ಗೋವಿನ ಹಕ್ಕುದಾರರು ಯಾರು?

Update: 2021-09-04 05:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಗೋಹತ್ಯೆ ಮಾಡಿದ ಆರೋಪಿಯೋರ್ವನಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರು ‘ಗೋ ಹತ್ಯೆ ಯಾಕೆ ಸಲ್ಲ?’ ಎನ್ನುವುದರ ಕುರಿತಂತೆ ಪುಂಖಾನುಪುಂಖವಾಗಿ ಭಾಷಣಗೈದಿದ್ದಾರೆ. ‘ಗೋ ಹತ್ಯೆಯು ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆಯುಂಟು ಮಾಡುತ್ತದೆ’ ಎಂದು ಹೇಳಿಕೆ ನೀಡಿರುವ ನ್ಯಾಯಾಧೀಶ ಶೇಖರ್ ಯಾದವ್, ‘ಗೋವಿನ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕಾಗಿರಿಸಿಕೊಳ್ಳಬೇಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲ ‘ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ. ‘ಮೂಲಭೂತ ಹಕ್ಕು ಕೇವಲ ಗೋಮಾಂಸ ಭಕ್ಷಕರ ಪರಮಾಧಿಕಾರವಲ್ಲ. ಬದಲಿಗೆ ಗೋವಿನ ಮೇಲೆ ಆರ್ಥಿಕವಾಗಿ ಅವಲಂಬಿತರಾದವರಿಗೆ ಮತ್ತು ಅದನ್ನು ಪೂಜಿಸುವವರಿಗೂ ಆ ಹಕ್ಕಿದೆ’ ಎಂದು ಸ್ಪಷ್ಟ ಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಕ್ರಮವಾಗಿ ಗೋಹತ್ಯೆಗೈದ ಆರೋಪಿಗೆ ಜಾಮೀನು ನಿರಾಕರಿಸಿದ್ದಾರೆ.

ಗೋವುಗಳನ್ನು ಕದ್ದು, ಅಕ್ರಮವಾಗಿ ಹತೈಗೈಯುವುದು ಅಪರಾಧ ಮತ್ತು ಆತನಿಗೆ ಹೈಕೋರ್ಟ್ ಜಾಮೀನು ನೀಡದೇ ಇರುವುದು ಶ್ಲಾಘನೀಯ ಆಗಿದೆ. ಗೋವುಗಳೆಂದೆಲ್ಲ, ಯಾವುದೇ ಸಾಕು ಪ್ರಾಣಿಗಳನ್ನು ಕದಿಯುವುದು ಮತ್ತು ಅದನ್ನು ಅಕ್ರಮವಾಗಿ ಹತ್ಯೆಗೈಯುವುದು ಖಂಡನೀಯ. ಅವರಿಗೆ ಕಠಿಣ ಶಿಕ್ಷೆಯಾಗಬೇಕಾಗಿದೆ. ಆಹಾರ ತಮ್ಮ ಹಕ್ಕಾಗಿರಬಹುದು, ಹಾಗೆಂದು ಇನ್ನೊಬ್ಬರ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಅಥವಾ ಕುರಿ, ಕೋಳಿಗಳನ್ನು ಕದ್ದು ಹತ್ಯೆಗೈಯುವುದು