ಕೆರೆಗಳನ್ನು ಇನ್ನಾದರೂ ಕಾಪಾಡಿ

Update: 2021-09-01 05:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ಕಾಲದಲ್ಲಿ ಇಡೀ ಊರಿನ ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಗಳ ಬಾಯಾರಿಕೆಯನ್ನು ಇಂಗಿಸುತ್ತಿದ್ದ ಕೆರೆಗಳು ಹಾಗೂ ಇತರ ಜಲ ಮೂಲಗಳು ಸರಕಾರದ ಮತ್ತು ಸಮಾಜದ ನಿರ್ಲಕ್ಷದಿಂದ ವಿನಾಶದತ್ತ ಸಾಗಿವೆ. ಈ ದುಸ್ಥಿತಿಗೆ ಮುಖ್ಯ ಕಾರಣ ಕೆರೆಗಳ ಒತ್ತುವರಿ. ಈ ಒತ್ತುವರಿಯನ್ನು ತೆರವುಗೊಳಿಸುವಂತೆ ಉಚ್ಚ ನ್ಯಾಯಾಲಯ ಆಗಾಗ ಸರಕಾರಕ್ಕೆ ನಿರ್ದೇಶನ ನೀಡುತ್ತಲೇ ಇದೆ. ಈ ಬಗ್ಗೆ ಸಮೀಕ್ಷಾ ವರದಿಯೊಂದನ್ನು ತಯಾರಿಸುವಂತೆ ನ್ಯಾಯಾಲಯ ಅನೇಕ ಬಾರಿ ಸೂಚಿಸಿದೆ. ಆದರೆ ಪ್ರಯೋಜನವಾಗಿಲ್ಲ. ಕೆರೆಗಳನ್ನು ಉಳಿಸಿಕೊಳ್ಳುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ನೀರಿನ ಬೇಡಿಕೆಯೂ ಹೆಚ್ಚುತ್ತದೆ. ಇದರ ಅರಿವಿಲ್ಲದ ನಾವು ಕೈಯಾರೆ ನಮ್ಮ ಹಿರಿಯರು ನಿರ್ಮಿಸಿದ ಕೆರೆಗಳನ್ನು ಹಾಳು ಮಾಡುತ್ತಿದ್ದೇವೆ.

ಕೆರೆಗಳ ವಿನಾಶ ಎರಡು ವಿಧವಾಗಿ ನಡೆದಿದೆ. ಒಂದನೆಯದು ಯಾವುದೇ ಊರಿನಿಂದ, ಜನವಸತಿ ಪ್ರದೇಶದಿಂದ ದೂರದಲ್ಲಿ ಇರುವ ಕೆರೆಗಳು ಹೂಳು ತುಂಬಿ ಹಾಳಾಗಿ ಹೋಗುತ್ತಿವೆ. ಎರಡನೆಯದು ಯಾವುದೇ ನಗರ ಅಥವಾ ಪಟ್ಟಣದ ಸಮೀಪದಲ್ಲಿರುವ ಕೆರೆಗಳು ಮನುಷ್ಯರಿಂದಾಗಿಯೇ ನಾಶವಾಗಿ ಹೋಗುತ್ತಿವೆ. ಈ ಕೆರೆಗಳನ್ನು ಅಭಿವೃದ್ಧಿಯ ಹೆಸರಿನ ಯೋಜನೆಗಳಿಗಾಗಿ ಅಂದರೆ ಬಸ್ ನಿಲ್ದಾಣ, ಕ್ರೀಡಾಂಗಣಕ್ಕೆ ಒಂದೆಡೆ ಬಳಸಿಕೊಳ್ಳಲಾಗುತ್ತಿದ್ದರೆ ಇನ್ನೊಂದೆಡೆ ರಿಯಲ್ ಎಸ್ಟೇಟ್ ಮಾಫಿಯಾ ಬಹುದೊಡ್ಡ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಬಡಾವಣೆಗಳನ್ನು ನಿರ್ಮಿಸಿವೆೆ. ಕೆಲವು ಕೆರೆಯ ಅಂಗಳಗಳು ಊರಿನ ಕಸ ಮತ್ತು ತ್ಯಾಜ್ಯಗಳನ್ನು ಹಾಕುವ ಕಸದ ತೊಟ್ಟಿಗಳಾಗಿವೆ. ಇನ್ನು ಕೆಲವು ಕಡೆ ಸರಕಾರವೇ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡುತ್ತಿದೆ. ಹೀಗಾಗಿ ಕೆರೆಗಳು ನಮ್ಮ ಕಣ್ಣ ಮುಂದೆಯೇ ಕಣ್ಮರೆಯಾಗುತ್ತಿವೆ.

