ಅಫ್ಘಾನ್ ನ ಭವಿಷ್ಯ ರೂಪಿಸುವಲ್ಲಿ ಖತರ್ ನ ಪಾತ್ರ ನಿರ್ಣಾಯಕ: ಮಾಧ್ಯಮಗಳ ವರದಿ

Update: 2021-08-30 16:47 GMT
ಸಾಂದರ್ಭಿಕ ಚಿತ್ರ

 ದುಬೈ, ಆ.30: ಅಫ್ಗಾನ್ ನಿಂದ ಸಾವಿರಾರು ಮಂದಿಯನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ನೆರವಾಗಿದ್ದ ಖತರ್ , ಇದೀಗ ಅಫ್ಗಾನ್ ನ ಭವಿಷ್ಯವನ್ನು ರೂಪಿಸುವಲ್ಲಿಯೂ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  ಅಮೆರಿಕ ಮತ್ತು ತಾಲಿಬಾನ್ಗಳೆರಡಕ್ಕೂ ಅತ್ಯಂತ ನಿಕಟವಾಗಿರುವ ಖತರ್ ಮುಖಂಡರೊಂದಿಗೆ ಸೋಮವಾರ ವರ್ಚುವಲ್ ವೇದಿಕೆಯ ಮೂಲಕ ಸಭೆ ನಡೆಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್, ಅಫ್ಗಾನ್ನ ವಿಷಯದಲ್ಲಿ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಸಂಘಟಿತ ಉಪಕ್ರಮಗಳ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್, ಟರ್ಕಿ, ಯುರೋಪಿಯನ್ ಯೂನಿಯನ್ ದೇಶಗಳು ಹಾಗೂ ನೇಟೊ ದೇಶಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು.

ಈ ಮಧ್ಯೆ, ಅಫ್ಗಾನ್ಗೆ ನೆರವು ಒದಗಿಸುವ ಕಾರ್ಯದಲ್ಲಿ ಸಹಕರಿಸುವಂತೆ ಅಂತರಾಷ್ಟ್ರೀಯ ವಿಶ್ವಸಂಸ್ಥೆ ಏಜೆನ್ಸಿಗಳೂ ಖತರ್ಗೆ ಮನವಿ ಮಾಡಿದೆ. ಜೊತೆಗೆ, ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ವಿಷಯದಲ್ಲಿ ತಾಂತ್ರಿಕ ನೆರವು ಒದಗಿಸುವಂತೆ ತಾಲಿಬಾನ್ ಗಳೂ ಖತರ್ ಅನ್ನು ಕೋರಿದ್ದಾರೆ. ಅಫ್ಗಾನ್ನಿಂದ ಅಮೆರಿಕ ತೆರವುಗೊಳಿಸುವ ಜನರಿಗೆ ಕೆಲ ತಿಂಗಳವರೆಗೆ ಆಶ್ರಯ ಒದಗಿಸುವ ಜವಾಬ್ದಾರಿ ಹೊತ್ತಿದ್ದ ಖತರ್ ಈಗ ಅನಿರೀಕ್ಷಿತವಾಗಿ ಅಫ್ಗಾನ್ನಲ್ಲಿ ಪ್ರಮುಖ ಪಾತ್ರ ವಹಿಸುವ ಪರಿಸ್ಥಿತಿ ಬಂದಿದೆ. ಅಫ್ಗಾನ್ನಿಂದ ಅಮೆರಿಕ ತೆರವುಗೊಳಿಸಿದ ಜನರಲ್ಲಿ 40%ದಷ್ಟು ಜನ ಖತರ್ ಮೂಲಕ ಪ್ರಯಾಣಿಸಿದ್ದರೆ, ಅಂತರಾಷ್ಟ್ರೀಯ ಮಾಧ್ಯಮಗಳು ತಮ್ಮ ಸಿಬಂದಿಯನ್ನು ತೆರವುಗೊಳಿಸುವ ಕಾರ್ಯಕ್ಕೆ ಖತರ್ನ ನೆರವು ಯಾಚಿಸಿದ್ದರು.

ಮಧ್ಯಪ್ರಾಚ್ಯ ದೇಶಗಳಲ್ಲಿ ಅಮೆರಿಕದ ಬೃಹತ್ ಸೇನಾ ನೆಲೆಯನ್ನು ಹೊಂದಿರುವ ದೇಶವಾಗಿರುವ ಖತರ್, ದೇಶಭ್ರಷ್ಟ ತಾಲಿಬಾನ್ ಮುಖಂಡರಿಗೆ ಆಶ್ರಯದ ಜೊತೆಗೆ ಅಮೆರಿಕ-ತಾಲಿಬಾನ್ ಶಾಂತಿ ಮಾತುಕತೆಗೆ ಆತಿಥ್ಯ ಒದಗಿಸಿತ್ತು. ಆದರೆ ಖತರ್ ಅಫ್ಗಾನ್ನ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂಬ ವರದಿಯನ್ನು ಖತರ್ನ ಸಹಾಯಕ ವಿದೇಶಾಂಗ ಸಚಿವೆ ಲೊಲ್ವ ಅಲ್ ಖತೆರ್ ನಿರಾಕರಿಸಿದ್ದಾರೆ. 

