ಬಡದೇಶವಾಗಿ ಭಾರತ!

Update: 2021-09-10 10:27 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸ್ವಾತಂತ್ರೋತ್ತರ ಭಾರತದ ಅತಿ ದೊಡ್ಡ ಸಮಸ್ಯೆಯೇ ಬಡತನವಾಗಿತ್ತು. ದೇಶದ ಮೊತ್ತ ಮೊದಲ ಪ್ರಧಾನಿಯಾಗಿ ನೆಹರೂ ಅವರು ಈ ದೇಶವನ್ನು ಆಹಾರ ಸ್ವಾವಲಂಬನೆಯತ್ತ ಮುನ್ನಡೆಸಿದ ಬಗೆಯನ್ನು ವಿದೇಶಿ ಅರ್ಥಶಾಸ್ತ್ರಜ್ಞರೂ ಅತ್ಯಂತ ವಿಸ್ಮಯದಿಂದ ನೋಡಿದ್ದಾರೆ. 90ರ ದಶಕದವರೆಗೂ ಈ ದೇಶದಲ್ಲಿ ಚುನಾವಣೆ ನಡೆಯುತ್ತಾ ಬಂದಿರುವುದು ‘ಬಡತನ’ವನ್ನು ಪ್ರಣಾಳಿಕೆಯಾಗಿಟ್ಟುಕೊಂಡು. ‘ಗರೀಬಿ ಹಠಾವೋ’ ಇಂದಿರಾಗಾಂಧಿ ಅವರ ಅತ್ಯಂತ ಜನಪ್ರಿಯ ಘೋಷಣೆ. ಈ ಘೋಷಣೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ ಎನ್ನುವುದು ಅನಂತರದ ವಿಷಯ. ಆದರೆ ಈ ಘೋಷಣೆಯನ್ನು ಮುಂದಿಟ್ಟುಕೊಂಡು ಅವರು ಚುನಾವಣೆಯನ್ನು ಗೆದ್ದರು. ಈ ದೇಶವನ್ನು ಆಳಿದರು. ಸಂಪೂರ್ಣ ಗರೀಬಿ ಹಠಾವೋ ಸಾಧ್ಯವಾಗದೇ ಇದ್ದರೂ, ಬಡ ರಾಷ್ಟ್ರವಾಗಿದ್ದ ಭಾರತ, ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಪರಿವರ್ತನೆಯಾಯಿತು. ಕಳೆದ ಎರಡು ದಶಕಗಳಿಂದ ಈ ದೇಶದ ಚುನಾವಣೆ ಪ್ರಣಾಳಿಕೆಗಳು ಬದಲಾಗಿವೆ. ಅಕ್ಕಿ, ರೊಟ್ಟಿ, ವಸತಿ ಬದಿಗೆ ಸರಿದು ಆ ಜಾಗದಲ್ಲಿ ಮಂದಿರ, ಮಸೀದಿ, ಹಿಂದೂ ರಾಷ್ಟ್ರ ಇತ್ಯಾದಿಗಳು ಮುನ್ನೆಲೆಗೆ ಬಂದಿವೆ. ಜನರ ಹಸಿವಿಗಿಂತ ಈ ಭಾವನಾತ್ಮಕ ವಿಷಯಗಳೇ ಜನರ ನಿಜವಾದ ಅಗತ್ಯಗಳು ಎನ್ನುವುದನ್ನು ನಂಬಿಸುವಲ್ಲಿ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ. ಇದರ ಪರಿಣಾಮವೋ ಎಂಬಂತೆ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದ ಭಾರತ ಮತ್ತೆ ಬಡ ರಾಷ್ಟ್ರವಾಗುತ್ತ ಚಲಿಸುತಿ್ತದೆ. ಅಂದರೆ ಹಿಂದಕ್ಕೆ ಚಲಿಸುತ್ತಿದೆ.

