ನಿಮ್ಮ ಆಸ್ಪತ್ರೆಗಳನ್ನು ನೋಡಿ, ಇದು ನಂ.1 ಆರೋಗ್ಯ ವ್ಯವಸ್ಥೆಯೇ?: ಆದಿತ್ಯನಾಥ್‌ ವಿರುದ್ಧ ಪ್ರಿಯಾಂಕಾ ಕಿಡಿ

Update: 2021-09-02 11:58 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಫಿರೋಝಾಬಾದ್, ಮಥುರಾ, ಆಗ್ರಾ  ಸಹಿತ ಹಲವೆಡೆಗಳಲ್ಲಿ 100 ಜನರು ಜ್ವರಪೀಡಿತರಾಗಿ ಮೃತಪಟ್ಟ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ, ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಸರಿಯಾದ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ದೂರಿದ್ದಾರೆ.

"ಆಸ್ಪತ್ರೆಗಳ ಪರಿಸ್ಥಿತಿ ನೋಡಿ. ಇದು ಚಿಕಿತ್ಸೆಗಾಗಿ ನಿಮ್ಮ ನಂ.1 ಆರೋಗ್ಯ ವ್ಯವಸ್ಥೆಯೇ?" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ ಪ್ರಿಯಾಂಕ, ಜತೆಗೆ ರಾಜ್ಯದ ಹಲವೆಡೆ ಜ್ವರಪೀಡಿತರಾಗಿ ಜನರು ಸಾವನ್ನಪ್ಪಿರುವ ಮಾಧ್ಯಮ ವರದಿಯನ್ನೂ ಟ್ಯಾಗ್ ಮಾಡಿದ್ದಾರೆ.

ಶಂಕಿತ ಡೆಂಗ್ಯು ಹಾಗೂ ವೈರಲ್ ಜ್ವರದಿಂದ 41 ಜನರು ಮೃತಪಟ್ಟ ಘಟನೆಯ ನಂತರ ಉತ್ತರ ಪ್ರದೇಶ ಸರಕಾರ ಫಿರೋಝಾಬಾದ್‍ನ ಮುಖ್ಯ ವೈದ್ಯಾಧಿಕಾರಿಯನ್ನು  ವರ್ಗಾಯಿಸಿತ್ತು. ಇಲ್ಲಿ ಮೃತಪಟ್ಟವರ ಪೈಕಿ ಹೆಚ್ಚಿನವರು ಮಕ್ಕಳಾಗಿದ್ದರು.

ಮಥುರಾ ಜಿಲ್ಲೆಯಲ್ಲಿ 12 ಮಕ್ಕಳ ಸಹಿತ 14 ಜನರು ವೈರಲ್ ಜ್ವರಕ್ಕೆ ಮೃತಪಟ್ಟಿದ್ದಾರೆಂದು  ತಿಳಿದು ಬಂದಿದೆ. ಕೋಹಾ ಗ್ರಾಮದಲ್ಲಿ ಜ್ವರದ ಭೀತಿಯಿಂದ ಸುಮಾರು 50 ಕುಟುಂಬಗಳು ವಲಸೆ ಹೋಗಿವೆ.

ಸೋಂಕಿತರ ಮಾದರಿಯ ಪರೀಕ್ಷೆಯಿಂದ ಡೆಂಗ್ಯು, ಸ್ಕ್ರಬ್ ಟೈಫಸ್, ಮಲೇರಿಯಾ, ಲೆಪ್ಟೋಸ್ಪಿರೋಸಿಸ್ ಮುಂತಾದ ಕಾಯಿಲೆಗಳು ಹರಡಿರುವುದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News