ಒಂದೇ ರೀತಿಯ ಆಹಾರ ಪದಾರ್ಥಗಳಿಗೆ ಬೇರೆ ಬೇರೆ ಜಿಎಸ್ಟಿ ದರ: 4,600ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ

Update: 2021-09-06 13:59 GMT

ಹೊಸದಿಲ್ಲಿ,ಸೆ.6: ನಾಲ್ಕು ವರ್ಷಗಳ ಹಿಂದೆ ಜಿಎಸ್ಟಿ ಜಾರಿಗೊಂಡಾಗಿನಿಂದ ಒಂದೇ ರೀತಿಯ ಹಲವಾರು ವಸ್ತುಗಳಿಗೆ ವಿಭಿನ್ನ ದರಗಳಲ್ಲಿ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ತೆರಿಗೆಗಳ ಸ್ಲಾಬ್ ಗಳು ಅಥವಾ ಶ್ರೇಣಿಗಳನ್ನು ಕಡಿಮೆ ಮಾಡುವವರೆಗೂ ಇದೇ ಅಧ್ವಾನ ಮುಂದುವರಿಯುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು. 

ಜಿಎಸ್ಟಿ ಮಂಡಳಿಯ ಈ ವಿಲಕ್ಷಣ ನಿಲುವು ಹಲವಾರು ವಿವಾದಗಳನ್ನು ಸೃಷ್ಟಿಸಿದ್ದು,ಈಗಾಗಲೇ 4,600ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿವೆ. ರೋಟಿ ಮತ್ತು ಮಲಬಾರ್ ಪರೋಟ ಅಥವಾ ಹಪ್ಪಳ ಮತ್ತು ಫ್ರಾಯಮ್ ನಡುವೆ ಹೆಚ್ಚಿನ ಯಾವ ವ್ಯತ್ಯಾಸವಿದೆ? ಇಡ್ಲಿ-ದೋಸೆ ಹಿಟ್ಟಿನ ದ್ರವರೂಪ ಮತ್ತು ಹುಡಿಯ ರೂಪದಲ್ಲಿ ಏನು ವ್ಯತ್ಯಾಸ? ಇವೆಲ್ಲವೂ ಅಂತಿಮವಾಗಿ ನಮ್ಮ ಹೊಟ್ಟೆಯನ್ನು ಸೇರುವ ಆಹಾರ ಪದಾರ್ಥಗಳಲ್ಲವೇ? 2017,ಜುಲೈನಲ್ಲಿ ಜಿಎಸ್ಟಿ ಜಾರಿಗೊಂಡಾಗಿನಿಂದಲೂ ಈ ಪ್ರಶ್ನೆಗಳು ತಯಾರಕರು,ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಕಾಡುತ್ತಲೇ ಇವೆ.

ಜಿಎಸ್ಟಿಯಡಿ ವಿವಿಧ ಸ್ಲಾಬ್ಗಳನ್ನು ಸರಳ ತೆರಿಗೆ ವ್ಯವಸ್ಥೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ತಮ್ಮ ಉತ್ಪನ್ನಗಳನ್ನು ಕಡಿಮೆ ತೆರಿಗೆ ಸ್ಲಾಬ್ ನಡಿ ವರ್ಗೀಕರಿಸುವ ಕಂಪನಿಗಳ ನಿರಂತರ ಪ್ರಯತ್ನ ಮತ್ತು ಅವುಗಳ ಉತ್ಪನ್ನಗಳಿಗೆ ಹೆಚ್ಚಿನ ದರಗಳಲ್ಲಿ ತೆರಿಗೆಯನ್ನು ವಿಧಿಸುವ ಅಧಿಕಾರಿಗಳ ಪ್ರತಿಪಾದನೆ ಇವೆಲ್ಲ ವಿವಿಧ ವ್ಯಾಖ್ಯಾನಗಳನ್ನು ಹುಟ್ಟುಹಾಕಿವೆ. ಪರಿಣಾಮವಾಗಿ ಸಾಕಷ್ಟು ಜಿಎಸ್ಟಿ ವಿವಾದಗಳು ಸೃಷ್ಟಿಯಾಗಿವೆ.

