ವಾಯುಮಾಲಿನ್ಯದಿಂದ 40% ಭಾರತೀಯರ ಜೀವಿತಾವಧಿಯಲ್ಲಿ 9 ವರ್ಷ ನಷ್ಟ: ಅಮೆರಿಕ ಸಂಶೋಧಕರ ವರದಿ

Update: 2021-09-01 15:56 GMT
ಸಾಂದರಭಿಕ ಚಿತ್ರ

ವಾಷಿಂಗ್ಟನ್, ಸೆ.1: ವಾಯು ಮಾಲಿನ್ಯ ಸಮಸ್ಯೆಯು ಸುಮಾರು 40% ಭಾರತೀಯರ ಸಾಮಾನ್ಯ ಜೀವಿತಾವಧಿಯನ್ನು 9 ವರ್ಷದಷ್ಟು ಕಡಿಮೆಗೊಳಿಸಲಿದೆ ಎಂದು ಅಮೆರಿಕ ಮೂಲದ ಸಂಶೋಧಕರ ತಂಡವೊಂದರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  ರಾಷ್ಟ್ರೀಯ ರಾಜಧಾನಿ ದಿಲ್ಲಿ ಸೇರಿದಂತೆ ಕೇಂದ್ರ, ಪೂರ್ವ ಮತ್ತು ಉತ್ತರ ಭಾರತದಲ್ಲಿನ ಅತ್ಯಧಿಕ ಮಾಲಿನ್ಯ ಮಟ್ಟದ ಪ್ರದೇಶಗಳಲ್ಲಿ 480 ಮಿಲಿಯನ್ಗೂ ಅಧಿಕ ಭಾರತೀಯರು ವಾಸಿಸುತ್ತಿದ್ದಾರೆ. ಪಶ್ಚಿಮದ ರಾಜ್ಯ ಮಹಾರಾಷ್ಟ್ರ ಮತ್ತು ಕೇಂದ್ರಭಾಗದಲ್ಲಿರುವ ರಾಜ್ಯ ಮಧ್ಯಪ್ರದೇಶದಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಕುಸಿದಿದೆ. ಭಾರತದ ಅತ್ಯಧಿಕ ವಾಯುಮಾಲಿನ್ಯ ಕ್ರಮೇಣ ಭೌಗೋಳಿಕವಾಗಿ ವಿಸ್ತರಣೆಯಾಗುತ್ತಿದೆ ಎಂದು ಚಿಕಾಗೊ ವಿವಿಯ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಸಿದ್ಧಪಡಿಸಿದ ಸಂಶೋಧನಾ ವರದಿ ಹೇಳಿದೆ.

  
 ಮಾಲಿನ್ಯ ಅಪಾಯಕಾರಿ ಮಟ್ಟ ತಲುಪುವುದನ್ನು ತಡೆಯಲು ಭಾರತದಲ್ಲಿ 2019ರಲ್ಲಿ ಚಾಲನೆ ನೀಡಲಾಗಿರುವ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ(ಎನ್ಸಿಎಪಿ) ಶ್ಲಾಘನೀಯವಾಗಿದ್ದು , ಈ ಯೋಜನೆ ಗುರಿ ತಲುಪಿದರೆ ದೇಶದ ಜನರ ಒಟ್ಟು ಜೀವಿತಾವಧಿಯಲ್ಲಿ 1.7 ವರ್ಷದ ಹೆಚ್ಚಳ ಮತ್ತು ದಿಲ್ಲಿ ಜನತೆಯ ಜೀವಿತಾವಧಿಯಲ್ಲಿ 3.1 ವರ್ಷದ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ವರದಿ ಹೇಳಿದೆ. 

ವಿಶ್ವದಲ್ಲಿ ಅತ್ಯಧಿಕ ವಾಯುಮಾಲಿನ್ಯ ಇರುವ ರಾಜಧಾನಿಗಳ ಪಟ್ಟಿಯಲ್ಲಿ ಹೊಸದಿಲ್ಲಿ ಸತತ 3ನೇ ವರ್ಷ ಅಗ್ರಸ್ಥಾನ ಪಡೆದಿದೆ. ದೇಶದಲ್ಲಿ ಅತ್ಯಧಿಕ ವಾಯುಮಾಲಿನ್ಯ ಇರುವ 102 ನಗರಗಳಲ್ಲಿ 2024ರೊಳಗೆ ವಾಯುಮಾಲಿನ್ಯ ಮಟ್ಟವನ್ನು 20ರಿಂದ 30%ದಷ್ಟು ಕಡಿಮೆಗೊಳಿಸುವ ಉದ್ದೇಶ ಎನ್ಸಿಎಪಿ ಯೋಜನೆಯಲ್ಲಿದೆ. ಕೈಗಾರಿಕೆಗಳು, ವಾಹನಗಳು ಹೊರಸೂಸುವ ಹೊಗೆಯ ಪ್ರಮಾಣವನ್ನು ಕಡಿಮೆಗೊಳಿಸುವುದು, ವಾಹನಗಳಿಗೆ ಬಳಸುವ ತೈಲ, ತ್ಯಾಜ್ಯ ಸುಡುವುದಕ್ಕೆ ಸಂಬಂಧಿಸಿ ಕಠಿಣ ನಿಯಮವನ್ನು ಎನ್ಸಿಎಪಿ ಹೊಂದಿದೆ.

 ವಿವಿಧ ರೀತಿಯ ದೀರ್ಘಾವಧಿ ವಾಯುಮಾಲಿನ್ಯದ ಪ್ರದೇಶದಲ್ಲಿರುವ ಜನರ ಆರೋಗ್ಯವನ್ನು ತುಲನೆ ಮಾಡಿ, ಈ ಸಮೀಕ್ಷೆಯ ಫಲಿತಾಂಶವನ್ನು ಭಾರತ ಹಾಗೂ ಇತರ ದೇಶಗಳ ವಿವಿಧ ಪ್ರದೇಶಗಳಿಗೆ ಅನ್ವಯಿಸಿ ಈ ಅಧ್ಯಯನ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News