×
Ad

ಹರ್ಯಾಣ: ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡ ರೈತ ಹೃದಯಾಘಾತದಿಂದ ಸಾವು

Update: 2021-08-29 23:50 IST

ಚಂಡಿಗಢ, ಅ. 29: ಕರ್ನಲ್ನಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡಿದ್ದ ರೈತ ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಕೆಯು ಹಿರಿಯ ನಾಯಕ ಗುರ್ನಾಮ್ ಸಿಂಗ್ ಚಾದುನಿ ಹೇಳಿದ್ದಾರೆ.

ಒಂದೂವರೆ ಎಕರೆ ಭೂಮಿ ಹೊಂದಿದ್ದ ರೈತ ಸುಶೀಲ್ ಕಾಜಲ್ ಕಳೆದ 9 ತಿಂಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ನಲ್ ಟೋಲ್ ಪ್ಲಾಝಾದಲ್ಲಿ ಶನಿವಾರ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರ ಲಾಠಿ ಪ್ರಹಾರದಿಂದ ಗಂಭೀರ ಗಾಯಗೊಂಡಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಅಂದೇ ರಾತ್ರಿ ಹೃದಯಾಘಾತದಿಂದ ಮೃತಪಟ್ಟರು. 

ರೈತ ಸಮುದಾಯ ಅವರ ಬಲಿದಾನವನ್ನು ಯಾವತ್ತೂ ನೆನಪಿಸಿಕೊಳ್ಳಲಿದೆ ಎಂದು ಚಾದುನಿ ಟ್ವೀಟ್ ಮಾಡಿದ್ದಾರೆ. ಮುಂಬರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಸಭೆಯ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಕರ್ನಲ್ನ ಹೆದ್ದಾರಿ ತಡೆದ ರೈತ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು ಹಾಗೂ ಹಲವರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News