ನರೇಗಾ ವೇತನ ಪಾವತಿಸದೇ ಕಾರ್ಮಿಕರನ್ನು ಸತಾಯಿಸುತ್ತಿರುವ ಸರಕಾರ

Update: 2021-09-04 14:05 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.4: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ವೇತನ ಪಾವತಿಗೆ ಕೇಂದ್ರ ಸರಕಾರವು ಅನುಸರಿಸುತ್ತಿರುವ ವಿಧಾನವು ಹಾಸ್ಯಾಸ್ಪದವಾಗಿದ್ದು,ಇದರಿಂದಾಗಿ ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಪಡೆಯಲು ಕಾರ್ಮಿಕರು ಸುದೀರ್ಘ ಕಾಲ ಕಾಯುವಂತಾಗಿದೆ. ವಿವಿಧ ಸ್ಥಳೀಯ ಅವ್ಯವಹಾರಗಳಿಂದಾಗಿ ಅನೇಕರು ಕೊನೆಗೂ ತಮ್ಮ ದುಡಿಮೆಯ ಹಣದಿಂದ ವಂಚಿತರಾಗುತ್ತಿದ್ದಾರೆ. ನರೇಗಾ ಕೂಲಿ ಪಾವತಿ ಬಲೆಯಲ್ಲಿ ಸಿಲುಕಿ ಹೈರಾಣಾಗುತ್ತಿದ್ದಾರೆ. ಈ ವ್ಯವಸ್ಥೆಯ ಕರ್ಮಕಾಂಡವನ್ನು ಸುದ್ದಿ ಜಾಲತಾಣ ‘ದಿ ವೈರ್’ ತನ್ನ ತನಿಖಾ ವರದಿಯಲ್ಲಿ ಬಯಲಿಗೆಳೆದಿದೆ.

ಸಂಕೀರ್ಣ,ಕೇಂದ್ರೀಕೃತ ಹಣಪಾವತಿ ವ್ಯವಸ್ಥೆಯು ಜುಜುಬಿ ಕೂಲಿಗಾಗಿ ಕಷ್ಟ ಪಟ್ಟು ದುಡಿಯುವ ನರೇಗಾ ಕಾರ್ಮಿಕರ ಪಾಲಿಗೆ ಎಂದೂ ಮುಗಿಯದ ದುಃಸ್ವಪ್ನವಾಗಿ ಪರಿಣಮಿಸಿದೆ. ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಪಾವತಿಸಲಾಗುತ್ತಿರುವ ಕೂಲಿಯು ಕೃಷಿ ಕ್ಷೇತ್ರಕ್ಕಾಗಿ ಸರಕಾರವು ನಿಗದಿಗೊಳಿಸಿರುವ ಕನಿಷ್ಠ ವೇತನದ ಸಮೀಪಕ್ಕೂ ಇಲ್ಲ ಮತ್ತು ಕಾರ್ಮಿಕರು ಗೌರವಯುತ ವೇತನಕ್ಕಾಗಿ ಸುದೀರ್ಘ ಸಮಯದಿಂದ ಆಗ್ರಹಿಸುತ್ತಿದ್ದರೂ ಹಾಸ್ಯಾಸ್ಪದವಾಗಿ ಅದೇ ಕೂಲಿಯು ಮುಂದುವರಿದಿದೆ.

 ಕಾರ್ಮಿಕರಿಗೆ ಕೂಲಿಯನ್ನು ಕೇಂದ್ರೀಕೃತ ನರೇಗಾ ಪಾವತಿ ವ್ಯವಸ್ಥೆ ಮತ್ತು ಅಧಿಕೃತ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಂಐಎಸ್)ಗಳ ಮೂಲಕ ಪಾವತಿಸಲಾಗುತ್ತದೆ. ಆದರೆ ಇವೆರಡೂ ವ್ಯವಸ್ಥೆಗಳು ಸೇರಿ ಹಣಪಾವತಿಯ ಜಾಡನ್ನು ಅನುಸರಿಸುವಲ್ಲಿ ಭಾರೀ ಭ್ರಮೆಯನ್ನು ಸೃಷ್ಟಿಸುತ್ತಿವೆ. ಕೇಂದ್ರವು ನರೇಗಾ ಪಾವತಿ ವ್ಯವಸ್ಥೆಯನ್ನು ಎರಡು ಹಂತಗಳಲ್ಲಿ ವಿಭಜಿಸಿದೆ. ಸ್ಥಳೀಯ ಮಟ್ಟದಲ್ಲಿ ಪಾವತಿಗಳ ಸೃಷ್ಟಿಯ ಹಂತವನ್ನು ‘ಹಂತ ಒಂದು ’ಎಂದು ವ್ಯಾಖ್ಯಾನಿಸಲಾಗಿದೆ ಮತ್ತು ಕೇಂದ್ರ ಸರಕಾರದಿಂದ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಬಿಡುಗಡೆಯನ್ನು ‘ಹಂತ ಎರಡು ’ಎಂದು ಹೆಸರಿಸಲಾಗಿದೆ.
 
