ಗಡಿಯಾಚೆಯ ಭಯೋತ್ಪಾದನೆ ಉತ್ತೇಜಿಸಲು ಅಫ್ಘಾನಿಸ್ತಾನದಲ್ಲಿಯ ಸ್ಥಿತಿ ಬಳಕೆಯಾಗಬಾರದು: ರಕ್ಷಣಾ ಸಚಿವ ರಾಜನಾಥ್ ಸಿಂಗ್

Update: 2021-08-30 17:34 GMT

ಹೊಸದಿಲ್ಲಿ,ಆ.30: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿಯ ಸ್ಥಿತಿಯ ಮೇಲೆ ಭಾರತವು ನಿರಂತರ ನಿಗಾಯಿರಿಸಿದೆ ಎಂದು ಸೋಮವಾರ ಇಲ್ಲಿ ಹೇಳಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು,ಅಫ್ಘಾನಿಸ್ತಾನದಲ್ಲಿಯ ಬೆಳವಣಿಗೆಗಳು ಭಾರತದ ಪಾಲಿಗೆ ಹೊಸ ಭದ್ರತಾ ಆತಂಕಗಳನ್ನು ಹುಟ್ಟಿಸಿವೆ ಎಂದರು.


ಪಂಜಾಬ್ ವಿವಿಯು ಚಂಡಿಗಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ವರ್ಚುವಲ್ ಭಾಷಣವನ್ನು ಮಾಡಿದ ಸಿಂಗ್, ಭಾರತೀಯರ ಸುರಕ್ಷತೆಯ ಜೊತೆಗೆ ರಾಷ್ಟ್ರವಿರೋಧಿ ಶಕ್ತಿಗಳು ಗಡಿಯಾಚೆಯ ಭಯೋತ್ಪಾದನೆಯನ್ನು ಉತ್ತೇಜಿಸಲು ಅಫ್ಘಾನಿಸ್ತಾನದಲ್ಲಿಯ ಬೆಳವಣಿಗೆಗಳ ಲಾಭ ಪಡೆಯುವುದಿಲ್ಲ ಎನ್ನುವುದನ್ನೂ ಖಚಿತಪಡಿಸಿಕೊಳ್ಳಲು ಸರಕಾರವು ಬಯಸಿದೆ ಎಂದರು.
 
ಭಾರತವು ಕಟ್ಟೆಚ್ಚರವನ್ನು ವಹಿಸಿದೆ ಮತ್ತು ಎಲ್ಲಿಂದಲೇ ಎದುರಾಗುವ ಬೆದರಿಕೆಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದ ಸಿಂಗ್,ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ರಾಷ್ಟ್ರೀಯ ಭದ್ರತೆ ಮತ್ತು ಆತ್ಮ ಗೌರವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ತಾನು ಭರವಸೆ ನೀಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News