ಸೀಮಿತ ಸೇನಾಪಡೆ ಮತ್ತು ತನ್ನ ಸೇನಾ ವಿಮಾನದಿಂದ ಖತರ್ ಅಫ್ಗಾನ್ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಹಲವರನ್ನು ಸ್ಥಳಾಂತರಿಸಿದೆ. ಬಾಲಕಿಯರ ಸನಿವಾಸ ಶಾಲೆ, ಬಾಲಕಿಯರೇ ಇದ್ದ ರೊಬೊಟ್ ತಂತ್ರಜ್ಞಾನ ಸ್ಪರ್ಧಾ ತಂಡ, ಅಂತರಾಷ್ಟ್ರೀಯ ಮಾಧ್ಯಮದವರ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ವಾಹನ ತಾಲಿಬಾನ್ಗಳ ಚೆಕ್ಪೋಸ್ಟ್ ದಾಟುವವರೆಗೆ ಖತರ್ನ ರಾಯಭಾರಿ ಜತೆಗಿದ್ದರು. ಅಮೆರಿಕ, ಬ್ರಿಟನ್, ನೇಟೊ ಪಡೆಗಳು, ಟರ್ಕಿ ಪಡೆಗಳ ಉಸ್ತುವಾರಿಯಲ್ಲಿದ್ದ ಚೆಕ್ಪೋಸ್ಟ್ ಮೂಲಕ ಸಾಗಬೇಕಿತ್ತು. ಖತರ್ ಸುಮಾರು 3,000 ಜನರನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಿದೆ ಹಾಗೂ ಸುಮಾರು 1,500 ಮಂದಿಯನ್ನು ಕಾಬೂಲ್ ನಿಂದ ಏರ್ಲಿಫ್ಟ್ ಮಾಡಿದೆ. ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿರುವುದರಿಂದ ಇದು ಸಾಧ್ಯವಾಗಿದೆ ಎಂದವರು ಹೇಳಿದ್ದಾರೆ.

 ಅಫ್ಗಾನ್ ನಿಂದ ತೆರವುಗೊಳಿಸಿದ ಜನರಲ್ಲಿ ಕೆಲವರನ್ನು ಖತರ್ನ ಅಲ್ಉದೈದ್ನಲ್ಲಿರುವ ಅಮೆರಿಕ ಸೇನಾ ನೆಲೆಯಲ್ಲಿ ತಾತ್ಕಾಲಿಕವಾಗಿ ಇರಿಸಲಾಗಿತ್ತು. ಇಲ್ಲಿ ತಾತ್ಕಾಲಿಕ ಆಸ್ಪತ್ರೆ, ಹೆಚ್ಚುವರಿ ಶಿಬಿರ, ಸಾಗಿಸಬಹುದಾದ(ಪೋರ್ಟೆಬಲ್) ಶೌಚಾಲಯಗಳನ್ನು ಖತರ್ ನಿರ್ಮಿಸಿದ ಜೊತೆಗೆ, ದಿನಾ ಸುಮಾರು 50,000 ಊಟ ಒದಗಿಸಿದೆ. ಇಲ್ಲಿದ್ದ ಸ್ಥಳಾಂತರಿತರನ್ನು ದೋಹಾದಿಂದ ಇತರ ದೇಶಗಳಿಗೆ ರವಾನಿಸಲು ಖತರ್ ಏರ್ವೇಸ್ನ 10 ವಿಮಾನಗಳು ಕಾರ್ಯನಿರ್ವಹಿಸಿವೆ. ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಸಂದರ್ಭ ವ್ಯವಸ್ಥೆ ಮಾಡಲಾಗಿದ್ದ ಸುಸಜ್ಜಿತ ಅಪಾರ್ಟ್ಮೆಂಟ್ಗಳಲ್ಲಿ ಕೆಲವರಿಗೆ ಆಶ್ರಯ ಒದಗಿಸಲಾಗಿದೆ. ಇನ್ನೂ ಸುಮಾರು 20,000 ಸ್ಥಳಾಂತರಿತರು ಖತರ್ನಲ್ಲೇ ಉಳಿದಿದ್ದು ಒಂದೆರಡು ವಾರಗಳಲ್ಲಿ ಇವರು ನಿಗದಿತ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News