ಶಿಕ್ಷಾರ್ಹವಾಗಿದೆ. ಆದರೆ ಗೋವನ್ನು ಕದ್ದು ಹತ್ಯೆಗೈದ ಆರೋಪವನ್ನೇ ಮುಂದಿಟ್ಟು, ಗೋಮಾಂಸಾಹಾರ ಸೇವನೆಯ ವಿರುದ್ಧ ನ್ಯಾಯಾಧೀಶರೊಬ್ಬರು ಭಾಷಣ ಬಿಗಿಯುವುದು ಮಾತ್ರ ಕುಚೋದ್ಯದಿಂದ ಕೂಡಿದೆ. ನ್ಯಾಯಾಧೀಶರು ತಮ್ಮ ವಾದ ಸಮರ್ಥನೆಗೆ ಸಂವಿಧಾನವನ್ನು ಮಾನದಂಡವಾಗಿಟ್ಟುಕೊಳ್ಳದೆ ಇನ್ನಾವುದೋ ಪ್ರಾಚೀನ ಗ್ರಂಥವನ್ನು ಮಾನದಂಡವಾಗಿಟ್ಟುಕೊಂಡಂತಿದೆ. ಈ ದೇಶದಲ್ಲಿ ಗೋವುಗಳನ್ನು ಸಾಕುವುದು ಆಹಾರಕ್ಕಾಗಿಯೂ ಅಲ್ಲ, ಪೂಜಿಸುವುದಕ್ಕಾಗಿಯೂ ಅಲ್ಲ. ಗೋವುಗಳನ್ನು ಆಹಾರವಾಗಿ ಬಳಸುವ ಹಾಗೂ ಪೂಜೆಗಾಗಿ ಬಳಸುವ ಎರಡೂ ವರ್ಗಗಳು ಗೋಸಾಕಣೆಯಲ್ಲಿ ಆಸಕ್ತಿಯನ್ನು ಹೊಂದಿಲ್ಲ. ಹಾಗೆಯೇ ಈ ದೇಶದಲ್ಲಿ ಗೋವುಗಳನ್ನು ಸಾಕುತ್ತಿರುವವರು ಹಿಂದೂಗಳಲ್ಲ, ಬದಲಿಗೆ ರೈತರು. ಅವರು ಗೋವುಗಳನ್ನು ಆರ್ಥಿಕ ಕಾರಣಕ್ಕಾಗಿ ಸಾಕುತ್ತಾರೆಯೇ ಹೊರತು, ಧಾರ್ಮಿಕ ಕಾರಣಗಳಿಗಾಗಿ ಅಲ್ಲ. ದೇಶಾದ್ಯಂತ ಲಕ್ಷಾಂತರ ರೈತರು ಗೋಸಾಕಣೆಯ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರೆ.

ದೇಶದ ಹೈನೋದ್ಯಮಕ್ಕೆ ಈ ರೈತರ ಕೊಡುಗೆ ಬಹುದೊಡ್ಡದು. ಇವರಿಂದಲೇ ಗೋವುಗಳು ಉಳಿದಿವೆ. ಎಲ್ಲಿಯವರೆಗೆ ಗೋವುಗಳು ಭಾವನಾತ್ಮಕ ವಿಷಯವಾಗಿರದೆ, ಅದೊಂದು ಆರ್ಥಿಕ ವಿಷಯವಾಗಿತ್ತೋ ಅಲ್ಲಿಯವರೆಗೆ ಗೋವುಗಳ ಸಂಖ್ಯೆ ಏರುತ್ತಾ ಬಂದಿದೆ.. ಯಾವಾಗ ಈ ಉದ್ಯಮ ಆರ್ಥಿಕವಾಗಿ ನಷ್ಟವಾಗುತ್ತದೆಯೋ ಆಗ ತನ್ನಷ್ಟಕ್ಕೆ ರೈತರು ಗೋಸಾಕಣೆಯಿಂದ ಹಿಂದೆ ಸರಿಯುತ್ತಾರೆ. ರೈತರು ಗೋಸಾಕಣೆಯಿಂದ ಹಿಂದೆ ಸರಿದದ್ದೇ ಆದರೆ, ದೇಶದಲ್ಲಿ ಗೋವಿನ ಸಂಖ್ಯೆ ತನಗೆ ತಾನೇ ಇಳಿಕೆಯಾಗುತ್ತಾ ಹೋಗುತ್ತದೆ. ಗೋವುಗಳು ಹಿಂದೂಗಳ ಸೊತ್ತಲ್ಲ, ಯಾರು ಸಾಕುತ್ತಾರೆಯೋ ಆ ರೈತರ ಸೊತ್ತು. ಯಾಕೆಂದರೆ, ಗೋವುಗಳ ಸಾಕಣೆಯ ಹಿಂದೆ ಆರ್ಥಿಕ ಲೆಕ್ಕಾಚಾರಗಳಿವೆ. ಒಬ್ಬ ರೈತ ಗೋವುಗಳನ್ನು ಲಾಭದಾಯಕವಾಗಿ ಸಾಕಬೇಕಾದರೆ ಕೇವಲ ಹಾಲು ಕರೆಯುವುದರಿಂದಷ್ಟೇ ಸಾಧ್ಯವಿಲ್ಲ. ನ್ಯಾಯಾಧೀಶರೇ ಹೇಳುವಂತೆ ‘ಗೋವಿನಿಂದ ಹಾಲು ಮಾತ್ರವಲ್ಲ, ಸೆಗಣಿ, ಮೂತ್ರ’ಗಳೂ ದೊರಕುತ್ತವೆ. ಅವುಗಳನ್ನು ಗೊಬ್ಬರವಾಗಿ ಬಳಸಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ. ಆದರೆ ಗೋವುಗಳನ್ನು ಸಾಕುವ ರೈತನಿಗೆ ಗೋವುಗಳಿಂದ ಇನ್ನಿತರ ಲಾಭಗಳ ಬಗ್ಗೆ ಚೆನ್ನಾಗಿಯೇ ಅರಿವಿದೆ. ಚರ್ಮೋದ್ಯಮಗಳು ಗೋವಿನ ಚರ್ಮಗಳನ್ನು ಅವಲಂಬಿಸಿವೆ. ಅದರ ಮೂಳೆಗಳಿಗೂ ಬೇಡಿಕೆಗಳಿವೆ. ಇದೇ ಸಂದರ್ಭದಲ್ಲಿ ಅನುಪಯುಕ್ತ ಗೋವುಗಳನ್ನು ಸಾಕುವುದು ರೈತನಿಗೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತದೆ. ಆದುದರಿಂದ ಅನುಪಯುಕ್ತ ಗೋವುಗಳನ್ನು ಗೋಮಾಂಸಾಹಾರಿಗಳಿಗೆ ಮಾರುತ್ತಾನೆ. ಆತ ಹೈನೋದ್ಯಮಕ್ಕೆ ಪೂರಕವಾಗಿಲ್ಲದ ಅನುಪಯುಕ್ತ ಗೋವುಗಳನ್ನಷ್ಟೇ ಗೋಮಾಂಸಾಹಾರಿಗಳಿಗೆ ಮಾರುತ್ತಾನೆ . ಇದರಿಂದ ಆತನಿಗೆ ನಷ್ಟ ತಪ್ಪುವುದು ಮಾತ್ರವಲ್ಲ, ಅನುಪಯುಕ್ತ ಗೋವೊಂದನ್ನು ಮಾರುವ ಮೂಲಕ ಆತ ಐದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಯವರೆಗೆ ಆದಾಯವನ್ನು ಪಡೆಯುತ್ತಾನೆ. ಹೀಗೆ ಬಂದ ಹಣವನ್ನು ತನ್ನ ವೈಯಕ್ತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಳಸಬಹುದು ಅಥವಾ ಇತರ ಗೋವುಗಳಿಗೆ ಉತ್ತಮ ಆಹಾರಗಳನ್ನು ಒದಗಿಸಲು ಬಳಸಬಹುದು. ಆದುದರಿಂದ, ಗೋಮಾಂಸಾಹಾರಿಗಳು ಹೈನೋದ್ಯಮಕ್ಕೆ ಇಂದು ಪೂರಕವಾಗಿದ್ದಾರೆಯೇ ಹೊರತು ಮಾರಕವಾಗಿಲ್ಲ. ಒಂದು ವೇಳೆ ಗೋಮಾಂಸಾಹಾರಿಗಳೇ ಇಲ್ಲದೇ ಹೋದರೆ, ಅನುಪಯುಕ್ತ ದನಗಳನ್ನು ಸಾಕುವ ಹೆಚ್ಚುವರಿ ಹೊರೆ ಬಿದ್ದು ಹೈನೋದ್ಯಮ ನಷ್ಟಕ್ಕೀಡಾಗಬಹುದು. ಹೈನೋದ್ಯಮದಿಂದ ನಷ್ಟವಾದರೆ ರೈತ ಗೋಸಾಕಣೆಯನ್ನೇ ನಿಲ್ಲಿಸಬಹುದು. ಇದು ಭವಿಷ್ಯದಲ್ಲಿ ಗೋವುಗಳ ಇಳಿಕೆಗೆ ಕಾರಣವಾಗಬಹುದು.