2020-21ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಅಂಕಿ-ಅಂಶ ಕಾರ್ಯಾಲಯವು ಬಿಡುಗಡೆಗೊಳಿಸಿದ ನೂತನ ಅಂಕಿ-ಸಂಖ್ಯೆಗಳ ಪ್ರಕಾರ ಭಾರತದ ಆರ್ಥಿಕತೆಯು ಇಳಿಮುಖದತ್ತ ಸಾಗಿದೆ. 2019-20 ಹಾಗೂ 2020-21ನೇ ಸಾಲಿನಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು 10.56 ಲಕ್ಷ ಕೋಟಿ ರೂ. ಕಳೆದುಕೊಂಡಿದೆ. ಇದು -7.3 ಶೇಕಡದಷ್ಟು ನಕಾರಾತ್ಮಕ ಹೆಚ್ಚಳವಾಗಿದೆ. 2020-21ನೇ ಸಾಲಿನಲ್ಲಿ ಭಾರತದ ಜನತೆಯ ತಲಾ ವಾರ್ಷಿಕ ಆದಾಯವು 55,783 ರೂ. ಆಗಿದ್ದರೆ, 2019-20ನೇ ಸಾಲಿನಲ್ಲಿ ಅದು 62,056 ರೂ. ಆಗಿತ್ತು. ಕೊರೋನ ಸಾಂಕ್ರಾಮಿಕದ ಮೊದಲ ವರ್ಷದಲ್ಲಿ ದೇಶದ ವಾರ್ಷಿಕ ತಲಾ ಆದಾಯ 4,649 ರೂ.ಎಂದು ಅಂದಾಜಿಸಲಾಗಿದೆ.

ಎಪ್ರಿಲ್‌ನಲ್ಲಿ ನೂತನ ಹಣಕಾಸು ವರ್ಷ ಆರಂಭಗೊಂಡ ಬಳಿಕ ಭಾರತದಲ್ಲಿ ಕೊರೋನದ ಎರಡನೇ ಅಲೆ ತಾಂಡವವಾಡತೊಡಗಿತು. ಈ ಅಲೆಯು ಗ್ರಾಮಾಂತರ ಪ್ರದೇಶಗಳಲ್ಲಿಯೂ ಕ್ಷಿಪ್ರವಾಗಿ ಹರಡಿತ್ತು. ಕೊರೋನ ಹೆಸರಿನಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಕಾರಣದಿಂದ, ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ 50 ಕೋಟಿ ಜನರು ಭೀಕರ ಪರಿಸ್ಥಿತಿಯನ್ನು ಎದುರಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಬಹುತೇಕ ಗುತ್ತಿಗೆ ಕಾರ್ಮಿಕರು ಕಳೆದ ವರ್ಷದಿಂದ ಅನಿಯಮಿತವಾದ ನಿರುದ್ಯೋಗದ ನಡುವೆ ದಿನದೂಡುತ್ತಿದ್ದಾರೆ. ದೊಡ್ಡ ಸಂಖ್ಯೆಯ ಜನರು ತಮ್ಮ ಆದಾಯ ಅಥವಾ ಉಳಿತಾಯವನ್ನು ದೊಡ್ಡ ಪ್ರಮಾಣದಲ್ಲಿ ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದ್ದಾರೆ. 2017-18ನೇ ಸಾಲಿನಲ್ಲಿ ನಿರುದ್ಯೋಗದ ಪ್ರಮಾಣವು ಕಳೆದ 45 ವರ್ಷಗಳಲ್ಲೇ ಗರಿಷ್ಠವಾಗಿತ್ತು. ಕೊರೋನ ಸಾಂಕ್ರಾಮಿಕವು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡಿದೆ. ಬಡತನ ಹಾಗೂ ಕಡಿಮೆ ಆದಾಯವುಳ್ಳವರಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೋನ ಉಂಟು ಮಾಡಿರುವ ಹಾನಿಯನ್ನು ಸರಿಪಡಿಸುವುದು ಸರಕಾರದ ಪಾಲಿಗೆ ಸಣ್ಣ ಸವಾಲೇನೂ ಅಲ್ಲ.

