ಕ್ರಿಕೆಟ್ ಮೈದಾನದೊಳಗೆ ನುಸುಳಿರುವ 'ಜಾರ್ವೊ' ಹಲ್ಲೆ ಆರೋಪದಲ್ಲಿ ಬಂಧನ

Update: 2021-09-03 18:28 GMT
photo: twitter

ಲೀಡ್ಸ್ : ಮೈದಾನದೊಳಗೆ ನುಸುಳುವ ಚಾಳಿ ಹೊಂದಿರುವ ಡೇನಿಯಲ್ ಜಾರ್ವಿಸ್ ಅಥವಾ 'ಜಾರ್ವೊ' ಅವರನ್ನು  ಭಾರತ ಹಾಗೂ  ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಮೂರನೇ ಬಾರಿ  ಪಂದ್ಯ ಅಡ್ಡಿಪಡಿಸಲು ಯತ್ನಿಸಿದ ನಂತರ  ಪೊಲೀಸರು ಬಂಧಿಸಿದ್ದಾರೆ.

 ಭಾರತ ಹಾಗೂ  ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ಜಾರ್ವೊ ಅವರು ಪಿಚ್ ಮೇಲೆ ಓಡಿ ಉಭಯ ತಂಡಗಳ ಆಟಗಾರರನ್ನು ಅಚ್ಚರಿಗೊಳಿಸಿದರು. ಮೂರನೇ ಟೆಸ್ಟ್‌ನಲ್ಲಿ ಎರಡು ಬಾರಿ ಮೈದಾನದೊಳಗೆ ನುಸುಳಿದ ಕಾರಣಕ್ಕೆ ಈ ಹಿಂದೆ ಯಾರ್ಕ್‌ಶೈರ್‌ ಕೌಂಟಿ ಜಾರ್ವೊರನ್ನು ನಿಷೇಧಿಸಿತ್ತು.  ಜಾರ್ವೊ ಅವರ ಈ ರೀತಿಯ ವರ್ತನೆ ಅವರಿಗೆ  ಖ್ಯಾತಿಯನ್ನು ತಂದುಕೊಟ್ಟಿರಬಹುದು. ಆದರೆ ಆ ಕೃತ್ಯವನ್ನು ಪ್ರಶ್ನಿಸಿದ ಕ್ರಿಕೆಟ್ ಪಂಡಿತರು ಮತ್ತು ಮಾಜಿ ಕ್ರಿಕೆಟಿಗರಿಗೆ ಇದು ಇಷ್ಟವಾಗಿಲ್ಲ.

ಹಲ್ಲೆಯ ಶಂಕೆಯ ಮೇಲೆ ಜಾರ್ವೊರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಇಂದು ಮೈದಾನದೊಳಗೆ ನುಸುಳಿದ್ದ  ಅವರು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಓಲೀ ಪೋಪ್‌ಗೆ ಬೌಲಿಂಗ್ ಮಾಡಿದ್ದರು. ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕ್ ನಲ್ಲಿದ್ದ ಜಾನಿ ಬೈರ್‌ಸ್ಟೋಗೆ ಡಿಕ್ಕಿ ಹೊಡೆದಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿರುವ ವೀಡಿಯೊದಲ್ಲಿ 69 ಸಂಖ್ಯೆಯ ಭಾರತ ಜರ್ಸಿಯನ್ನು ಧರಿಸಿರುವ ಡೇನಿಯಲ್ ಜಾರ್ವಿಸ್, ಓಲ್ಲಿ ಪೋಪ್‌ಗೆ ಬೌಲಿಂಗ್ ಮಾಡಲು ಓಡುತ್ತಿರುವುದನ್ನು ಕಾಣಬಹುದು. ಈ ವೇಳೆ  ಅವರು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋಗೆ ಡಿಕ್ಕಿ ಹೊಡೆದಿದ್ದರು. ಈ ಘಟನೆಯನ್ನು ಟ್ವಿಟರ್ ನಲ್ಲಿ ಖಂಡಿಸಲಾಗಿದೆ.

ಡೇನಿಯಲ್ ಜಾರ್ವಿಸ್ ಹಾಸ್ಯನಟ, ಚಲನಚಿತ್ರ ನಿರ್ಮಾಪಕ ಹಾಗೂ ಕುಚೇಷ್ಟೆಗಾರನಾಗಿ ಪ್ರಸಿದ್ದಿ ಪಡೆದಿದ್ದಾರೆ. ಪಿಚ್ ನೊಳಗೆ ನುಸುಳುವ ಅವರ ನಡೆಯು ಖಂಡಿತವಾಗಿಯೂ ಅವರಿಗೆ ಸ್ವಲ್ಪ ಖ್ಯಾತಿಯನ್ನು ತಂದಿದೆ. ಹಲವಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಗ ಅವರನ್ನು ಮೆಚ್ಚಿಕೊಂಡಿದ್ದಾರೆ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನು ಅನುಸರಿಸುವ ಮೂಲಕ ಭಾರೀ ಬೆಂಬಲ ನೀಡಿದ್ದಾರೆ. ಅವರು 100 ಕೆ ಚಂದಾದಾರರೊಂದಿಗೆ ಯುಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News