ಜಿಎಸ್ಟಿ ಮಂಡಳಿಯು ಶೇ.0,ಶೇ.5,ಶೇ.12,ಶೇ.18,ಶೇ.28 ಮತ್ತು ಶೇ.28 ಪ್ಲಸ್ ಸೆಸ್ ನ ಈಗಿನ ಆರು ತೆರಿಗೆ ಶ್ರೇಣಿಗಳನ್ನು ಕಡಿಮೆ ಮಾಡದಿದ್ದರೆ ಈ ಗೊಂದಲ ಮುಂದುವರಿಯತ್ತದೆ ಎನ್ನುತ್ತಾರೆ ತಜ್ಞರು. ವಿವಿಧ ತೆರಿಗೆ ದರಗಳು ಮತ್ತು ವಿನಾಯಿತಿಗಳಿಂದಾಗಿ ಜಿಎಸ್ಟಿ ವ್ಯವಸ್ಥೆಯಲ್ಲಿ ವರ್ಗೀಕರಣ ವಿವಾದಗಳು ಹುಟ್ಟಿಕೊಂಡಿವೆ ಎಂದು ಹೇಳಿದ ಭಾರತದಲ್ಲಿ ಡಲೊಯ್ಟಿನ ಪಾಲುದಾರ ಎಂ.ಎಸ್.ಮಣಿ ಅವರು,ಜಿಎಸ್ಟಿ ಉತ್ಪನ್ನದ ಬೆಲೆಯಲ್ಲಿ ಸೇರಿಸಲಾಗಿರುವ ಪರೋಕ್ಷ ತೆರಿಗೆಯಾಗಿರುವುದರಿಂದ ಉದ್ಯಮಗಳು ವಿನಾಯಿತಿಯ/ಕಡಿಮೆ ತೆರಿಗೆ ಸ್ಲಾಬ್ನಡಿ ವರ್ಗೀಕರಣಗೊಳ್ಳಲು ಬಯಸುತ್ತವೆ. ತೆರಿಗೆ ವರ್ಗೀಕರಣ/ತೆರಿಗೆ ದರ ಇತ್ಯಾದಿಗಳಲ್ಲಿ ಬದಲಾವಣೆಗಳಿಂದ ನುಣುಚಲು ಉತ್ಪನ್ನಗಳಲ್ಲಿ ನವೀನತೆಯನ್ನು ತರುವುದು ಮುಂದುವರಿಯುವುದರಿಂದ ಯಾವುದೇ ಸಂಭಾವ್ಯ ಅಸಂಗತತೆಗಳನ್ನು ತ್ವರಿತವಾಗಿ ಪರಿಹರಿಸಲು ಮಾರ್ಗಸೂಚಿ ಚೌಕಟ್ಟನ್ನು ರೂಪಿಸುವುದು ಅಗತ್ಯವಾಗಿದೆ. 

ಮುಂದಿನ ಕೆಲವು ವರ್ಷಗಳಲ್ಲಿ ಜಿಎಸ್ಟಿ ಸ್ಲಾಬ್ಗಳು ಕ್ರಮೇಣ ಕಡಿಮೆಯಾಗುತ್ತವೆ ಮತ್ತು ಹಾಲಿ ಉತ್ಪನ್ನಗಳ ಮೇಲೆ ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ. ಹೀಗಾಗಿ ಕ್ರಮೇಣ ವಿವಾದಗಳು ಕಡಿಮೆಯಾಗಲಿವೆ ಎಂದರು. ಜಿಎಸ್ಟಿ ದರಗಳನ್ನು ಪರಿಷ್ಕರಿಸುವ ಚಿಂತನೆ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದು,ಕನಿಷ್ಠ ಶೇ.12 ಮತ್ತು ಶೇ.18ರ ಶ್ರೇಣಿಗಳನ್ನು ವಿಲೀನಗೊಳಿಸುವ ಪ್ರಸ್ತಾವವಿದೆ.ಆದರೆ ಜಿಎಸ್ಟಿ ಮಂಡಳಿಯು ಇನ್ನಷ್ಟೇ ಈ ಪ್ರಸ್ತಾವವನ್ನು ಕೈಗೆತ್ತಿಕೊಳ್ಳಬೇಕಿದೆ.

