ರೈತ ಮಕ್ಕಳಿಗೆ ಶಿಷ್ಯವೇತನ ಯೋಜನೆ 'ಮುಖ್ಯಮಂತ್ರಿ ವಿದ್ಯಾನಿಧಿ'ಗೆ ಚಾಲನೆ

Update: 2021-09-05 06:31 GMT

ಬೆಂಗಳೂರು, ಸೆ.5: ರೈತ ಮಕ್ಕಳಿಗೆ ಶಿಷ್ಯವೇತನ ಯೋಜನೆಯಾದ 'ಮುಖ್ಯಮಂತ್ರಿ ವಿದ್ಯಾನಿಧಿ' ಲೋಕಾರ್ಪಣೆ ಕಾರ್ಯಕ್ರಮ ಇಂದು ಬೆಳಗ್ಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ಥೋಮರ್ ವಿದ್ಯಾರ್ಥಿಗಳ ಖಾತೆಗೆ ವಿದ್ಯಾನಿಧಿ ವರ್ಗಾವಣೆಗೆ ಚಾಲನೆ ನೀಡಿದರು.

ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿ ಮಾತನಾಡಿದ ಕೇಂದ್ರ ಕೃಷಿ ಕಲ್ಯಾಣ ರೈತ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ದೇಶದ ಯಾವುದೇ ಯೋಜನೆಯಾಗಲೀ ಅದರ ರೂವಾರಿ ಕರ್ನಾಟಕ. ಕಿಸಾನ್ ಬಜೆಟ್ ಮಂಡಿಸಿದ ಮೊದಲ ಹೆಗ್ಗಳಿಕೆ ಮಾಜಿ ಸಿಎಂ ಯಡಿಯೂರಪ್ಪರದ್ದಾಗಿದೆ. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪ್ರತಿವರ್ಷ ಸಹಾಯಧನ‌ ವಿದ್ಯಾರ್ಥಿವೇತನ ನೀಡುವ ದೇಶದ ಮೊದಲ ಯೋಜನೆ ವಿದ್ಯಾನಿಧಿ ಎಂದು ಶ್ಲಾಘಿಸಿದ್ದಾರೆ.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂತುಷ್ಟ ರೈತನಿಂದ ಸಮೃದ್ಧ ಭಾರತ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರವು ಕಟಿಬದ್ಧವಾಗಿ ಶ್ರಮಿಸುತ್ತಿದೆ. ಬೆಳೆಹಾನಿ, ಬರ, ಪ್ರವಾಹ ಇದೆಲ್ಲದರ ಸಂಘರ್ಷದ ನಡುವೆ ರೈತ ಬದುಕಬೇಕಾಗುವಂತಹ ಸ್ಥಿತಿ ತಪ್ಪಿಸಲು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಮೊದಲ ದಿನವೇ 'ವಿದ್ಯಾನಿಧಿ' ರೈತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಯೋಜನೆ ಘೋಷಿಸಿದ್ದಾರೆ. 18-20 ಲಕ್ಷ ರೈತ ವಿದ್ಯಾರ್ಥಿಗಳು ಈ ವಿದ್ಯಾನಿಧಿ ಯೋಜನೆಯ ಫಲ ಪಡೆಯಲಿದ್ದಾರೆ ಎಂದರು.

 ಸಚಿವರಾದ ಪ್ರಭು ಬಿ. ಚವ್ಹಾಣ್, ಎನ್. ಮುನಿರತ್ನ, ಬಿ.ಸಿ.ನಾಗೇಶ್, ಸಾವಯವ ಕೃಷಿ ಕುರಿತ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಎ.ಎಸ್.ಆನಂದ್, ಸಂಸದರು, ಶಾಸಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News