ನ್ಯಾಯಾಲಯದ ಆದೇಶದ ಪ್ರಕಾರ ಸರಕಾರ ಒತ್ತುವರಿ ಮಾಡಿ ನಿರ್ಮಿಸಿರುವ ಕೆರೆಗಳನ್ನಾದರೂ ತೆರವುಗೊಳಿಸಬೇಕು. ಅದು ಕೂಡ ಸಾಧ್ಯವಾಗುತ್ತಿಲ್ಲ.
ಕಳೆದ ವರ್ಷ ಜನವರಿ ತಿಂಗಳಲ್ಲಿ ಕೇರಳದ ಕೊಚ್ಚಿಯ ಸಮೀಪದ ಸಮುದ್ರದ ದಂಡೆಯ ಸಮೀಪದಲ್ಲಿ ನಿರ್ಮಿಸಲಾಗಿದ್ದ ಬಹು ಅಂತಸ್ತಿನ ಐಷಾರಾಮಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಸ್ಫೋಟಿಸಿ ಕೆಡವಿ ತೆರವುಗೊಳಿಸಲಾಗಿತ್ತು. ಅದೇ ರೀತಿ ಕೆಡವಿ ವಶಪಡಿಸಿಕೊಳ್ಳಬೇಕಾದ ಸಾಕಷ್ಟು ಅಕ್ರಮ ಕಟ್ಟಡಗಳು ರಾಜ್ಯದಲ್ಲಿವೆ. ಆದರೆ ಜನರು ನ್ಯಾಯಕ್ಕಾಗಿ ಕೋರ್ಟಿನ ಕಟ್ಟೆಯನ್ನು ಏರಲೇಬೇಕಾದ ಸನ್ನಿವೇಶದಲ್ಲಿ ಮಾತ್ರ ನ್ಯಾಯಾಂಗ ಮಧ್ಯಪ್ರವೇಶ ಮಾಡುತ್ತದೆ.
ಅಮೂಲ್ಯ ಜಲ ಮೂಲಗಳಾದ ಕೆರೆ ಕಟ್ಟೆಗಳನ್ನು ಕಾಪಾಡಲು ಸಾರ್ವಜನಿಕರು ಅದರಲ್ಲೂ ಪರಿಸರವಾದಿಗಳು ನ್ಯಾಯಾಲಯದ ಮೊರೆ ಹೋಗುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಕೆರೆಗಳ ಸಮೀಕ್ಷೆಗಾಗಿ ರಾಷ್ಟ್ರೀಯ ಪರಿಸರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆಯ ಪರಿಣಿತರನ್ನು ಈ ಹಿಂದೆ ಕರೆಸಲಾಗಿತ್ತು.