ನಿರುದ್ಯೋಗ ಹಾಗೂ ಹಣದುಬ್ಬರದಲ್ಲಿ ಅಗಾಧ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಅಗತ್ಯ ವಸ್ತುಗಳ ಮೇಲೆ ಜನತೆ ಮಾಡುವ ವೆಚ್ಚದಲ್ಲಿ ಕುಸಿತವುಂಟಾಗಿದೆ ಹಾಗೂ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. 2021ರಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಕಳೆದ ವರ್ಷದಿಂದೀಚೆಗೆ ಅವರಿಗೆ ನಿಯಮಿತವಾಗಿ ಉದ್ಯೋಗ ದೊರೆಯುತ್ತಿಲ್ಲ. ಪಡಿತರ ದರದ ಹೆಚ್ಚಳದಿಂದಾಗಿ ಜನರು ದ್ವಿದಳ ಧಾನ್ಯಗಳನ್ನು ಸೇವಿಸುವುದನ್ನು ನಿಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವನ್ನು ಒದಗಿಸುವ ನರೇಗಾದಂತಹ ಕಾರ್ಯಕ್ರಮಗಳು ಜನರ ಬೇಡಿಕೆ, ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ.ಅನೇಕ ಜನರು ತೀರಾ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ. 2020ರಲ್ಲಿ ಭಾರತವನ್ನು ಜಗತ್ತಿನ ಬಡರಾಷ್ಟ್ರಗಳ ಸಾಲಿನಲ್ಲಿ ಹೆಸರಿಸಲಾಗಿದೆ. 2011ರಿಂದೀಚೆಗೆ ದೇಶದಲ್ಲಿ ಬಡವರ ಗಣತಿ ನಡೆದಿಲ್ಲ. ಆದಾಗ್ಯೂ ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 2019ರಲ್ಲಿ ಭಾರತದಲ್ಲಿ 36.40 ಕೋಟಿ ಬಡವರಿದ್ದು, ಇದು ಒಟ್ಟು ಜನಸಂಖ್ಯೆಯ ಶೇ.28ರಷ್ಟಾಗಿದೆ. ಲಾಕ್‌ಡೌನ್ ಬಡವರ ಸಂಖ್ಯೆಯನ್ನು ಇನ್ನಷ್ಟು ಭೀಕರವಾಗಿಸಿದೆ.

ಭಾರತ ಮತ್ತೆ ಬಡ ದೇಶವಾಗಿ ಹಿಮ್ಮುಖವಾಗಿ ಚಲಿಸುವುದಕ್ಕೆ ಕೊರೋನವಷ್ಟೇ ಕಾರಣವೇ? ಪೂರ್ವಸಿದ್ಧತೆಗಳಿಲ್ಲದ ಅಪ್ರಬುದ್ಧ ನೋಟು ನಿಷೇಧವು ಕಟ್ಟಿ ನಿಲ್ಲಿಸಿದ ಈ ದೇಶದ ಆರ್ಥಿಕತೆಯನ್ನು ಒಮ್ಮೆಲೆ ಬುಡಮೇಲು ಮಾಡಿತು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಣ್ಣ ಪುಟ್ಟ ಉದ್ದಿಮೆಗಳನ್ನು ಸರ್ವನಾಶ ಮಾಡಿತು. ನಿರುದ್ಯೋಗ ಒಮ್ಮೆಲೆ ಉಲ್ಬಣಗೊಂಡಿತು. ಇದರ ಬೆನ್ನಿಗೆ ಜಾರಿಯಾದ ಅವಸರದ ಜಿಎಸ್‌ಟಿ ತೆರಿಗೆ ನೀತಿಯ ಅವ್ಯವಸ್ಥೆ ವ್ಯಾಪಾರವನ್ನು ಇನ್ನಷ್ಟು