ಮೊದಲ ಹಂತವು ಸ್ಥಳೀಯ ಮಟ್ಟದಲ್ಲಿ ವಿವಿಧ ಪ್ರಕ್ರಿಯೆಗಳನ್ನು ಒಳಗೊಂಡಿದ್ದು,ಇದು ಸ್ಥಳೀಯ ಆಡಳಿತದ ಹೊಣೆಗಾರಿಕೆಯಾಗಿದೆ. ಈ ಹಂತದಲ್ಲಿ ಕಾರ್ಮಿಕರ ದೈನಂದಿನ ಹಾಜರಾತಿ ವರದಿಗಳನ್ನು (ಮಸ್ಟರ್ ರೋಲ್) ಎಂಐಎಸ್ನಲ್ಲಿ ನಮೂದಿಸಬೇಕಾಗುತ್ತದೆ ಮತ್ತು ‘ಕೂಲಿ ಪಟ್ಟಿ’ಯ ರೂಪದಲ್ಲಿ ಸಂಯೋಜಿಸಬೇಕಾಗುತ್ತದೆ. ಇಂತಹ ಹಲವಾರು ಕೂಲಿ ಪಟ್ಟಿಗಳನ್ನು ವಿವಿಧ ತಂಡಗಳಲ್ಲಿ ಪಾವತಿ ಸಂಸ್ಕರಣೆಗಾಗಿ ವಿವಿಧ ಹಣ ವರ್ಗಾವಣೆ ಆದೇಶ(ಎಫ್ಟಿಒ)ಗಳಲ್ಲಿ ಸಂಯೋಜಿಸಲಾಗುತ್ತದೆ. ನಂತರ ಇಬ್ಬರು ಅಧಿಕೃತ ವ್ಯಕ್ತಿಗಳು (ಪಂಚಾಯತ್ ಕಾರ್ಯದರ್ಶಿ ಮತ್ತು ಬಿಡಿಒ) ಈ ಎಫ್ಟಿಒಗಳಿಗೆ ಡಿಜಿಟಲ್ ಸಹಿಗಳನ್ನು ಮಾಡುತ್ತಾರೆ ಮತ್ತು ಅಲ್ಲಿಗೆ ಮೊದಲ ಹಂತ ಅಂತ್ಯಗೊಂಡು ಎರಡನೇ ಹಂತ ಆರಂಭಗೊಳ್ಳುತ್ತದೆ. 

ಈ ಹಂತದಲ್ಲಿ ಕೇಂದ್ರ ಸರಕಾರವು ರಾಷ್ಟ್ರಿಯ ವಿದ್ಯುನ್ಮಾನ ಹಣಕಾಸು ನಿರ್ವಹಣೆ ವ್ಯವಸ್ಥೆಯನ್ನು ಬಳಸಿ ಒಂದೇ ಬ್ಯಾಂಕಿನ ಮೂಲಕ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಹಣವನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಮಸ್ಟರ್ ರೋಲ್ನ ಕೊನೆಯ ದಿನಾಂಕದಿಂದ 15 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ ಮತ್ತು ಕಾನೂನಿನಂತೆ ಈ ಅವಧಿಯೊಳಗೆ ಹಣ ಕಾರ್ಮಿಕರ ಕೈಗೆ ಸೇರಬೇಕು.
  
ಒಟ್ಟು ಹಣ ಪಾವತಿ ಆದೇಶಗಳನ್ನು 15 ದಿನಗಳಲ್ಲಿ ಸೃಷ್ಟಿಸಲಾಗಿದೆ ಎಂದು ತೋರಿಸಲು ಕೇಂದ್ರವು ತನ್ನ ಎಂಐಎಸ್ ನಲ್ಲಿ ವ್ಯವಸ್ಥೆಯೊಂದನ್ನು ಅಳವಡಿಸಿದೆ. ಆದರೆ ಪ್ರಾಯೋಗಿಕವಾಗಿ ಮೊದಲ ಹಂತವು ಮಾತ್ರ 15 ದಿನಗಳಲ್ಲಿ ಪೂರ್ಣಗೊಂಡಿರುತ್ತದೆ. ಆದರೆ ಕಾಯ್ದೆಯಂತೆ 15 ದಿನಗಳಲ್ಲಿ ಹಣ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಇದು ಪ್ರಜೆಗಳನ್ನು ದಾರಿ ತಪ್ಪಿಸಲು ಮತ್ತು ಸಕಾಲದಲ್ಲಿ ಪಾವತಿಗಳನ್ನು ಮಾಡಲಾಗಿದೆ ಎಂಬ ಭ್ರಮೆಯನ್ನು ಸೃಷಿಸಲು ಜಾಣ ನಡೆಯಾಗಿದೆ,ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