ಕೆರೆಗಳ ಸಂರಕ್ಷಣೆಗಾಗಿ ಸರಕಾರೇತರ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ನ್ಯಾಯಾಲಯ ಈ ಹಿಂದೆ ಸೂಚಿಸಿತ್ತು. ಆದರೆ ಯಾವುದಕ್ಕೂ ಸ್ಪಂದಿಸಲಾಗದಷ್ಟು ನಮ್ಮನ್ನು ಆಳುವ ಸರಕಾರ ಜಡವಾಗಿರುವುದು ವಿಷಾದದ ಸಂಗತಿಯಾಗಿದೆ. ನಮ್ಮ ಪೂರ್ವಿಕರು ಪಾಳೆಯಗಾರರೇ ಆಗಿದ್ದರೂ ಜನ ಸಾಮಾನ್ಯರ ಅನುಕೂಲಕ್ಕಾಗಿ ಪ್ರತಿ ಊರಿನಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸಿದರು. ಒಂದು ಹಳ್ಳಿಯಲ್ಲಿ ಒಂದಲ್ಲ ಎರಡಲ್ಲ ಐದಾರು ಕೆರೆಗಳು ಇರುತ್ತಿದ್ದವು. ಬೆಂಗಳೂರಿನಂತಹ ನಗರದಲ್ಲಿ ಕೆಂಪೇಗೌಡರು ದೂರದೃಷ್ಟಿ ಯನ್ನು ಇಟ್ಟುಕೊಂಡು ನಗರದ ಜನಸಂಖ್ಯೆ ಜಾಸ್ತಿಯಾದರೆ ತೊಂದರೆಯಾಗದಿರಲೆಂದು ನೂರಾರು ಸಣ್ಣ, ದೊಡ್ಡ ಕೆರೆಗಳನ್ನು ನಿರ್ಮಿಸಿದರು. ಕೆಂಪೇಗೌಡರಿಗಿಂತ ಮುಂಚೆ ಮೈಸೂರು ರಾಜ್ಯವನ್ನಾಳಿದ ಹೈದರಲಿ ಮತ್ತು ಟಿಪ್ಪುಸುಲ್ತಾನರು ನಿರ್ಮಿಸಿದಷ್ಟು ಕೆರೆಗಳನ್ನು, ಉದ್ಯಾನಗಳನ್ನು ಇನ್ಯಾವ ಅರಸರೂ ನಿರ್ಮಿಸಿಲ್ಲ. ಆದರೆ ಸ್ವಾತಂತ್ರ್ಯಾ ನಂತರ ನಮ್ಮನ್ನಾಳಿದ ಸರಕಾರಗಳು ಈ ಕೆರೆಗಳನ್ನು ಕಾಪಾಡಿ ನಿರ್ವಹಣೆ ಮಾಡುವಲ್ಲಿ ಎಡವಿದವು. ತೊಂಭತ್ತರ ದಶಕದಲ್ಲಿ ಜಾಗತೀಕರಣದ ಶಕೆ ಆರಂಭವಾದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ರಿಯಲ್ ಎಸ್ಟೇಟ್ ಮತ್ತು ಮೈನಿಂಗ್ ಮಾಫಿಯಾಗಳು ಪ್ರಬಲಗೊಂಡವು. ಅತ್ಯಂತ ವಿಶಾಲವಾದ ಕೆರೆಗಳನ್ನು ಬೇಕಂತಲೇ ಕಡೆಗಣಿಸಿ ಅವುಗಳಲ್ಲಿ ಹೂಳು ತುಂಬಲು ಬಿಡಲಾಯಿತು. ಆನಂತರ ಅವುಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಬಡಾವಣೆಗಳನ್ನು ನಿರ್ಮಿಸುವ ದಂಧೆ ಆರಂಭವಾಯಿತು. ಅಧಿಕಾರದಲ್ಲಿರುವವರು ಇಂತಹ ಅಕ್ರಮ ಬಡಾವಣೆಗಳನ್ನು ಸಕ್ರಮ ಮಾಡುತ್ತಾ ಬಂದರು. ಇವೆಲ್ಲದರ ಪರಿಣಾಮವಾಗಿ ಈಗ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ.