ಆದುದರಿಂದ, ಒಬ್ಬ ರೈತ ಹೇಗೆ ತನ್ನ ಗದ್ದೆಯಲ್ಲಿ ಬೆಳೆದ ಭತ್ತವನ್ನು, ಮರಗಳಲ್ಲಿ ಬಿಟ್ಟ ಫಲವನ್ನು, ಸಾಕಿದ ಕೋಳಿ, ಕುರಿಗಳನ್ನು ಮಾರುವ ಹಕ್ಕನ್ನು ಹೊಂದಿರುತ್ತಾನೆಯೋ ಅಷ್ಟೇ ಪ್ರಮಾಣದ ಹಕ್ಕನ್ನು ತಾನು ಸಾಕಿದ ಗೋವುಗಳನ್ನು ಮಾರುವಾಗಲು ಹೊಂದಿರುತ್ತಾನೆ, ಹೊಂದಿರಬೇಕು. ಗೋಸಾಕಣೆಯೊಂದಿಗೆ ಸಂಬಂಧವೇ ಇಲ್ಲದ ಒಂದಿಷ್ಟು ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಸಾಕಿದ ಜಾನುವಾರುಗಳ ಮಾರಾಟಕ್ಕೆ ರೈತನಿಗೆ ತಡೆಯೊಡ್ಡುವುದು ಸಂವಿಧಾನ ವಿರೋಧಿ. ಇದರಿಂದ ರೈತರ ಹಕ್ಕುಗಳು ಉಲ್ಲಂಘನೆಯಾಗುತ್ತದೆ ಮಾತ್ರವಲ್ಲ, ಗೋಸಾಕಣೆಗೆ ಈ ಮೂಲಕ ಭಾರೀ ದೊಡ್ಡ ಹೊಡೆತ ಬೀಳುತ್ತದೆ. ತಾನು ಸಾಕಿದ ಜಾನುವಾರುಗಳನ್ನು ಮಾರಲು ತನಗೇ ಹಕ್ಕಿಲ್ಲದೆ ಇದ್ದರೆ, ಅವುಗಳನ್ನು ಏನು ಮಾಡಬೇಕು ಎನ್ನುವುದನ್ನು ಗೋರಕ್ಷಕರ ವೇಷದಲ್ಲಿರುವ ಬೀದಿ ರೌಡಿಗಳು ನಿರ್ಧರಿಸುತ್ತಾರೆ ಎಂದಾದರೆ ರೈತ ಗೋವುಗಳನ್ನು ಯಾಕಾದರೂ ಸಾಕಬೇಕು?

