9/11 ದಾಳಿಯ ರಹಸ್ಯ ದಾಖಲೆಗಳ ಬಿಡುಗಡೆಗೆ ಬೈಡೆನ್ ಆದೇಶ: 6 ತಿಂಗಳುಗಳ ಗಡುವು
ವಾಶಿಂಗ್ಟನ್,ಸೆ.4: 2001ರ ಸೆಪ್ಟೆಂಬರ್ 11ರಂದು ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಅಮೆರಿಕ ಸರಕಾರವು ನಡೆಸಿದ ತನಿಖೆಯ ಕುರಿತಾದ, ರಹಸ್ಯ ದಾಖಲೆಗಳನ್ನು ಮುಂದಿನ ಆರು ತಿಂಗಳುಗಳೊಳೆಗೆ ಬಿಡುಗಡೆಗೊಳಿಸಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಆದೇಶಿಸಿದ್ದಾರೆ.
9/11 ಭಯೋತ್ಪಾದಕ ದಾಳಿಯ ಕುರಿತಾದ ರಹಸ್ಯ ದಾಖಲೆಗಳನ್ನು ಬಿಡುಗಡೆಗೊಳಿಸಬೇಕೆಂದು, ದಾಳಿಯಲ್ಲಿ ಮೃತಪಟ್ಟ ಸುಮಾರು 3 ಸಾವಿರ ಮಂದಿಯ ಪೈಕಿ ಕೆಲವು ಕುಟುಂಬಗಳು ಒತ್ತಡಕ್ಕೆ ಮಣಿದಿರುವ ಬೈಡೆನ್ ಈ ಆದೇಶ ಹೊರಡಿಸಿದ್ದಾರೆ.
ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆ ಎಫ್ಬಿಐ ಸೆ.11ರ ದಾಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಾಮರ್ಶಿಸುವಂತೆ ನ್ಯಾಯಾಂಗ ಇಲಾಖೆ ಹಾಗೂ ಇತರ ಸಂಬಂಧಪಟ್ಟ ಸಂಸ್ಥೆಗಳಿಗೆ ನಿರ್ದೇಶನ ನೀಡುವ ವಿಶೇಷ ಆದೇಶಕ್ಕೆ ಸಹಿಹಾಕಿದ್ದೇನೆ ’’ ಎಂದು ಬೈಡೆನ್ ಶುಕ್ರವಾರ ತಿಳಿಸಿದ್ದಾರೆ. ಮುಂದಿನ ಆರು ತಿಂಗಳುಗಳೊಳಗೆ 9/11 ದಾಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು’’ ಎಂದು ಬೈಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಇತಿಹಾಸದಲ್ಲೇ ಅತ್ಯಂತ ಭೀಕರ ವಾದ ಈ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 2977 ಅಮಾಯಕ ವ್ಯಕ್ತಿಗಳ ಕುಟುಂಬಿಕರು ಹಾಗೂ ಪ್ರೀತಿಪಾತ್ರರು ಅನುಭವಿಸಿರುವ ಯಾತನೆಯನನು ನಾವು ಎಂದೂ ಮರೆಯಬಾರದು’’ ಎಂದು ಬೈಡೆನ್ ತಿಳಿಸಿದ್ದಾರೆ.