ಮುಂದಿನ ಪೀಳಿಗೆಗಾಗಿ ಜಲಿಯನ್ ವಾಲಾಭಾಗ್ ಸಂರಕ್ಷಣೆ: ಕೇಂದ್ರ ಸರಕಾರ
ಹೊಸದಿಲ್ಲಿ,ಸೆ.1: ಜಲಿಯನ್ ವಾಲಾ ಭಾಗ್ ಸಂಕೀರ್ಣವನ್ನು ಕೇಂದ್ರ ಸರಕಾರವು ಗ್ಲಾಮರೀಕರಣಗೊಳಿಸುತ್ತಿದೆಯೆಂಬ ಆರೋಪಗಳಿಗೆ ಸಂಬಂಧಿಸಿ ಗುರುವಾರ ಕೇಂದ್ರ ಸರಕಾರ ಪ್ರತಿಕ್ರಿಯಿಸಿದ್ದು, ಮುಂದಿನ ಪೀಳಿಗೆಗಾಗಿ ಈ ಹುತಾತ್ಮ ಸ್ಮಾಕವನ್ನು ಕಾಪಿಡುವ ಉದ್ದೇಶದಿಂದ ಅದನ್ನು ಭಾರತೀಯ ಪುರಾತತ್ವ ಸರ್ವೇಕ್ಷ ಸಂಸ್ಥೆಯು ಜೀರ್ಣೋದ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದೆ.
ಜಲಿಯನ್ ವಾಲಾ ಭಾಗ್ ಸ್ಮಾರಕಕ್ಕೆ ಸಂರಕ್ಷಣೆಗೊಳಪಡುವ ತೀರಾ ಅಗತ್ಯವಿತ್ತು ಎಂದು ಸಾಂಸ್ಕೃತಿಕ ಸಚಿವಾಲಯದ ಕಾರ್ಯದರ್ಶಿ ರಾಘವೇಂದ್ರ ಸಿಂಗ್ ವಾದಿಸಿದ್ದಾರೆ.
‘‘ಜಲಿಯನ್ ವಾಲಾ ಭಾಗ್ ಸ್ಮಾರಕವನ್ನು ದೇಶದ ವಿಶ್ವಪಾರಂಪರಿಕ ತಾಣಗಳನ್ನು ನವೀಕರಿಸಿದ ಬಾರತೀಯ ಪುರಾತತ್ಮ ಸರ್ವೇಕ್ಷಣಾ ಸಂಸ್ಥೆಯೇ ಪುನರುಜ್ಜೀವನಗೊಳಿಸಿದೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವು ಕುಸಿಯಲು ಬಿಡುವ ಬದಲು ನಾವು ಅದನ್ನು ಮುಂದಿನ ಪೀಳಿಗೆಗಾಗಿ ಪುನರುಜ್ಜೀವನಗೊಳಿಸಿದ್ದೇವೆ’’ ಎಂದರು.
ಜಲಿಯನ್ ವಾಲಾ ಭಾಗ್ ನಲ್ಲಿ ಆಯೋಜಿಸಲಾಗಿರುವ ಧ್ವನಿ ಮತ್ತು ಬೆಳಕು ವ್ಯವಸ್ಥೆಯ ಬಗ್ಗೆ ಉಂಟಾಗಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಸಿಂಗ್ ಈ ಪ್ರದರ್ಶನವು ಹಿಂದೆಯೇ ಅಸ್ತಿತ್ವದಲ್ಲಿತ್ತು. ಆದರೆ ಹಲವು ಸಮಯದಿಂದ ಅದು ನಿಷ್ಕ್ರಿಯವಾಗಿತ್ತು ಎಂದರು.
ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ದಿನಾಚರಣೆಯಂದು ಆಯೋಜಿಸಲಾದ ಧ್ವನಿ ಮತ್ತು ಬೆಳಕು ಪ್ರದರ್ಶನದ ಭಾಗವಾಗಿ ‘ಹೃದಯಸ್ಪರ್ಶಿ’ ಸೌಂಡ್ಟ್ರಾಕ್ ಅನ್ನು ಬಳಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನವೀಕರಿಸಲಾದ ಜಲಿಯನ್ ವಾಲಾ ಭಾಗ್ ಸ್ಮಾರಕವನ್ನು ಹಾಗೂ ನೂತನ ನಾಲ್ಕು ಗ್ಯಾಲರಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದರು.
ಬ್ರಿಟಿಶ್ ಅಧಿಕಾರಿ ರೆಜಿನಾಲ್ಡ್ ಡಯರ್ ನೇತೃತ್ವದ ಬ್ರಿಟಿಶ ಪಡೆಗಳು ಸ್ವಾತಂತ್ರ ಹೋರಾಟಗಾರರ ಮೇಲೆ ಗುಂಡು ಹಾರಾಟ ನಡೆಸಿದಾಗ ಅನೇಕ ಮಂದಿ ಜಿಗಿದಿದ್ದ ಬಾವಿಗೆ ಪಾರದರ್ಶಕ ತಡೆಬೇಲಿಯನ್ನು ಹಾಕಲಾಗಿದೆ. ಜಲಿಯನ್ ವಾಲಾ ಭಾಗ್ ನ ಕಿರಿದಾದ ಪ್ರವೇಶದ್ವಾರವನ್ನು ಶಿಲ್ಪ ಕಲಾಕೃತಿಗಳಿಂದ ಆಲಂಕರಿಸಲಾಗಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಘಟನೆಯನ್ನು ವಿವರಿಸುವ ಧ್ವನಿ-ಬೆಳಕು ಪ್ರದರ್ಶನವನ್ನು ಪ್ರತಿದಿನವೂ ಆಯೋಜಿಸಲಾಗುತ್ತಿದೆ.