  ನ್ಯಾಯಾಧೀಶರ ಇನ್ನೊಂದು ವಾದ ‘ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತದೆ’ ಎನ್ನುವುದು. ಈ ದೇಶದ ಬಹುಸಂಖ್ಯಾತರು ಗೋಮಾಂಸಾಹಾರಿಗಳಾಗಿದ್ದಾರೆ ಎನ್ನುವುದನ್ನು ಸ್ವತಃ ಬಿಜೆಪಿ ಮುಖಂಡರೇ ಒಪ್ಪಿಕೊಂಡಿದ್ದಾರೆ. ಆದುದರಿಂದಲೇ ಗೋವಿನ ಕುರಿತಂತೆ ಈಶಾನ್ಯ ಭಾರತದಲ್ಲಿ , ಗೋವಾದಲ್ಲಿ, ಕೇರಳದಲ್ಲಿ ತನ್ನ ನಿಲುವುಗಳನ್ನು ಇನ್ನೂ ಪ್ರಕಟಪಡಿಸಿಲ್ಲ. ಅಲ್ಲಿನ ಬಿಜೆಪಿ ಮುಖಂಡರು ಗೋಹತ್ಯೆ ನಿಷೇಧಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆಕ್ಷೇಪವೇ ‘ಗೋ ಮಾಂಸಾಹಾರ’ ಯಾವುದೋ ಒಂದು ನಿರ್ದಿಷ್ಟ ಸಮುದಾಯದ ಹಕ್ಕಲ್ಲ, ಹಿಂದೂಗಳೂ ಸೇರಿದಂತೆ ಈ ದೇಶದ ಬಹುಸಂಖ್ಯಾತರ ಹಕ್ಕು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ದೇಶ ಪೌಷ್ಟಿಕ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಗೋಮಾಂಸಾಹಾರಿಗಳ ಪಾಲಿಗೆ ಗೋಮಾಂಸ ಬದುಕುವ ಹಕ್ಕಿನ ಭಾಗವಾಗಿದೆ. ನಿಜಕ್ಕೂ ನ್ಯಾಯಾಧೀಶರು ಸಂವಿಧಾನಕ್ಕೆ ಬದ್ಧರಾಗಿ ಮಾತನಾಡುವುದಿದ್ದರೆ, ಜನರ ಬದುಕುವ ಹಕ್ಕನ್ನು ಗೌರವಿಸಬೇಕು. ಇನ್ನು ಈ ದೇಶದಲ್ಲಿ ಗೋವುಗಳನ್ನು ಧಾರ್ಮಿಕ ದೃಷ್ಟಿಯಿಂದ ನೋಡುವವರಿಗೆ ಆ ನಿಟ್ಟಿನಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸರ್ವ ಹಕ್ಕುಗಳಿವೆ. ಸಂವಿಧಾನವೇ ಅವರಿಗೆ ಆ ಹಕ್ಕನ್ನು ನೀಡಿದೆ. ಗೋವುಗಳು ಎಂದಲ್ಲ, ಯಾವುದೇ ಮೃಗ, ಪಕ್ಷಿ, ಕಲ್ಲು ಇತ್ಯಾದಿಗಳನ್ನು ದೇವರೆಂದು ಕರೆದು ಅದನ್ನು ಪೂಜಿಸುವ ಹಕ್ಕು ಈ ದೇಶದ ಪ್ರತಿಯೊಬ್ಬರಿಗೂ ಇದೆ. ಆದರೆ ತಮ್ಮ ಧಾರ್ಮಿಕ ಆಚರಣೆಗಳನ್ನು ಇನ್ನೊಬ್ಬರ ಮೇಲೆ ಯಾವುದೇ ರೀತಿಯಲ್ಲೂ ಹೇರುವ ಅಧಿಕಾರ ಅವರಿಗಿಲ್ಲ. ಗೋವುಗಳನ್ನು ಪೂಜಿಸುವವರು, ರೈತರ ಅನುಪಯುಕ್ತ ಗೋವುಗಳನ್ನು ಯೋಗ್ಯ ಬೆಲೆ ಕೊಟ್ಟು ಖರೀದಿ ಮಾಡಿ ತಮ್ಮ ಹಟ್ಟಿಯಲ್ಲಿ ಸಾಕಿ, ಪೂಜೆ ಮಾಡುತ್ತಾರೆ ಎಂದಾದರೆ ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ.