ಕೆರೆಗಳನ್ನು ಒತ್ತುವರಿ ಮಾಡಿಕೊಂಡು ವಸತಿ ಸಂಕೀರ್ಣಗಳನ್ನು ನಿರ್ಮಿಸಿದಂತೆ ರಾಜ ಕಾಲುವೆಗಳನ್ನು ಆಕ್ರಮಿಸಿ ಅವುಗಳ ಮೇಲೆ ಬಹು ಅಂತಸ್ತಿನ ಕಟ್ಟಡಗಳನ್ನು ನಿರ್ಮಿ ಸುವ ಲಾಭಕೋರತನದ ದಂಧೆಯೂ ಜೋರಾಗಿ ನಡೆಯತೊಡಗಿದೆ. ಇದೆಲ್ಲದರ ಪರಿಣಾಮವಾಗಿ ಮಳೆಗಾಲದಲ್ಲಿ ಬೆಂಗಳೂರಿನ ಜನತೆ ಪರದಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ನೀರು ಹರಿಯಬೇಕಾದ ಜಾಗಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳು ಎದ್ದು ನಿಂತಿವೆ. ಇಂತಹ ಕಟ್ಟಡಗಳ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳೇ ಪರವಾನಿಗೆ ನೀಡುತ್ತಾರೆ. ಈ ಅಕ್ರಮದಿಂದಾಗಿ ಕಾಲುವೆಯಲ್ಲಿ ಹರಿಯಬೇಕಾದ ನೀರು ರಸ್ತೆಗೆ ಬಂದು ಅನೇಕ ಮನೆಗಳೊಳಗೆ ಹರಿಯುತ್ತದೆ. ಮನೆಯಲ್ಲಿ ಕೊಳಚೆ ನೀರು ಹರಿಯುವುದನ್ನು ಅಸಹಾಯಕ ಜನರು ನೋಡುತ್ತಾ ನಿಲ್ಲುತ್ತಾರೆ. ಹೀಗೆ ಅನಾಹುತ ಸಂಭವಿಸಿದಾಗ ಕಾಟಾಚಾರಕ್ಕೆ ಬಂದು ಹೋಗುವ ಅಧಿಕಾರದಲ್ಲಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬದಲಾಗುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಹೀಗಾಗಿ ಕೆರೆ ಮತ್ತು ಕಾಲುವೆಗಳ ಒತ್ತುವರಿ ನಡೆಯುತ್ತಲೇ ಇರುತ್ತದೆ.

ನಗರ ಪ್ರದೇಶಗಳಲ್ಲಿ ಹೀಗಾದರೆ ಗ್ರಾಮೀಣ ಪ್ರದೇಶಗಳಲ್ಲಿ ಊರಿನ ಬಲಿಷ್ಠ ರಾಜಕಾರಣಿಗಳು, ಭೂಮಾಲಕರು, ತಮ್ಮ ಕೃಷಿ ಉದ್ದೇಶಗಳಿಗಾಗಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಪಂಚಾಯತ್‌ಗಳಲ್ಲಿ ಸದರಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇಂತಹ ಅಕ್ರಮಗಳನ್ನು ತಡೆಯಲು ಜನ ಜಾಗೃತಿಯಿಂದ ಮಾತ್ರ ಸಾಧ್ಯ. ಇನ್ನು ಮುಂದಾದರೂ ಸರಕಾರ ಎಚ್ಚೆತ್ತು ನಮ್ಮ ಅಮೂಲ್ಯ ಜಲ ಸಂಪತ್ತನ್ನು ಅಂದರೆ ಕೆರೆ ಕಟ್ಟೆಗಳನ್ನು ಕಾಪಾಡಲು ಕಾರ್ಯೋನ್ಮುಖವಾಗಬೇಕು. ಪದೇ ಪದೇ ನ್ಯಾಯಾಲಯಗಳಿಂದ ಕಿವಿ ಹಿಂಡಿಸಿಕೊಳ್ಳುವ ಪರಿಸ್ಥಿತಿ ಬರಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News