2018ರಲ್ಲಿ ಪಾವತಿಗಳಲ್ಲಿ ವಿಳಂಬದ ವಿವರಗಳನ್ನು ನರೇಗಾ ವೆಬ್ಸೈಟ್ನಲ್ಲಿ ತೋರಿಸುವಂತೆ ಮತ್ತು ಅದಕ್ಕನುಗುಣವಾಗಿ ಕಾರ್ಮಿಕರಿಗೆ ವಿಳಂಬಕ್ಕಾಗಿ ಪರಿಹಾರವನ್ನು ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ಆದೇಶಿಸಿತ್ತು,ಪರಿಣಾಮವಾಗಿ ಆಗ ವೆಬ್ಸೈಟ್ ನಲ್ಲಿ ಹಂತ ಎರಡರ ಟ್ರಾಕಿಂಗ್ (ಜಾಡು ಹಿಡಿಯುವಿಕೆ) ವರದಿ ಕಾಣಿಸಿಕೊಂಡಿತ್ತು. ಆದರೆ ವೆಬ್ಸೈಟ್ ನಲ್ಲಿಯ ಈಗಿನ ವರದಿಗಳು 15 ದಿನಗಳಿಗಿಂತ ಹೆಚ್ಚು ವಿಳಂಬಗೊಂಡ ವಹಿವಾಟುಗಳ ಒಟ್ಟು ಸಂಖ್ಯೆಯನ್ನು ಅಥವಾ ಇಂತಹ ವಿಳಂಬಗಳಲ್ಲಿ ಒಳಗೊಂಡ ಒಟ್ಟು ಹಣವನ್ನು ತೋರಿಸುವುದಿಲ್ಲ. ಇದು ನ್ಯಾಯಾಲಯದ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಪಾವತಿಗಳಲ್ಲಿ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹಾಲಿ ವಿಳಂಬಗಳ ನಿಜವಾದ ವ್ಯಾಪ್ತಿಯನ್ನು ತೋರಿಸಲು ವ್ಯವಸ್ಥೆಗಳನ್ನು ಅಳವಡಿಸುವಲ್ಲಿ ಸರಕಾರವು ಪಾರದರ್ಶಕವಾಗಿ ಕಾರ್ಯಾಚರಿಸಬೇಕು,ಆದರೆ ಜನರನ್ನು ಗೊಂದಲದಲ್ಲಿ ಕೆಡವಲು ಅತ್ಯಾಧುನಿಕ ಎಂಐಎಸ್ ಮೂಲಕ ಅದು ಅನ್ಯಾಯದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದೆ. ಹೆಚ್ಚಿನ ಕಾರ್ಮಿಕರ ಬಳಿ ಸ್ಮಾರ್ಟ್ ಫೋನ್ ಗಳಿಲ್ಲ,ಅಂತರ್ಜಾಲ ಸೌಲಭ್ಯದಿಂದ ದೂರವಾಗಿದ್ದಾರೆ ಮತ್ತು ನರೇಗಾ ವೆಬ್ಸೈಟ್ ಪ್ರವೇಶವೂ ಅವರಿಗೆ ನಿಲುಕುವುದಿಲ್ಲ. ಹೀಗಾಗಿ ತಮ್ಮ ಕೂಲಿ ಪಾವತಿಗೆ ಇಷ್ಟೊಂದು ವಿಳಂಬಕ್ಕೆ ಕಾರಣವೇನು ಮತ್ತು ತಮ್ಮ ಹಣ ಎಲ್ಲಿ ಸಿಕ್ಕಿಹಾಕಿಕೊಂಡಿದೆ ಎನ್ನುವುದು ಅವರಿಗೆಂದೂ ಸ್ಪಷ್ಟವಾಗುವುದಿಲ್ಲ.