ಆದರೆ ಈಗ ನಡೆಯುತ್ತಿರುವುದಾದರೂ ಏನು? ಅನುಪಯುಕ್ತ ಗೋವುಗಳಿಗಾಗಿ ಸರಕಾರ ‘ಗೋಶಾಲೆ’ಯ ಹೆಸರಲ್ಲಿ ಕೋಟ್ಯಂತರ ಹಣವನ್ನು ವೆಚ್ಚ ಮಾಡುತ್ತಿದೆೆ. ಇದರಿಂದ ರೈತರಿಗಾಗಲಿ, ದೇಶಕ್ಕಾಗಲಿ ಯಾವುದೇ ರೀತಿಯ ಲಾಭಗಳಿಲ್ಲ. ಒಂದು ನಿರ್ದಿಷ್ಟ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗಾಗಿ ಇಡೀ ದೇಶದ ಜನರ ತೆರಿಗೆ ಹಣವನ್ನು ವ್ಯರ್ಥಮಾಡುವುದು ಎಷ್ಟರಮಟ್ಟಿಗೆ ಸರಿ? ಅಷ್ಟೇ ಅಲ್ಲ, ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆಯೆಂದು ಈ ದೇಶದ ಹೈನೋದ್ಯಮವನ್ನು ನಾಶ ಮಾಡುವುದು ನ್ಯಾಯವೇ? ಅತ್ತ ಗೋಶಾಲೆಯಲ್ಲಿ ಸರಿಯಾದ ನಿರ್ವಹಣೆಯಿಲ್ಲದೆ ಗೋವುಗಳು ಅನಾಥವಾಗಿ ಸಾಯುತ್ತಿವೆ. ಸರಕಾರ ಬಿಡುಗಡೆ ಮಾಡಿದ ಹಣವನ್ನು ಗೋಸಾಕಣೆಗೆ ಸಂಬಂಧವೇ ಇಲ್ಲದ ಜನರು ಉಂಡು ತೇಗುತ್ತಿದ್ದಾರೆ. ಗೋಶಾಲೆಗಳಿಂದ ಕದ್ದು ಮುಚ್ಚಿ ಬೃಹತ್ ಗೋಸಂಸ್ಕರಣಾ ಘಟಕಗಳಿಗೆ ಗೋವುಗಳು ಅಕ್ರಮವಾಗಿ ಸಾಗಾಟವಾಗುತ್ತಿರುವ ಬಗ್ಗೆ ವರದಿಗಳಿವೆ. ಗೋ ಸಾಕಣೆ ಧರ್ಮ ಶಾಸ್ತ್ರದ ಭಾಗವಲ್ಲ, ಅರ್ಥ ಶಾಸ್ತ್ರದ ಭಾಗ ಎನ್ನುವುದನ್ನು ಅರಿತ ದಿನ, ಈ ದೇಶದಲ್ಲಿ ಗೋವುಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಗಂಡು ನವಿಲಿನ ಕಣ್ಣಿನ ಕಣ್ಣೀರು ಕುಡಿದು ಹೆಣ್ಣು ನವಿಲು ಗರ್ಭ ಧರಿಸುವ ಕಾರಣಕ್ಕೆ ನವಿಲು ಪವಿತ್ರ ಎಂದು ಈ ಹಿಂದೆ ನ್ಯಾಯಾಧೀಶರೊಬ್ಬರು ಹೇಳಿ ನಗೆಪಾಟಲಿಗೀಡಾಗಿದ್ದರು. ಇದೀಗ ಗೋವಿನ ಪಾವಿತ್ರತೆಯನ್ನು ಎತ್ತಿ ಹಿಡಿಯಲು ಹೋಗಿ, ಇನ್ನೊಬ್ಬ ನ್ಯಾಯಾಧೀಶರು ತಮ್ಮ ಅಜ್ಞಾನವನ್ನು ದೇಶದ ಮುಂದೆ ಪ್ರದರ್ಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News