ಸರಕುಗಳ ಎಚ್ಎಸ್ಎನ್ ವರ್ಗೀಕರಣ(ಆರು ಅಂಕಿಗಳ ಕೋಡ್)ವನ್ನು ಆಧರಿಸಿ ಅವುಗಳಿಗೆ ಜಿಎಸ್ಟಿ ದರಗಳನ್ನು ವಿಧಿಸಲಾಗುತ್ತದೆ. ಆದರೆ ವಿವಿಧ ಗುಣಲಕ್ಷಣಗಳನ್ನುಹೊಂದಿರುವ ಹಲವಾರು ಉತ್ಪನ್ನಗಳಿರುವುದರಿಂದ ಎಲ್ಲವನ್ನೂ ವರ್ಗೀಕರಿಸಲು ಮತ್ತು ಯಾವ ದರವನ್ನು ವಿಧಿಸಬೇಕು ಎನ್ನುವುದನ್ನು ನಿರ್ಧರಿಸುವುದು ಕಷ್ಟವಾಗುತ್ತದೆ ಎಂದು ನಾಂಗಿಯಾ ಆ್ಯಂಡರ್ಸನ್ ಎಲ್ಎಲ್ಪಿಯ ನಿರ್ದೇಶಕಿ(ಪರೋಕ್ಷ ತೆರಿಗೆ) ತನುಶ್ರೀ ರಾಯ್ ಹೇಳಿದರು.

ವಿವಿಧ ನ್ಯಾಯಾಲಯಗಳು ವಿವಿಧ ಉತ್ಪನ್ನಗಳನ್ನು ಹೇಗೆ ವ್ಯಾಖ್ಯಾನಿಸಿವೆ ಎನ್ನುವುದನ್ನು ತೆರಿಗೆ ದರಗಳು ಆಧರಿಸಿರುವುದು ಅಚ್ಚರಿಯೇನಲ್ಲ. ಉದಾಹರಣೆಗೆ ಇಡ್ಲಿ-ದೋಸಾ ದ್ರವರೂಪದ ಮಿಶ್ರಣ ಮತ್ತು ಒಣ ಹುಡಿ ಇವುಗಳ ಅಂತಿಮ ಉತ್ಪನ್ನ ಒಂದೇ ಆಗಿದ್ದರೂ ದ್ರವರೂಪದ ಮಿಶ್ರಣಕ್ಕೆ ಶೇ.5 ಮತ್ತು ಒಣ ಹುಡಿಗೆ ಶೇ.18 ಜಿಎಸ್ಟಿ ವಿಧಿಸಲಾಗಿದೆ. 

ಹಪ್ಪಳವನ್ನೇ ಹೋಲುವ ಅದೇ ರುಚಿಯನ್ನು ನೀಡುವ ಫ್ರಾಯಮ್ಗಳಿಗೆ ಶೇ.18 ಜಿಎಸ್ಟಿ ವಿಧಿಸಬೇಕೇ ಅಥವಾ ಹಪ್ಪಳದಂತೆ ವಿನಾಯಿತಿ ನೀಡಬೇಕೇ ಎನ್ನುವ ಬಗ್ಗೆ ಈಗಲೂ ಯಾವುದೇ ಸ್ಪಷ್ಟತೆಯಿಲ್ಲ.ಮೊನ್ನೆ ಮೊನ್ನೆಯಷ್ಟೇ ಹಪ್ಪಳದ ಆಕಾರ ಹೇಗಿದ್ದರೂ ಅವು ಜಿಎಸ್ಟಿಯಿಂದ ವಿನಾಯಿತಿಯನ್ನು ಹೊಂದಿವೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ವಿವಾದವೊಂದಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದೆ. ಮಲಬಾರ್ ಪರೋಟಾ,ಸುವಾಸಿತ ಹಾಲು ಮತ್ತು ಪಾಪ್ ಕಾರ್ನ್‌ ನಂತಹ ಉತ್ಪನ್ನಗಳ ಮೇಲಿನ ತೆರಿಗೆ ದರಗಳ ಬಗ್ಗಯೂ ಇಂತಹುದೇ ಗೊಂದಲಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News