ಆಧಾರ್ ಆಧರಿತ ವ್ಯವಸ್ಥೆಯ ಮೂಲಕ ಪಾವತಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂಬ ಕೇಂದ್ರದ ಹೇಳಿಕೆಯು ಅಪ್ಪಟ ಸುಳ್ಳಾಗಿದೆ. ಇದಕ್ಕೆ ವಿರುದ್ಧವಾಗಿ ನರೇಗಾ ಪಾವತಿ ವ್ಯವಸ್ಥೆಯಲ್ಲಿ ಆಧಾರ್ ಅಳವಡಿಕೆಯು ಹಾನಿಕರವಾಗಿದೆ ಮತ್ತು ಕಾರ್ಮಿಕರಿಗೆ ಸಕಾಲದಲ್ಲಿ ಪಾವತಿಗೆ ಹಲವಾರು ಸವಾಲುಗಳನ್ನು ಒಡ್ಡುತ್ತದೆ ಎನ್ನುವುದು ಸಾಬೀತಾಗಿದೆ. ಆಧಾರ್-ಬ್ಯಾಂಕ್ ಖಾತೆ ಜೋಡಣೆಯಲ್ಲಿನ ತಪ್ಪುಗಳಿಂದಾಗಿ ಹಣ ಸಂಬಂಧಿತ ಕಾರ್ಮಿಕನ ಖಾತೆಗೆ ಸೇರದೆ ಬೇರೆ ಯಾರದೋ ಖಾತೆಗೆ ಜಮೆಯಾಗುತ್ತಿದೆ ಮತ್ತು ಹೆಚ್ಚಿನ ವಹಿವಾಟುಗಳು ‘ನಿಷ್ಕ್ರಿಯ ಆಧಾರ್ ’ಎಂದು ದೋಷವನ್ನು ಉಲ್ಲೇಖಿಸುವ ಮೂಲಕ ತಿರಸೃತಗೊಳ್ಳುತ್ತಿವೆ. ಇದಲ್ಲದೆ ಹಲವಾರು ರಾಜ್ಯಗಳಲ್ಲಿ ಆಧಾರ್ನ ಅನುಪಸ್ಥಿತಿಯಿಂದಾಗಿ ಅನೇಕ ನಿಜವಾದ ಜಾಬ್ ಕಾರ್ಡ್ ಗಳು/ಕಾರ್ಮಿಕರ ಹೆಸರುಗಳು ನರೇಗಾ ಪಟ್ಟಿಯಿಂದ ಅಳಿಸಲ್ಪಟ್ಟಿವೆ. ಸ್ಥಳೀಯವಾಗಿ ಜಾಬ್ ಕಾರ್ಡ್ ಗಳು ದುರುಪಯೋಗವಾಗುತ್ತಿರುವುದೂ ಬೆಳಕಿಗೆ ಬಂದಿದೆ.
   
ನರೇಗಾ ಗೋಜಲುಗಳು ಸಾಲದೆಂಬಂತೆ ಸರಕಾರವು ಇತ್ತೀಚಿಗೆ ಜಾತಿ ಆಧಾರಿತ ಪಾವತಿ ಪ್ರಕ್ರಿಯೆಯನ್ನು ಪರಿಚಯಿಸಿದೆ. ಇದರಲ್ಲಿ ಎಸ್ಸಿ,ಎಸ್ಟಿ ಮತ್ತು ಇತರರು;ಹೀಗೆ ಮೂರು ವಿವಿಧ ಜಾತಿ ವರ್ಗಗಳಲ್ಲಿ ಎಫ್ಟಿಒಗಳನ್ನು ವಿಂಗಡಿಸಲಾಗುತ್ತದೆ ಮತ್ತು ಇವುಗಳನ್ನು ಪ್ರತ್ಯೇಕವಾಗಿ ಸಂಸ್ಕರಿಸಲಾಗುತ್ತದೆ. ಈ ವ್ಯವಸ್ಥೆಯು ಅನಗತ್ಯವಾಗಿತ್ತು ಮಾತ್ರವಲ್ಲ,ಜಟಿಲತೆಗಳನ್ನು ಮತ್ತು ವಿಳಂಬಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕೇಂದ್ರ ಸರಕಾರವು ಪಾವತಿಗಳನ್ನು ಮಂಜೂರು ಮಾಡುವಲ್ಲಿ ಮತ್ತು ಸಂಸ್ಕರಿಸುವಲ್ಲಿ ಗ್ರಾಮ ಪಂಚಾಯತಿಗಳಿಗೆ ಪ್ರಮುಖ ಪಾತ್ರವಿರುವ ಸರಳ ಮತ್ತು ವಿಕೇಂದ್ರೀಕೃತ ವ್ಯವಸ್ಥೆಗಳನ್ನು ರೂಪಿಸಬೇಕು. ಇದು ನರೇಗಾ ಯೋಜನೆಯಲ್ಲಿ ಹೆಚ್ಚಿನ ಉತ್ತರದಾಯಿತ್ವವನ್ನು ಉತ್ತೇಜಿಸುತ್ತದೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳನ್ನೂ ಬಲಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News