ಜಟಿಲವಾಗಿಸಿತು. ಇವೆಲ್ಲದರಿಂದ ತತ್ತರಿಸಿಕೂತಿರುವಾಗಲೇ ಕೊರೋನ ವೈರಸ್‌ನ ಆಗಮನ. ಆರ್ಥಿಕವಾಗಿ ಸದೃಢವಾಗಿದ್ದರೆ ಕೊರೋನದ ಹಾನಿಯನ್ನು ದೇಶ ತಾಳಿಕೊಳ್ಳುತ್ತಿತ್ತೋ ಏನೋ? ಜೊತೆಗೆ ಅತ್ಯಂತ ಬೇಜವಾಬ್ದಾರಿಯ, ಗೊಂದಲಗಳ, ಸಮಯಸಾಧಕತನದ ಲಾಕ್‌ಡೌನ್ ಈ ದೇಶದ ಬಡವರನ್ನು ಸರ್ವನಾಶ ಮಾಡಿತು. ಇದೇ ಸಂದರ್ಭದಲ್ಲಿ ಹೆಚ್ಚಿದ ಉಗ್ರವಾದ, ಚೀನಾದ ದಾಂಧಲೆಗಳು, ಕಾಶ್ಮೀರದ ಹೊರೆ, ಸಿಎಎ ಕಾಯ್ದೆಯನ್ನು ಜನರ ಮೇಲೆ ಹೇರುವುದಕ್ಕೆ ಮಾಡಿದ ಪ್ರಯತ್ನ ಇವೆಲ್ಲವೂ ದೇಶದ ಆರ್ಥಿಕತೆಯನ್ನು ಜರ್ಜರಿತಗೊಳಿಸಲು ತನ್ನದೇ ಕೊಡುಗೆಗಳನ್ನು ನೀಡಿದ್ದವು. ಆರ್ಥಿಕವಾಗಿ ದಿವಾಳಿಯಾಗುತ್ತಿರುವ ದೇಶವನ್ನು ಮೇಲೆತ್ತುವುದಕ್ಕೆ ಸರಕಾರ, ಈ ಹಿಂದಿನ ನಾಯಕರು ಕಟ್ಟಿ ನಿಲ್ಲಿಸಿದ ಒಂದೊಂದೇ ಸಾರ್ವಜನಿಕ ಆಸ್ತಿಗಳನ್ನು ಮಾರುತ್ತಿದೆ. ಈ ಮಾರಾಟ ಭವಿಷ್ಯದಲ್ಲಿ ಭಾರತದ ಬಡತನವನ್ನು ಇನ್ನಷ್ಟು ಹೆಚ್ಚಿಸಲಿದೆ. ದೈಹಿಕವಾಗಿ ಸಂಪೂರ್ಣ ಕೃಶವಾಗುತ್ತಾ, ತಲೆಯ ಗಾತ್ರವನ್ನಷ್ಟೇ ಹಿಗ್ಗಿಸಿಕೊಳ್ಳುತ್ತಿರುವ ಬಾಲಕನಂತಿದೆ ಭಾರತದ ಸ್ಥಿತಿ.

ಭಾರತದ ಭವಿಷ್ಯ ಉಜ್ವಲವಾಗಿದೆ ಎನ್ನುವ ಭ್ರಮೆಯಿಂದ ಹೊರ ಬಂದು, ಇನ್ನಾದರೂ ವಾಸ್ತವದತ್ತ ನಾವು ಕಣ್ಣು ಹಾಯಿಸಬೇಕಾಗಿದೆ. ಒಂದು ಗಾಯವನ್ನು ಗಾಯದ ಮೂಲಕ ಮರೆಮಾಚುವ ತಂತ್ರವನ್ನು ಸರಕಾರ ಮಾಡುತ್ತಿದೆ. ಹೆಚ್ಚುತ್ತಿರುವ ಬಡತನ, ನಿರುದ್ಯೋಗಗಳನ್ನು ಮುಚ್ಚಿಹಾಕಲು ಧರ್ಮದ ಹೆಸರಲ್ಲಿ ಜನರ ನಡುವೆ ಗಲಭೆಗಳನ್ನು ಸೃಷ್ಟಿಸಿದರೆ ಅದು ದೇಶವನ್ನು ಇನ್ನಷ್ಟು ವಿನಾಶದತ್ತ ಕೊಂಡೊಯ್ಯಲಿದೆ. ಮೊತ್ತ ಮೊದಲು ಸರಕಾರ ತನ್ನ ತಪ್ಪು ಆರ್ಥಿಕ ನೀತಿಗಳನ್ನು ಒಪ್ಪಿಕೊಂಡು, ದೇಶವನ್ನು ಮತ್ತೆ ಹಳಿಗೆ ತರುವ ವಿಧಾನಗಳ ಕಡೆಗೆ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವಪಕ್ಷಗಳನ್ನು ಜೊತೆಗೆ ತೆಗೆದುಕೊಂಡು ಹೆಗುವುದು ಸರಕಾರಕ್ಕೆ ಅನಿವಾರ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News