ನಾಲ್ಕನೇ ಟೆಸ್ಟ್: ಭಾರತಕ್ಕೆ ಭರ್ಜರಿ ಜಯ, ಸರಣಿಯಲ್ಲಿ 2-1 ಮುನ್ನಡೆ

Update: 2021-09-06 17:38 GMT

ದಿ ಓವಲ್, ಆ.6: ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಭಾರತವು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು 157 ರನ್ ಗಳ  ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಸೆಪ್ಟಂಬರ್ 10ರಿಂದ ಮ್ಯಾಂಚೆಸ್ಟರ್ ನಲ್ಲಿ ಆರಂಭವಾಗಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಹೆಚ್ಚು ಕುತೂಹಲ ಕೆರಳಿಸಿದೆ. ಭಾರತಕ್ಕೆ ಈ ಪಂದ್ಯವನ್ನು ಡ್ರಾಗೊಳಿಸಿದರೆ ಸರಣಿ ಒಲಿಯಲಿದೆ. ಇಂಗ್ಲೆಂಡ್ ಸರಣಿ ಸಮಬಲಗೊಳಿಸಲು ಈ ಪಂದ್ಯವನ್ನು ಗೆಲ್ಲಬೇಕಾಗುತ್ತದೆ.

ಗೆಲ್ಲಲು 368 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 92.2 ಓವರ್ ಗಳಲ್ಲಿ 210 ರನ್ ಗಳಿಸಿ ಆಲೌಟಾಯಿತು.

ಭಾರತದ ಪರ ಉಮೇಶ್ ಯಾದವ್  3 ವಿಕೆಟ್ ಪಡೆದರೆ ,ಬುಮ್ರಾ, ಶಾರ್ದೂಲ್ ಠಾಕೂರ್  ಹಾಗೂ ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಗಳನ್ನು ಪಡೆದರು.

1971ರ ಬಳಿಕ ಮೊದಲ ಬಾರಿ ಲಂಡನ್ ನ ದಿ ಓವಲ್ ನಲ್ಲಿ ಭಾರತವು ಜಯಭೇರಿ ಬಾರಿಸಿದೆ. 1984ರ ಬಳಿಕ ಮೊದಲ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೀಗ ಇಂಗ್ಲೆಂಡ್ ನೆಲದಲ್ಲಿ 14 ವರ್ಷಗಳ ಬಳಿಕ ಸರಣಿ ಜಯಿಸುವತ್ತ ಕೊಹ್ಲಿ ಪಡೆ ಚಿತ್ತಹರಿಸಿದೆ.

ಐದನೇ ಹಾಗೂ ಅಂತಿಮ ದಿನದಾಟವಾದ ಸೋಮವಾರ ಆತಿಥೇಯ ಇಂಗ್ಲೆಂಡ್ ತಂಡವು ವಿಕೆಟ್ ನಷ್ಟವಿಲ್ಲದೆ 77 ರನ್ ನಿಂದ ದ್ವಿತೀಯ ಇನಿಂಗ್ಸ್ ಆರಂಭಿಸಿತು. ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋರಿ ಬರ್ನ್ಸ್ (50) ಹಾಗೂ ಹಸೀಬ್ ಹಮೀದ್(63) ಅರ್ಧಶತಕ ಪೂರೈಸಿದರು. ಭೋಜನ ವಿರಾಮ ವೇಳೆಗೆ ರೋರಿ ಬರ್ನ್ಸ್ ಹಾಗೂ ಡೇವಿಡ್ ಮಲಾನ್(5) ವಿಕೆಟ್ ಒಪ್ಪಿಸಿದರು. ಭೋಜನ ವಿರಾಮದ ಬಳಿಕ ಭಾರತವು ಕ್ಷಿಪ್ರವಾಗಿ 4 ವಿಕೆಟ್ ಗಳನ್ನು ಉರುಳಿಸಿ ಮೇಲುಗೈಸಾಧಿಸಿತು.

ಮಲಾನ್ ರನೌಟಾದರು. ಒಲೀ ಪೋಪ್(2) ಹಾಗೂ ಜಾನಿ ಬೈರ್ ಸ್ಟೋವ್(0)ವಿಕೆಟ್ ಗಳನ್ನು ಪಡೆದ ವೇಗದ ಬೌಲರ್ ಬುಮ್ರಾ ಇಂಗ್ಲೆಂಡ್ ಗೆ ಭಾರೀ ಆಘಾತ ನೀಡಿದರು. ಮೊಯಿನ್ ಅಲಿ ಖಾತೆ ತೆರೆಯದಂತೆ ರವೀಂದ್ರ ಜಡೇಜ ನೋಡಿಕೊಂಡರು. ನಾಯಕ ಜೋ ರೂಟ್(36) ಒಂದಷ್ಟು ಪ್ರತಿರೋಧ ತೋರಿದರು. ಅವರಿಗೆ ಶಾರ್ದೂಲ್ ಠಾಕೂರ್ ಪೆವಿಲಿಯನ್ ಹಾದಿ ತೋರಿಸಿದರು. ಉಮೇಶ್ ಯಾದವ್ ಅವರು ಕ್ರಿಸ್ ವೋಕ್ಸ್ ರನ್ನು 18 ರನ್ ಗೆ ನಿಯಂತ್ರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News