್ರೇಲ್ ಹೇಳಿದೆ. ಗಾಝಾದಲ್ಲಿ ನಮ್ಮ ಹಿತಾಸಕ್ತಿಗೆ ಅನುಗುಣವಾಗಿ ನಾವು ಕಾರ್ಯಾಚರಿಸಲಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಹೇಳಿದ್ದಾರೆ. 

ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ವಿಧಿಸಿರುವ ಕಠಿಣ ನಿರ್ಬಂಧಗಳನ್ನು ಸಡಿಲಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪೆಲೆಸ್ತೀನ್ನ ಸಂಘಟನೆಗಳು ಶನಿವಾರ ಘೋಷಿಸಿವೆ. ಶನಿವಾರ ಪ್ರತಿಭಟನಾಕಾರರು ಟಯರ್ಗಳಿಗೆ ಬೆಂಕಿಹಚ್ಚಿ ಘೋಷಣೆ ಕೂಗುತ್ತಿದ್ದಾಗ ಅವರನ್ನು ಚದುರಿಸಲು ಇಸ್ರೇಲ್ ಸೇನೆ ಅಶ್ರುವಾಯು, ಸ್ಟನ್ ಗ್ರೆನೇಡ್ (ಜನರನ್ನು ಹೆದರಿಸಲು ಬಳಸುವ ಭಾರೀ ಸದ್ದು ಹಾಗೂ ಬೆಳಕಿನೊಂದಿಗೆ ಸಿಡಿಯುವ ಗ್ರೆನೇಡ್) ಹಾಗೂ ಗೋಲೀಬಾರ್ ನಡೆಸಿತ್ತು. ಇದರಲ್ಲಿ 11 ಪೆಲೆಸ್ತೀನೀಯರು ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. 

ಪೆಲೆಸ್ತೀನ್ನಲ್ಲಿ 2007ರಲ್ಲಿ ನಡೆದ ಚುನಾವಣೆಯಲ್ಲಿ ಗಾಝಾ ಪಟ್ಟಿಯಲ್ಲಿ ಗೆಲುವು ಸಾಧಿಸಿದ ಹಮಾಸ್ ಸಂಘಟನೆ ಇಲ್ಲಿ ಅಧಿಕಾರದಲ್ಲಿದೆ. ಅಂದಿನಿಂದ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಮತ್ತು ಈಜಿಪ್ಟ್ ನಿಬರ್ಂಧ ಜಾರಿಗೊಳಿಸಿವೆ. ಈ ಕಾರಣದಿಂದ ಇಲ್ಲಿ ನಿರಂತರವಾಗಿ ಸಂಘರ್ಷ, ಹಿಂಸಾಚಾರ ಮುಂದುವರಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News